ಕಲಬುರಗಿ: ಅಭಿವೃದ್ಧಿ ನಿಟ್ಟಿನಲ್ಲಿ ನವೀಕರಿಸ ಬಹುದಾದ ಇಂಧನ ಕ್ಷೇತ್ರದತ್ತ ಗಮನ ಹರಿಸುವ ಸಮಯ ಇದಾಗಿದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ (ಕ್ರೆಡಲ್) ಅಧ್ಯಕ್ಷ ಚಂದ್ರಕಾಂತ ಬಿ. ಪಾಟೀಲ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶುಕ್ರವಾರ ಇಂಜಿ ನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗ, ಗೋದುತಾಯಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (ಕ್ರೆಡಲ್) ಬೆಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸರಕಾರವು ಸೌರ ನೀತಿ ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರವು ನವೀಕರಿಸಬಹುದಾದ ಇಂಧನ ನೀತಿ ಬಿಡುಗಡೆ ಮಾಡಿದೆ. ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಮಾರ್ಗಸೂಚಿ ನೀಡಲಾಗಿದೆ. ಇದರ ಭಾಗವಾಗಿ ಕೆಆರ್‌ಇಡಿಎಲ್ ವಿವಿಧ ಕಾಲೇಜುಗಳ ಸಹಯೋಗದಲ್ಲಿ ವಿಚಾರ ಸಂಕಿರಣ, ಸಮ್ಮೇಳನ, ಕಾರ್ಯಾಗಾರದ ರೂಪದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದತ್ತ ಗಮನಹರಿಸುವ ಸಮಯ ಇದು. ಈ ನೀತಿಗಳ ಆಧಾರದ ಮೇಲೆ ಅನೇಕ ಏಜೆನ್ಸಿಗಳು ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿವೆ ಎಂದು ತಿಳಿಸಿದರು.
ಶಕ್ತಿ ಸಂರಕ್ಷಣೆ, ಇಂಧನ ಉಳಿತಾಯ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಮತ್ತು ನಮ್ಮ ಪ್ರಕೃತಿ ಉಳಿಸಲು ಅದು ಹೇಗೆ ಸಹಾಯಕವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇತ್ತೀಚೆಯ ದಿನ ಗಳಲ್ಲಿ ತಂತ್ರಜ್ಞಾನ ಮತ್ತು ಕೈಗಾರಿಕೀಕರಣದ ಬೆಳವಣಿಗೆಯೊಂದಿಗೆ ವಿದ್ಯುತ್ ಅತ್ಯಗತ್ಯವಾಗಿದೆ, ಬೇಡಿಕೆಯು ವೇಗವಾಗಿ ಹೆಚ್ಚುತ್ತಿದೆ ಮತ್ತು ಈ ಬೇಡಿಕೆ ಪೂರೈಸಲು ನಾವು ಸನ್ನದ್ಧರಾಗಬೇಕು ಎಂದರು.
ಕರ್ನಾಟಕ ರಾಜ್ಯವು 15.5 ಜಿವಿ ಸ್ಥಾಪಿತ ಸಾಮರ್ಥ್ಯದೊಂದಿಗೆ ನೆರೆಯ ಶ್ರೀಮಂತ ರಾಜ್ಯಗಳಲ್ಲಿ 4ನೇ ಸ್ಥಾನದಲ್ಲಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಜಾಗತಿಕವಾಗಿ ಭಾರತ ದೇಶವು ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ 4ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಕಲಬುರಗಿಯಲ್ಲಿ 500 ಮೆಗಾವ್ಯಾಟ್ ಸೋಲಾರ್ ಪಾರ್ಕ್ ಸ್ಥಾಪಿಸುವ ಯೋಜನೆ ಮಾತುಕತೆ ಹಂತದಲ್ಲಿದೆ ಎಂದು ಚಂದು ಪಾಟೀಲ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತ ನಾಡಿ, ವಿದ್ಯಾರ್ಥಿಗಳು ನವೀಕರಿಸ ಬಹುದಾದ ಇಂಧನಗಳ ಮೂಲ ಕುರಿತು ಹೆಚ್ಚು ಹೆಚ್ಚು ಸಂಶೋಧನೆ ಮಾಡಿ ಪ್ರಕೃತಿಗೆ ಮತ್ತು ದೇಶಕ್ಕೆ ಸಹಾಯವಾಗಬೇಕು ಎಂದರು.
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಅನಿಲಕುಮಾರ ಬಿಡವೆ ಸಹ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಹೈದ್ರಾಬಾದ್‌ನ ಎಚ್ ಐಇಇ ಎಂಪವರಿಂಗ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಮದನ್ ಮೋಹನ್ ಗೌಡ ಕೌಕುಂಟ್ಲ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಡೀನ್ ಡಾ| ಶಿವಕುಮಾರ ಜವಳಗಿ, ಗೋದುತಾಯಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಎಂ. ಶಶಿಕಲಾ, ಭರತ, ಮಾಲಿನಿ ಶಿವಕುಮಾರ, ಉಮೇಶ ಪಾಟೀಲ, ಸುಷ್ಮಾ ಪಾಟೀಲ ವೇದಿಕೆ ಮೇಲಿದ್ದರು. ಪ್ರೊ| ಶೃತಿ, ಪ್ರೊ| ಅಭಿಲಾಷಾ ನಿರೂಪಿಸಿದರು. ಪ್ರೊ| ಸಾವಿತ್ರಿ ಸ್ವಾಗತಿಸಿದರು, ಪ್ರೊ| ಗೀತಾ ವಂದಿಸಿದರು.