Advertisement

ತಾಲೂಕಿನಲ್ಲಿ ಮೇವಿಗೆ ತೀವ್ರ ಬರ

07:37 AM Mar 23, 2019 | Team Udayavani |

ಗೌರಿಬಿದನೂರು: ತಾಲೂಕಿನಲ್ಲಿ ತೀವ್ರ ಬರಗಾಲದಿಂದ ನೀರಿನ ಸಮಸ್ಯೆ ಉಂಟಾಗಿದ್ದು, ಕುಡಿಯುವ ನೀರಿಗೆ ಮಾತ್ರವಲ್ಲದೇ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ªಜಾನುವಾರುಗಳನ್ನು ಪೋಷಿಸಲು ಸಾಧ್ಯವಾಗದೆ ರೈತರು ಜಾತ್ರೆ ಮತ್ತು ಸಂತೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. 

Advertisement

ಮೇವು ಸಿಗುತ್ತಿಲ್ಲ: ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಮೇವಿಗೂ ತತ್ವಾರ ಎದುರಾಗಿದೆ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಸರ್ಕಾರವು ಎಚ್ಚೆತ್ತುಕೊಂಡು ಮೇವಿನ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾಡಳಿತದ ಮೂಲಕ ಮೇವು ಬ್ಯಾಂಕ್‌ ಸ್ಥಾಪಿಸಿ ಬೇಡಿಕೆಗೆ ತಕ್ಕಂತೆ ಮೇವನ್ನು ಪಶು ಇಲಾಖೆ ಮುಖಾಂತರ ರೈತರಿಗೆ ಒದಗಿಸುತ್ತಿತ್ತು. 

ಆದರೆ ಕಳೆದ 2-3 ತಿಂಗಳಿನಿಂದ ಮೇವಿಗೆ ತೀವ್ರ ಬೇಡಿಕೆಯುಂಟಾಗಿದ್ದು, 2-3 ಸಾವಿರ ರೂ. ಇದ್ದ ಒಂದು ಟ್ರ್ಯಾಕ್ಟರ್‌ ಜೋಳದ ಮೇವು 7ರಿಂದ 9 ಸಾವಿರ ರೂ. ಆಗಿದ್ದು, ರಾಗಿಯ ತಾಳು ಒಂದು ಟ್ರ್ಯಾಕ್ಟರ್‌ಗೆ 14 ಸಾವಿರ ರೂ. ಆಗಿದ್ದು, ಇಷ್ಟೊಂದು ಹಣ ನೀಡಲು ಸಿದ್ಧರಿದ್ದರೂ ಮೇವು ಸಿಗುತ್ತಿಲ್ಲ. 

ಅರ್ಧಬೆಲೆಗೆ ಮಾರಾಟ: ಮೇವಿಗಾಗಿ ತುಮಕೂರು, ಮಧುಗಿರಿ ಹಾಗೂ ಕೊರಟಗೆರೆ ಹಾಗೂ ಆಂಧ್ರದಲ್ಲಿ ಹೆಚ್ಚಾಗಿ ಸಿಗುವ ಕಡಲೆ ಕಾಯಿಯ ಕಗ್ಗು (ಸೊಪ್ಪು) ಒಂದು ಟ್ರ್ಯಾಕ್ಟರ್‌ಗೆ 16 ಸಾವಿರ ರೂ. ಬೆಲೆಯಿದ್ದು, ಇಷ್ಟೊಂದು ಬೆಲೆ ಕೊಟ್ಟು ಖರೀದಿಸಿ ಕಟಾವು, ಸಾಗಣೆ, ಬಣವೆ ಹಾಕುವ ವೆಚ್ಚ, ಕುಡಿಯುವ ನೀರಿನ ಸಮಸ್ಯೆ ಇವೆಲ್ಲಾ ನಷ್ಟವನ್ನು ಯೋಚಿಸುವ ರೈತರು, ಜಾನುವಾರುಗಳನ್ನು ನಿರ್ವಹಿಸಲು ಸಾಧ್ಯವಾಗದೇ ಜಿಲ್ಲೆಯ ಚಿಂತಾಮಣಿ ಜಾನುವಾರು ಸಂತೆ ಹಾಗೂ ಜಾತ್ರೆಗಳಲ್ಲಿ ಹಾಗೂ ದಲ್ಲಾಳಿಗಳ ಮೂಲಕ ಅರ್ಧಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 

ಇಂತಹ ಸಂಕಷ್ಟದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಮೇವು ಖರೀದಿಸಿ ಮೇವು ಬ್ಯಾಂಕ್‌ ಸ್ಥಾಪಿಸಿ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಮೇವನ್ನು ವಿತರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ. 

Advertisement

ರೈತರಿಂದ ಲಿಖಿತವಾಗಿ ಮೇವು ಬೇಕೆಂಬ ಬೇಡಿಕೆ ಅರ್ಜಿಗಳು ಬಂದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮೇವಿನ ವ್ಯವಸ್ಥೆ ಮಾಡಲಾಗುವುದು.
-ಮಧುರನಾಥರೆಡ್ಡಿ, ಉಪನಿರ್ದೇಶಕರು ಪಶುವೈದ್ಯ ಇಲಾಖೆ ಚಿಕ್ಕಬಳ್ಳಾಪುರ

ಸರ್ಕಾರ ಮೇವು ಬೆಳೆದುಕೊಳ್ಳಲು ನೀರಿನ ಅನುಕೂಲವಿರುವ ರೈತರಿಗಾಗಿ ಸಮೃದ್ಧ ಮೇವು ಗೋವುಗಳ ನಲಿವು ಯೋಜನೆಯನ್ನು ಜಾರಿಗೆ ತಂದಿದ್ದು, ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಪ್ರತಿ ರೈತರಿಗೆ 5 ಸಾವಿರ ರೂ. ನೀಡಲಿದೆ. ಈಗಾಗಲೇ ತಾಲೂಕಿನಲ್ಲಿ 173 ರೈತರಿಂದ 162 ಎಕರೆ ಬೀಜಕ್ಕಾಗಿ ಅರ್ಜಿ ಬಂದಿದ್ದು, ಅನುಷ್ಠಾನಗೊಳಿಸುತ್ತಿದ್ದೇವೆ.  
-ಡಾ.ಮಾರುತಿ, ಸಹಾಯಕ ನಿರ್ದೇಶಕರು ಪಶುವೈದ್ಯ ಇಲಾಖೆ ಗೌರಿಬಿದನೂರು 

ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರವೇ ಮುಂದೆ ಬಂದು ಮೇವಿನ ವ್ಯವಸ್ಥೆ ಮಾಡಬೇಕಿತ್ತು. ಆದರೆ  ಮೇವಿನ ವ್ಯವಸ್ಥೆಗೆ ರೈತರಿಂದ ಅರ್ಜಿ ಬರುವವರೆಗೆ ಪಶುಸಂಂಗೋಪನೆ ಇಲಾಖೆ ಅಧಿಕಾರಿಗಳು ಕಾಯುತ್ತಿರುವುದು ವಿಪರ್ಯಾಸ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮೇವು ಖರೀದಿ ನಂತರ ವಿತರಣೆ ಮಾಡುತ್ತೇವೆ ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. 
-ಆನಂದರೆಡ್ಡಿ, ಪ್ರಗತಿಪರ ರೈತರ ಚೀಗಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next