Advertisement

ನಿಗದಿತ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹಕ್ಕೆ ಗಮನ ಕೊಡಿ:ಅಧಿಕಾರಿಗಳಿಗೆ ಸಚಿವ ಎಂಟಿಬಿ

03:02 PM Aug 11, 2022 | Team Udayavani |

ಬೆಂಗಳೂರು: ಕೋವಿಡ್ ನಂತರ ಆಸ್ತಿ ಮತ್ತು ನೀರಿನ ಸಂಗ್ರಹ ಶೇಕಡಾ 50 ರಿಂದ 60ಕ್ಕೆ ಕುಸಿದಿದ್ದು, ಇದನ್ನು ಶೇಕಡಾ 90 ರಷ್ಟಕ್ಕೆ ಏರಿಸುವುದರಿಂದ ಮಾತ್ರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಸಾಧ್ಯ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಸ್ಥೆ ವಹಿಸಿ ತೆರಿಗೆ ಸಂಗ್ರಹಕ್ಕೆ ಮುಂದಾಗಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜು ಕರೆ ನೀಡಿದ್ದಾರೆ.

Advertisement

ವಿಕಾಸಸೌಧದಲ್ಲಿ ಗುರುವಾರ ಸಿಮ್ಯಾಕ್ ಸಂಸ್ಥೆಯು ಪೌರಾಡಳಿತ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಉತ್ತಮ ಪದ್ಧತಿಗಳ ದಾಖಲೀಕರಣವನ್ನು ಬಿಡುಗಡೆಗೊಳಿಸಿ ನಂತರ ಪ್ರಶಸ್ತಿ ಪ್ರದಾನ ಮಾಡಿ ಸಚಿವ ಎಂಟಿಬಿ ನಾಗರಾಜು ಮಾತನಾಡಿದರು.

ಪಟ್ಟಣ ಮತ್ತು ನಗರ ಪ್ರದೇಶಗಳು ವೇಗವಾಗಿ ಬೆಳೆಯುತ್ತಿದ್ದು, ಅದಕ್ಕುನುಗುಣವಾಗಿ ಜನಸಂಖ್ಯೆ ಮತ್ತು ವಾಹನ ದಟ್ಟಣೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳು ನಾಗರೀಕ ಸೌಲಭ್ಯಗಳನ್ನು ಕಲ್ಪಿಸಲು ಸಜ್ಜಾಗಬೇಕಿದೆ ಎಂದು ಸೂಚಿಸಿದರು.

3,885 ಕೋಟಿ ರೂಪಾಯಿಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕಾಮಗಾರಿಗಳು ಸದ್ಯದಲ್ಲೇ ಆರಂಭವಾಗಲಿವೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿರುವ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಯಶಸ್ವಿಗೊಳಿಸಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವಿಶೇಷ ಗಮನ ಹರಿಸುವಂತೆ ಸೂಚಿಸಿದರು.

Advertisement

ಇದೇ ಸಂದರ್ಭದಲ್ಲಿ ವಿಶೇಷ ಪ್ರಶಸ್ತಿಗೆ ಪಾತ್ರವಾದ ಬಿಡಬ್ಲ್ಯೂಎಸ್ಎಸ್ ಬಿ, ಕೆಎಸ್ಆರ್ಟಿಸಿ, ಬಳ್ಳಾರಿ ಹಾಗೂ ಮೈಸೂರು ಮಹಾನಗರ ಪಾಲಿಕೆಗಳು ಹಾಗೂ ಮುಳಗುಂದ, ತರೀಕೆರೆ ಮತ್ತು ಉಡುಪಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳಿಗೆ ಕೆಪಿಎಸ್‌ಸಿ ಮೂಲಕ ನೇಮಕಗೊಂಡಿರುವ 52 ಕಿರಿಯ ಇಂಜಿನಿಯ‌ಗಳಲ್ಲಿ ಕೆಲವರಿಗೆ ಇದೇ ಸಂದರ್ಭದಲ್ಲಿ ಸಚಿವರು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು.

ಸಮಾರಂಭದಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕಿ ಶ್ರೀಮತಿ ಅರ್ಚನಾ, ಕೆಎಸ್ಆರ್ಟಿಸಿ ನಿರ್ದೇಶಕ ನವೀನ್ ಭಟ್ ಸೇರಿದಂತೆ ರಾಜ್ಯದಾದ್ಯಂತ ಆಗಮಿಸಿದ್ದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next