Advertisement

ಮಂಜು ಹೂವಿನ ಸುಖ, ಹೊಂಜಿನ ದುಃಖ

04:50 AM Nov 13, 2017 | |

ಮೊನ್ನೆ ಮೊನ್ನೆ ಬೆಳಗ್ಗೆ ಬಾಲ್ಕನಿಯ ಬಾಗಿಲು ತೆರೆದಾಗ ದಟ್ಟ ಮಂಜಿನ ಮಬ್ಬು ಮುಸುಕು ಆವರಿಸಿಕೊಂಡಿತ್ತು. ಬಣ್ಣಗೆಟ್ಟ ಆಕಾಶದಲ್ಲಿ ಪುಟ್ಟ ಬೆಳ್ಳಿತಟ್ಟೆಯಂಥ ತಣ್ಣಗಿನ ಸೂರ್ಯ!  ನೋಡಿ ಅರೆ… ಈಗಿನ್ನೂ ಚಳಿಗಾಲ ಕಣ್ಣು ಪಿಳುಕಿಸುತ್ತಿದೆ. ಒಂದು ತೆಳುವಾದ ಶಾಲು ಹೊದೆವಷ್ಟೂ ಚಳಿಯಿಲ್ಲ!  ಇಷ್ಟು ಬೇಗ ಮಂಜು ಮುಸುಕಿ­ತೇಕೆ ಎಂದುಕೊಳ್ಳುತ್ತಲೇ ನಿತ್ಯದಂತೆ ತಯಾರಾಗಿ ಬಸ್‌ ಸ್ಟಾಪಿನತ್ತ ಓಡಿದೆ. ಹೊರಗೂ ಒಂಥರಾ ಹೊಗೆ ಮಂಜು. ಬಸ್‌, ಕಾರು ವಾಹನಗಳು ಹೆಡ್‌ಲೈಟ್‌ ಹೊತ್ತಿಸಿಕೊಂಡು ವಿಕಾರವಾಗಿ ಸದ್ದು ಮಾಡುತ್ತ ಸಾಗುತ್ತಿದ್ದವು. ಯಾಕೋ ಸಣ್ಣಗೆ ಕಣ್ಣುರಿಯು ತ್ತಿದ್ದವು. ಬಹುಶಃ ನನಗೆ ಈ ಒಣ ಹವೆಯಿಂದಾಗಿ ಕಣ್ಣುರಿಯು ತ್ತವೇನೋ ಅಂದುಕೊಂಡು ಸುಮ್ಮನಾದೆ.

Advertisement

ಸಂಜೆ ಮನೆ ತಲುಪುವ ಹೊತ್ತಿಗೆ ಟಿವಿಗಳಲ್ಲಿ ದಿಲ್ಲಿ ಮತ್ತು ಸುತ್ತಲಿನ ಹರಿಯಾಣಾ, ನೊಯಿಡಾಗಳನ್ನು ಆವರಿಸಿಕೊಂಡ ಹೊಗೆ ಮಂಜು ಆರೋಗ್ಯಕ್ಕೆ ಹಾನಿಕರವಾದ ವಿಷಾನಿಲವೆಂದೂ, ಬಹಳಷ್ಟು ಹಿರಿಯ ನಾಗರಿಕರಿಗೆ, ಆಸ್ತಮಾ ರೋಗಿಗಳಿಗೆ ತೊಂದರೆ­ಯಾಗುತಿದ್ದುದನ್ನೂ, ಜನಸಾಮಾನ್ಯರಿಗೂ ಕಣ್ಣುರಿ, ಉಸಿರಾಟದ ತೊಂದರೆ ಇತ್ಯಾದಿಗಳ ವರದಿ ಕಣ್ಣಿಗೆ ಬಿತ್ತು. ಮರುದಿನ ದಿಲ್ಲಿ ಸರಕಾರ ಮಕ್ಕಳಿಗೆ ವಾರದ ರಜೆಯನ್ನೂ ಘೋಷಿಸಿತು. ಮುಖ್ಯ­ಮಂತ್ರಿ ಅರವಿಂದ ಕೇಜ್ರಿವಾಲ್‌… ದಿಲ್ಲಿ ಗ್ಯಾಸ್‌ ಚೇಂಬರ್‌ ಆಗುತ್ತಿದೆಯೆಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. ಎಲ್ಲಿ ನೋಡಿದರೂ ಜನ ಮೂಗು ಮುಚ್ಚಿ ಕೊಂಡು ಬಟ್ಟೆ ಸುತ್ತಿಕೊಂಡು ಓಡಾಡುತ್ತಿದ್ದರು. 

ನೆಗಡಿ, ತಲೆನೋವುಗಳ ಪಿರಿಪಿರಿ. ಕಳೆದ ದಶಕಗಳಲ್ಲಿ ದಿಲ್ಲಿಯ ಪರಿಸರ ಮಾಲಿನ್ಯ ಹದಗೆಟ್ಟುಹೋಗಿದೆ. ನಮಗೆ ಗೊತ್ತಾಗೋದು ಶರತ್ಕಾಲದ ಹೊಗೆ ಮಂಜು ಆವರಿಸಿಕೊಂಡು ಎಚ್ಚರಿಕೆ ಗಂಟೆ ಬಾರಿಸಿದಾಗಲೇ ಮತ್ತೆ ಪರಿಸರ ಮಾಲಿನ್ಯ, ನಿಸರ್ಗದ ಹಾನಿಗೆ ಮನುಷ್ಯನೇ ಹೇಗೆ ಕಾರಣ­ನಾಗುತ್ತಿ¨ªಾನೆ, ನಾವು ಬಿತ್ತಿದ ಬೆಳೆಯನ್ನು ನಾವೇ ಉಣ್ಣಬೇಕು ಎಂಬೆಲ್ಲ ಮಾತುಗಳು ಬಸ್ಸಿನಲ್ಲಿ, ಮೆಟ್ರೋದಲ್ಲಿ, ಸುತ್ತಮುತ್ತಲ ಹರಟೆಗಳಲ್ಲಿ ಕೇಳಿಸುತ್ತಿದೆ. ಇದು ಇತ್ತೀಚಿನ ದಿಲ್ಲಿ. 

ನಾನು ಮೂವತ್ತು ವರ್ಷಗಳ ಹಿಂದೆ ಈ ನೆಲದಲ್ಲಿ ಕಾಲೂರಿದ್ದೂ ಇಂಥದೇ ಗದಗದಿಸುವ ಚಳಿಯ ಇರುಳಿನಲ್ಲಿ. ಎಷ್ಟು ನವಿರಾದ ಕಲ್ಪನೆ­ಗಳಿದ್ದವು ನನ್ನೊಳಗೆ. ದಿಲ್ಲಿಯಲ್ಲಿ ಕೂತು ಕತ್ತೆತ್ತಿ ನೋಡಿದರೆ ನೆತ್ತಿಮೇಲೆಯೇ ಹಿಮಾಲಯ ಪರ್ವತಗಳು ಕೈಗೆಟುವಷ್ಟು ಹತ್ತಿರ­ವಿರ­ಬಹುದೆಂದು, ಕಾಳಿದಾಸ ವರ್ಣಿಸುವ ಮೇಘದೂತದ ಯಕ್ಷನ ಊರು ಇಲ್ಲೇ ಎಲ್ಲೋ  ಈ ಬಿಳಿ ಮೋಡ ಗಳ ಬೆನ್ನಲ್ಲಿ ಹಿಮಾಚ್ಛಾದಿತ ಬೆಟ್ಟಗುಡªಗಳಲ್ಲಿ, ಹಿಮಾಚಲದ ಹಸಿರು ತಪ್ಪಲಿನಲ್ಲಿ, ಪುಟ್ಟ ಗುಡಿಸಲಲ್ಲಿ ! ಹೀಗೇ ಏನೇನೋ  ನನ್ನವೇ ಕಲ್ಪನಾಲೋಕ ಕರಗಿಹೋಗಿ ವಾಸ್ತವಕ್ಕೆ ಮರಳತೊಡಗಿದೆ. ದಿಲ್ಲಿ ನೂರಾರು ಸಣ್ಣ ಸಣ್ಣ ಹಳ್ಳಿಗಳನ್ನು ಹೊಟ್ಟೆಯಲ್ಲಿ ಅಡಗಿಸಿಟ್ಟುಕೊಂಡ ಕಿಷ್ಕಿಂದೆ ಯೆಂದು ಅರಿತದ್ದು, ಗೋಡೆಗೆ ತೂಗು ಹಾಕುತ್ತಿದ್ದ ಕ್ಯಾಲಂಡ ರುಗಳಲ್ಲಿ ನೋಡಿದ ಹುಚ್ಚು ಹಿಡಿಸುವ ಬಿಳಿ ಬಿಳಿ ಹಿಮಾಲಯ ಪರ್ವತಗಳು, ಸುಂದರ ಸ್ವರ್ಗದಂಥ ಕಾಶ್ಮೀರ ಕ್ಯಾಲಂಡರಿನ ಸತ್ಯವಷ್ಟೇ ಎಂದು ಅರಿವಾ ಗಿದ್ದು ಒಂದು ವಿಡಂಬನೆ !       

ದಿಲ್ಲಿಯ ಚಳಿಯೆಂದರೆ ಒಂಥ‌ರಾ ರೊಮ್ಯಾಂಟಿಕ್‌ ಮೂಡ್‌. ತಂತಾನೆ ಎದೆಯೊಳಗೊಂದು ಹಿತವಾದ ಹಾಡು ಗುನುಗುನಿಸಿ ದಂತೆ, ತಣ್ಣಗಿನ ಕುಳಿರ್‌ ಗಾಳಿಯಲ್ಲಿ ಸಣ್ಣಗೆ ಪಾರಿಜಾತದ ಕಂಪು ಹರಿದಂತೆ, ತೆಳುವಾದ ಮಂಜಿನ ಸೆರಗಲ್ಲಿ ಹೂವೊಂದು ನಕ್ಕಂತೆ. ಆಗೆಲ್ಲ ಮಕ್ಕಳನ್ನು ಈ ಚಳಿಯಲ್ಲೇ ಎಬ್ಬಿಸಿ ತಯಾರು ಮಾಡಿ ಶಾಲೆಗೆ ಕಳಿಸಬೇಕು. ಬೆಳಗಿನ ಐದೂವರೆಗೆ ಏಳುತ್ತಿದ್ದ ನಾನು ಏಳುವುದೇ ಬೇಡ ಮಲಗಿಯೇ ಇರಬೇಕು ಅನಿಸಿ ಸುಮ್ಮನೇ ಗಾಜಿನ ಕಿಟಕಿಗಳಾಚೆ ಮಸುಕು ಮಸುಕಾದ ಇಬ್ಬನಿ­ಯನ್ನೆ ಕಣ್ತುಂಬಿಕೊಳ್ಳುವ ಹುಚ್ಚು. ರೆಪ್ಪೆಗಂಟಿದ ಸವಿಗನಸು ಇನ್ನೂ ಬಿಟ್ಟಿರುತ್ತಿದ್ದಿಲ್ಲ. ಕಿಟಕಿ ಗಾಜಿನ ಮೇಲೆಲ್ಲ ನೀರು ಚಿಮುಕಿಸಿದಂತೆ ಇಬ್ಬನಿ ಇಳಿಯುತ್ತಿರುತ್ತದೆ. ನಸುಕು ಹರಿಯದ ಬೆಳಕೂ ಮೂಡದ ಮುಂಜಾವು. ಶರತ್ಕಾಲದಲ್ಲಿ ಸೂರ್ಯೋದಯವೇ ಇಲ್ಲದ ಬೆಳಗು. ಹೊರಗಡೆ ಮಾತ್ರ ಮನಸೂರೆಗೊಳ್ಳುವ ಮಂಜಿನ ಹೊಗೆ. ರಾತ್ರಿಯಿಂದ ಉರಿಯುತ್ತಿದ್ದ ನಿಯಾನ್‌ ದೀಪಗಳ ಹಳದಿ ಬೆಳಕು ಬಿಟ್ಟರೆ ಬೇರೆ ಸುತ್ತಲೂ ಬೆಳಕಿಲ್ಲ. ಮಂದವಾದ ದೀಪದ ಸುರಿವ ಬೆಳಕಿನ ಹಿನ್ನೆಲೆಯಲ್ಲಿ ಸುತ್ತಲೂ ಕತ್ತಲು ಹಿಮದ ಮಸುಕಿನ ತೆರೆ. ಕಣ್ಣಿಗೆ ಕಾಣದ ತೆರೆದ ಆಕಾಶ ತೆಪ್ಪಗೆ ಮಂಜಿನ ತೆರೆಹೊದಿಸಿ ಮಲಗಿಬಿಟ್ಟಿದೆ. ರವಿ ಬರುವವರೆಗೂ ತನ್ನದೇ ಸಾಮ್ರಾಜ್ಯವೆಂಬಂತೆ ಲೋಕವನ್ನೆಲ್ಲಾ  ಆವರಿಸಿಕೊಂಡ ಧ್ಯಾನಸ್ಥ ಮಂಜು.   

Advertisement

ಇಲ್ಲಿಗೆ ಬಂದ ಆರಂಭದಲ್ಲಿ ಅಂದರೆ 1985ರ ದಿಲ್ಲಿಯ ಮನೆ ಮನೆಗಳಲ್ಲಿ ಇದ್ದಲು ಶೆಗಡಿ (ಇದ್ದಲು ಒಲೆ) ಬಳಸುತ್ತಿದ್ದರು ಜನ.  ಕಬ್ಬಿಣದ ಬುಟ್ಟಿಯಲ್ಲಿ ಕುಳ್ಳು- ಕಲ್ಲಿದ್ದಲು ಹೊತ್ತಿಸಿ ಕೋಣೆಯನ್ನು ಬೆಚ್ಚಗಿಡುವ ರೂಢಿಯಿತ್ತು. ಜನ ಇದ್ದಲು, ಕಲ್ಲಿದ್ದಲು ಖರೀದಿಸು ತ್ತಿದ್ದರು. ಕಟ್ಟಿಗೆ, ಇದ್ದಿಲು ಮಾರುವ ಅಡ್ಡಾಗಳೂ, ಡಿಪೋಗಳೂ ಇದ್ದವು. ಈಗ ತರಹೇವಾರಿ ರೂಂ ಹೀಟರುಗಳು. ಹೈಡ್ರೋಜನ್‌, ಸಿಂಗಲ್‌ ರಾಡ್‌, ಡಬಲ್‌ ರಾಡ್‌, ಬ್ಲೋವರ್‌ ಇತ್ಯಾದಿ ವಿದ್ಯುತ್‌ ಉಪಕರಣಗಳ ಅನುಕೂಲಗಳಿವೆ. ಆದರೆ ಪ್ರಾಕೃತಿಕವಾಗಿ ಚಳಿ ಯನ್ನು ಸಹಿಸಿಕೊಳ್ಳುವುದೇ ಆರೋಗ್ಯಕರ ವಿಧಾನ. ಅತಿಯಾಗಿ ರೂಂ ಹೀಟರ್‌ ಬಳಸುವುದರಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತದೆಂಬ ಸತ್ಯವೂ ತಿಳಿದಿರಬೇಕು. ಹತ್ತಿ ತುಂಬಿಸಿ ತಯಾರಿಸಿದ ರಜಾಯಿಗಳು ಮಾತ್ರ ಯಾವ ಕಾಲಕ್ಕೂ ಬದಲಾಗಿಲ್ಲ. ಎಲ್ಲ ಕೆಲಸ ಮುಗಿಸಿ ಒಮ್ಮೆ ರಜಾಯಿಯಲ್ಲಿ ನುಸುಳಿಕೊಂಡರೆ ಹೊರಬರುವುದು ಬೆಳಿಗ್ಗೆಯೇ. ರಜಾಯಿ ಅಂದರೆ ಬೆಚ್ಚಗಿನ ಕೋಟೆಯಿದ್ದಂತೆ!   

ಇಲ್ಲಿನ ಜನ ಚಳಿಗಾಲದಲ್ಲಿ ಸ್ನಾನವನ್ನೇ ಮಾಡೊದಿಲ್ಲವೆಂಬ ಜೋಕುಗಳೂ ಇದ್ದವು. ಆದರೆ ಪೂರ್ತಿ ನಿಜವಲ್ಲ. ಸರದಾರ ಜೀಗಳು ತಮ್ಮ ನೀಳಕೇಶವನ್ನು ಭಾನುವಾರಕ್ಕೊಮ್ಮೆ ತೊಳೆದು ಬಿಸಿಲಿಗೆ ಆರಿಸಿ ಒಣಗಿಸಿ ಒಪ್ಪಮಾಡಿಕೊಳ್ಳುತ್ತಾರೆ. ನಿತ್ಯದ ಸ್ನಾನ ಮಾಡುವುದು ಬಿಡುವುದು ಅವರವರ ಇಷ್ಟ. ಕೆಲವರು ಬರಿ ಕೈ ಕಾಲು ಮುಖ ತೊಳೆದು, ಬೆಚ್ಚಗಿನ ಉಣ್ಣೆ ಬಟ್ಟೆ ಧರಿಸಿ, ಸೆಂಟು ಹೊಡೆದುಕೊಂಡು ನಡೆಯುವವರೂ ಇದ್ದಾರೆ. ಚಳಿಯಿರಲಿ ಇಲ್ಲದಿರಲಿ ನಿತ್ಯ ಸ್ನಾನ ಮಾಡುವವರೂ ಇದ್ದಾರೆ.   ಜನದಟ್ಟಣೆಯ ಪ್ಯಾಕ್‌ ಆದ ಬಸ್ಸಿನಲ್ಲಿ,  ಶೇರಿಂಗ್‌ ಆಟೋದಲ್ಲಿ ಮಾತ್ರ ಈ ಊರಿನ ಚಳಿಗಾಲದ ಮುಗ್ಗುಸು ವಾಸನೆಗಳು ತಲ್ಲಣಗೊಳಿಸುತ್ತವೆ. ಸ್ನಾನ ಮಾಡದ ವಾಸನೆ, ಒಗೆಯದ ಸ್ವೆಟರ್‌ ವಾಸನೆ, ಬೆಳ್ಳುಳ್ಳಿ ತಿಂದವರ ವಾಸನೆ, ಶೇಂಗಾ ಹುರಿದ ವಾಸನೆ, ಸಿಹಿಗಾಳಿಯ ವಾಸನೆ, ಮೋಮೋಸ್‌ ಕುದಿವ ವಾಸನೆ, ಕುದಿಸಿದ ಮೊಟ್ಟೆ ವಾಸನೆ, ಚರಂಡಿಗಳ ವಾಸನೆ, ರಾಶಿ ರಾಶಿ ತಿಪ್ಪೆಗುಂಡಿಗಳ ವಾಸನೆ. ಕತ್ತಲು ಕರಾಳವಾದ ಭಯದ ವಾಸನೆ ಅಸಹನೀಯವೆನಿಸುವಾಗ ಹಾಲು ಕುಡಿದ ಮಗುವಿನ ವಾಸನೆಯಂಥ ಮುದ್ದು ಚಳಿಯಲ್ಲಿ ಸಾಂಬ್ರಾಣಿ ಹಾಕಿದಂಥ ಮಂಜುಹೊಗೆಯ ಬಣ್ಣವಿಲ್ಲದ ವಾಸನೆ ಯನ್ನು ಸುಮ್ಮನೆ ಒಮ್ಮೆ ಅನುಭವಿಸಬೇಕು ಅನಿಸತೊಡಗುತ್ತದೆ.  

“ಜಾಡೋಂ ಕಿ ನರಮ್‌  ಧೂಪ್‌ ಔರ್‌ ಆಂಗನ್‌ ಮೆ ಲೇಟಕರ್‌…’ ಬಹುಶಃ ಗುಲ್ಜಾರ್‌ ಅವರು ಉತ್ತರದ ಇಂಥ ಚಳಿಯನ್ನು ಪ್ರೇಮಿಸುವ ಪ್ರೇಮಿಗಳಿಗಾಗಿಯೇ ಬರೆದಿದ್ದಾರೆ. ಭಾನುವಾರದ ರಜೆಯಲ್ಲಿ ಟೆರೇಸ್‌ ಮೇಲೆ ಹೂಬಿಸಿಲಲ್ಲಿ ಚಾಪೆ ಹಾಸಿಕೊಂಡು ಮಲಗಿ ಪುಸ್ತಕ ಓದುವ, ಹಾಡು ಕೇಳುವ ಖುಶಿ ಯನ್ನು ಮಾತ್ರ ತಪ್ಪಿಸಿಕೊಳ್ಳಲಾರೆ. ಬೆಚ್ಚಗಿನ ಆಕಾಶ ನೋಡುತ್ತ ಕಣ್ಣಳತೆಯಲ್ಲಿ ಪಾರಿವಾಳಗಳು ಹಾರಾಡುವುದನ್ನು ಕಾಣಬೇಕು ಬಿಸಿಲ ಬಯಲಲ್ಲಿ ಮಲಗಿ.
ಸಂಜೆ ಜವಾಹರ್‌ ಲಾಲ್‌ ನೆಹರೂ ಸ್ಟೇಡಿಯಂ ಸುತ್ತಲಿನ ಸರಕಾರಿ ದಫ¤ರುಗಳ ಸಿಬ್ಬಂದಿಗಳಿಗಾಗೇ ಹೊರಡುವ ಬಸ್ಸನ್ನು ನಾನೂ ಹಿಡಿಯಲು ಮೆಟ್ರೋ ಹಿಡಿಯುತ್ತಿ¨ªೆ ಆಗ. ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರದಲ್ಲಿ ಚೆಂದ ಕಾಣುವ ಸ್ಟೇಡಿಯಂ ಇಬ್ಬನಿಯಲ್ಲಿ ಅದ್ದಿದಂತಿರುತ್ತದೆ. ನಿಜಾಮುದ್ದಿನ್‌ ಫ್ಲೆç ಓವರಿನ 
ಕೆಳಗೆ ಬದುಕು ಹಾಸಿಕೊಂಡ ನಿರಾಶ್ರಿತರು, ಭಿಕ್ಷುಕರು, ಕಳ್ಳರು, ಖದೀಮರು, ಮೂಗು ಸುರಿಸುವ ಕೊಳೆ ಕೊಳೆಯಾದ ಪುಟ್ಟ ಮಕ್ಕಳು, ನಗರದ ಕ್ರೌರ್ಯ, ಕಠೊರತೆಯನ್ನೆಲ್ಲ ಅರಗಿಸಿ
ಕೊಂಡು ಬದುಕಲು ಕಲಿತ ದೊಡ್ಡ ಮಕ್ಕಳು, ಕೈ ನೀಗದ ಅಜ್ಜಿಯರು ಜನರು ನೀಡಿದ (ಬಿಸಾಡಿದ?) ಕಂಬಳಿ, ಉಣ್ಣೆಯ ಕೋಟು, ಟೋಪಿಗಳಲ್ಲಿ ಚಳಿಯನ್ನು ಸಹಿಸಿಕೊಳ್ಳುವ ನೋಟ ಎದೆಗೆ ಇರಿಯುತ್ತದೆ. ಈ ನಗರದಲ್ಲಿ ಚಳಿಗಾಲದ ಕಟು ಚಳಿಗೆ, ಶೀತಲ ಹರಿಗೆ ಸಾಯುವವರ ಸಂಖ್ಯೆ ಹೆಚ್ಚು. ರಸ್ತೆ ಬದಿಯ ಜನರ ಆಶ್ರಯಕ್ಕಾಗಿಯೇ ರಾತ್ರಿ ತಂಗುದಾಣಗಳಿವೆ. ದಿಲ್ಲಿ ಸರಕಾರ ಹೆಚ್ಚು ಹೆಚ್ಚು ರಾತ್ರಿ ತಂಗುದಾಣಗಳನ್ನು, ಬೆಚ್ಚಗಿನ ಕಂಬಳಿ ಇತ್ಯಾದಿಗಳನ್ನು ಪ್ರತಿವರ್ಷವೂ ಒದಗಿಸುತ್ತದೆ. ದಾನಿಗಳು 
ಕಂಬಲ್‌ ಸೇವೆ ಮಾಡುತ್ತಾರಾದರೂ ಅದೂ ಸಾಕಾಗುವುದಿಲ್ಲ. 
ಈ ನಡುಗುವ ಚಳಿಯಲ್ಲಿ ಒಣಗಿದ ಎಲೆಗಳು, ಕಸ ಕಡ್ಡಿ, 
ಕಾಗದ ಗುಡ್ಡೆಹಾಕಿ ಬೆಂಕಿಕಾಯಿಸುವ, ಕಂಬಳಿ ಸುತ್ತಿಕೊಂಡು 
ಫ್ಲೆç ಓವರಿನ ಕಂಬಗಳಲ್ಲಿ, ಹಾಳುಬಿದ್ದ ಕಟ್ಟಡಗಳ ಮೂಲೆಯೊಂದ ರಲ್ಲಿ ಬೀಡುಬಿಟ್ಟ ಜೀವಗಳನ್ನು ನೋಡುವುದೆಂದರೆ ತೀರಾ ಹಿಂಸೆಯೆನಿಸುತ್ತದೆ ಯಾಕೋ.   

  ಕವಿತೆಯಿರುವುದೇ ಶರದೃತುವಿಗಾಗಿ, ಶರದೃತುವಿನೊಂದಿಗಿನ ಪ್ರೀತಿಯಲ್ಲಿ. ಮೃದು ಬಿಸಿಲ ನೆರಳಲ್ಲಿ…. 
ಜಾಡೆ ಕಿ ನರಮ… ಧೂಪ್‌
ಛತ್‌ ಕಾ ಸಜೀಲಾ ವೋ ಕೋನಾ
ನರಮ… ನರಮ… ಕಿಸ್ಸೆ
ಮೂಂಗ್‌ ಫಲಿ ಕೆ ದಾನೆ
ಔರ್‌ ಗುದ್‌ ಗುದಾ ಬಿಚ್ಚೊನಾ
ಧೂಪ್‌ ಕೆ ಸಾತ್‌ ಖೀಸಕತೀ ಖಟಿಯಾ
ಕಿಸ್ಸೋ ಕಿ ಚಾದರ್‌ 
ಔರ್‌ ಸಪನೋಂ ಕಿ ತಕಿಯಾ…
ದಿಲ್ಲಿ ಇಷ್ಟವಾಗುವುದೇ ಈ ಕಾರಣಕ್ಕೆ.  ಮೃದುವಾದ ಬಿಸಿಲು ನವಿರು ನವಿರಾಗಿ ಕಚಗುಳಿಯಿಡುವ ಚಳಿಯನ್ನು ಮತ್ತೆ ಮತ್ತೆ ಪ್ರೀತಿಸುತ್ತೇನೆ. ಎರಡೇ ಮಾಸದ ಚಳಿಗಾಲ ಹೊರಟುಹೋದಾಗ ಅರೆ…ಇಷ್ಟು ಬೇಗ ಹೊರಟೇಹೋಯಿತಾ ಎಂದು ಪರಿತಪಿಸು ತ್ತೇನೆ. ಮೂಲಚಂದ್‌ ಹತ್ತಿರ ರಿಂಗ್‌ ರೋಡ್‌ ಎಡದಲ್ಲಿ ಚಳಿಯಲ್ಲಿ ಮಾತ್ರ ಅರಳುವ ಗುಲಾಬಿ ಬಣ್ಣದ ಫಲಾಶದ ಜಾತಿಯ ಹೂವನ್ನು ಕಂಡಾಗ ಖುಷಿಪಡುತ್ತೇನೆ.  

ದಿಲ್ಲಿಯ ವೈಶಾಖದ ಬಿರು ಬಿಸಿಲನ್ನು ಸಹಿಸುವುದಿದ್ದರೆ ಕಣ್ಣಲ್ಲಿ ಶರದೃತುವಿರಬೇಕು. ಎದೆಯಲ್ಲೊಂದು ಗಜಲ್‌. 
ಆದರೇನಿದು! ನಮ್ಮೆದೆಗಳೂ ಈಗ ರೊಮ್ಯಾಂಟಿಕ್‌ ಚಳಿ ಗಾಲವನ್ನು ಕೌದಿಯಲ್ಲೇ ಸುತ್ತಿಟ್ಟು ಈ ಪರಿಸರ ಮಾಲಿನ್ಯ ಮತ್ತು ನಗರವನ್ನು ಸುತ್ತಿಕೊಂಡ ಹೊಗೆ ಮಂಜು ಒಂದಿನ ನಮ್ಮನ್ನೆಲ್ಲ ಗೂರಲು ರೋಗಿಗಳನ್ನಾಗಿಯೋ ಮತ್ತೆನೋ ಆಗಿಯೋ, ಬದುಕಿನ ಆಯುಷ್ಯವನ್ನೇ ಸ್ವಾಹಾ ಮಾಡುತ್ತಿದೆಯೆಂಬ ಸತ್ಯವನ್ನು ಯೋಚಿಸಿಯೇ ಬೆವರುತ್ತಿದ್ದೇನಿಲ್ಲಿ!  

 ರೇಣುಕಾ ನಿಡಗುಂದಿ  

Advertisement

Udayavani is now on Telegram. Click here to join our channel and stay updated with the latest news.

Next