Advertisement

ನೀರು ಪೂರೈಕೆ ವ್ಯತ್ಯಯವಾಗ‌ದಂತೆ ಗಮನ ಹರಿಸಿ: ಸೀತಾರಾಂ

04:28 PM Mar 06, 2017 | Team Udayavani |

ಮಡಿಕೇರಿ: ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳಲ್ಲಿ ಬೋರ್‌ವೆಲ್‌ ಕೊರೆಸಿ ಕುಡಿಯುವ ನೀರು ಪೂರೈಕೆಗೆ ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್‌. ಸೀತಾರಾಂ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.     

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ಆದ್ದರಿಂದ ಸಮಸ್ಯೆ ಉಂಟಾಗುವ ಮೊದಲು ಅಂತಹ ಗ್ರಾಮಗಳನ್ನು ಗುರುತಿಸಿ ಕುಡಿಯುವ ನೀರು ಪೂರೈಕೆ ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ಗೆ ಸೂಚನೆ ನೀಡಿದರು.   

ಕುಡಿಯುವ ನೀರು ಪೂರೈಕೆಗಾಗಿ ಬಾಕಿ ಇರುವ ಕಾಮಗಾರಿಗಳಿಗೆ ಬಿಲ್ಲು ಪಾವತಿಸುವುದು. ಹೊಸ ಕಾಮಗಾರಿ ಕೈಗೆತ್ತಿಕೊಂಡು ಅನುದಾನ ಬಳಕೆ ಮಾಡುವುದು, ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎಂ.ಆರ್‌. ಸೀತಾರಾಂ ಅವರು ಸೂಚನೆ ನೀಡಿದರು.  ಶಾಸಕರಾದ ಕೆ.ಜಿ. ಬೋಪಯ್ಯ ಮಾತನಾಡಿ,   ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಆದ್ದರಿಂದ ಬೋರ್‌ವೆಲ್‌ ಕೊರೆಯಲು ಗುರುತಿಸಲಾಗಿರುವ ಸ್ಥಳದಲ್ಲಿ ಸಂಪೂರ್ಣ ನೀರು ದೊರೆಯುವವರೆಗೆ ಬೋರ್‌ವೆಲ್‌ ಕೊರೆಯಬೇಕು ಎಂದು ಅವರು ಸಲಹೆ ಮಾಡಿದರು. 

ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್‌ ಅವರು ಮಾತನಾಡಿ, ಸೋಮವಾರಪೇಟೆ ತಾಲೂಕಿನ ನಿಡ್ತ, ಬೆಸೂರು, ಕೊಡ್ಲಿಪೇಟೆ, ಆಲೂರು ಸಿದ್ದಾಪುರ ಮತ್ತಿತರ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ ಶಶಿಧರ್‌ ಅವರು ಕುಡಿಯುವ ನೀರು ಸಂಬಂಧಿಸಿದಂತೆ ಹಳೇ ಕಾಮಗಾರಿಗಳಿಗೆ ಮೂರೂವರೆ ಕೋಟಿ ರೂ. ಬಿಲ್ಲುಗಳನ್ನು ಪಾವತಿಸಲು ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದರು. 

ಕುಡಿಯುವ ನೀರಿಗಾಗಿ ಸರ್ವ ಪಕ್ಷಗಳ ನಿಯೋಗವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಮೇರೆಗೆ 6 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಆದರೆ ಹಳೇ ಕಾಮಗಾರಿಗಳಿಗೆ ಹಣ ಪಾವತಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ ಎಂದು ಕೆ.ಜಿ. ಬೋಪಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ ಅವರು ಸಮರ್ಪಕ ಮಾಹಿತಿ ನೀಡದಿರುವುದಕ್ಕೆ ಸಚಿವರು ಅತೃಪ್ತಿ ವ್ಯಕ್ತಪಡಿಸಿದರು.  

Advertisement

ಜಿ.ಪಂ. ಸಿಇಒ ಅವರು ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಕುಡಿಯುವ ನೀರು ಸಂಬಂಧಿಸಿದಂತೆ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಬೇಕು ಎಂದು ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್‌ ಅವರು ಹೇಳಿದರು.   

ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಕೂಟುಹೊಳೆ, ಕುಂಡಾಮೇಸಿŒ ಹಾಗೆಯೇ ಜಲ ಮೂಲಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಪ್ರತೀ ದಿನ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಅಪ್ಪಚ್ಚುರಂಜನ್‌ ಅವರು ನಿರ್ದೇಶನ ನೀಡಿದರು. ಕೆಲವು ಬಡಾವಣೆಗಳಲ್ಲಿ ಮೂರು ದಿವಸಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಗಮನ ಹರಿಸುವಂತೆ ಶಾಸಕರು ಹೇಳಿದರು. 

ತೋಟಗಳಲ್ಲಿ ಮನೆ ನಿರ್ಮಿಸಲು ತಹಶೀಲ್ದಾರರ ಕಚೇರಿಯಲ್ಲಿ ಎನ್‌ಒಸಿ ನೀಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಈ ಸಂಬಂಧ ವಿಧಾನಸಭೆಯಲ್ಲಿ ಪ್ರಸ್ತಾವಿಸಲಾಗಿದೆ. ಆದರೂ  ಇನ್ನೂ ಸರಿಪಡಿಸಿಲ್ಲ ಎಂದು ಬೋಪಯ್ಯ ಅವರು ಸಚಿವರ ಗಮನಕ್ಕೆ ತಂದರು. ವಿಧಾನ ಪರಿಷತ್‌ ಸದಸ್ಯರಾದ ಎಂ.ಪಿ. ಸುನೀಲ್‌ ಸುಬ್ರಮಣಿ ಅವರು ಮಾತನಾಡಿ, ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಕುಡಿಯುವ ನೀರು ಬಗ್ಗೆ ದೂರುಗಳು ಕೇಳಿ ಬರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದರು.   ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ. ರಮೇಶ್‌ ಅವರು ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಿದರು.  

ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ  ಮತ್ತು ಜಿ.ಪಂ. ಸಿಇಒ ಚಾರುಲತಾ ಸೋಮಲ್‌ ಅವರು ಕುಡಿಯುವ ನೀರು ಸರಬರಾಜು ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಹಲವು ಮಾಹಿತಿ ನೀಡಿದರು.  ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚುಮ್ಮಿದೇವಯ್ಯ ಹಾಜರಿದ್ದರು.

ಸಹಾಯವಾಣಿ ಕೇಂದ್ರ ಆರಂಭ
ಕೊಡಗು ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲು ಸಹಾಯ
ವಾಣಿ ಕೇಂದ್ರ ತೆರೆಯಲಾಗಿದೆ. ತಾಲೂಕುವಾರು, ದೂರವಾಣಿ, ಮೊಬೈಲ್‌ ಸಂಖ್ಯೆಯ ವಿವರ ಇಂತಿದೆ. ಮಡಿಕೇರಿ ತಾಲೂಕಿಗೆ ಹಿರಿಯಣ್ಣಯ್ಯ- ಕಚೇರಿ 08272-221846, ಮೊ: 9945192518, ಸೋಮವಾರಪೇಟೆ ತಾಲೂಕಿಗೆ ರಮೇಶ್‌ ಕಚೇರಿ ದೂರವಾಣಿ: 08276-284422, ಮೊ: 9448523387, ವಿರಾಜಪೇಟೆ ತಾಲೂಕಿಗೆ ಲಕ್ಷ್ಮೀಕಾಂತ್‌ ಕಚೇರಿ ದೂರವಾಣಿ 08274-261053, ಮೊ. 9900631584, ವಿಭಾಗ ಕಚೇರಿ ಮಡಿಕೇರಿ ವಿಭಾಗ, ದೂರವಾಣಿ ಸಂಖ್ಯೆ 08272-228845 ಮೊ.9845319847 ಸಂಪರ್ಕಿಸಬಹುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next