Advertisement

ಆಡಳಿತದತ್ತ ಹರಿಯಲಿ ಗಮನ: ಕಡೆಗೂ ಒಂದಾದ ಬಣಗಳು

08:21 AM Aug 22, 2017 | |

ದಿನಕರನ್‌ ಅವರಿಂದ ಸರಕಾರಕ್ಕಿರುವ ಬೆದರಿಕೆಯನ್ನು ಓಪಿಎಸ್‌ ಮತ್ತು ಇಪಿಎಸ್‌ ಯಾವ ರೀತಿ ಎದುರಿಸುತ್ತಾರೆ ಎನ್ನುವುದರ ಮೇಲೆ ಸರಕಾರದ ಭವಿಷ್ಯ ನಿಂತಿದೆ. 

Advertisement

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ನೇತೃತ್ವದ ಬಣಗಳು ಇಂದು ಒಗ್ಗೂಡಿದ್ದು ತಮಿಳುನಾಡು ಮಾತ್ರವಲ್ಲದೆ ದೇಶದ ರಾಜಕೀಯದ ಮಟ್ಟಿಗೂ ಮಹತ್ವದ ಬೆಳವಣಿಗೆ. ಸೋಮವಾರ ಎರಡೂ ಬಣಗಳು ಎಲ್ಲ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿರುವಂತೆ ಕಾಣಿಸುತ್ತಿದೆ. ಆದರೆ ಓಪಿಎಸ್‌ಗೆ ಪಕ್ಷ ಮತ್ತು ಇಪಿಎಸ್‌ಗೆ ಸರಕಾರ ಸಿಗುವ ರಾಜೀಸೂತ್ರದ ಮಾಧ್ಯಮಗಳ ಕಲ್ಪನೆ ಮಾತ್ರ ಹುಸಿಯಾಗಿದೆ. ಓಪಿಎಸ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಎರಡೂ ಬಣಗಳು ಜತೆಯಾಗಿ ಸರಕಾರವನ್ನು ಮುನ್ನಡೆಸುವ ನಿರ್ಧಾರಕ್ಕೆ ಬಂದಿವೆ.

ಒಂದು ವೇಳೆ ಪಕ್ಷ ಒಂದು ಬಣದ ಕೈಯಲ್ಲಿ ಹಾಗೂ ಸರಕಾರ ಇನ್ನೊಂದು ಬಣದ ಕೈಯಲ್ಲಿದ್ದರೆ ಮತ್ತೂಂದು ಸುತ್ತಿನ ಕಚ್ಚಾಟವಾಗುವ ಸಾಧ್ಯತೆಯಿತ್ತು. ಎರಡೂ ಬಣಗಳು ಸರಕಾರದಲ್ಲಿರಲು ತೀರ್ಮಾನಿಸಿರುವುದರಿಂದ ಪರಸ್ಪರ ಸಹಮತದಿಂದ ಸರಕಾರ ನಡೆಸಲು ಸಾಧ್ಯ. ಓಪಿಎಸ್‌ ಬಣದ ಕೆಲವರಿಗೆ ಸಚಿವ ಸ್ಥಾನಗಳು ಕೂಡ ಸಿಗಲಿದೆ. ಉಭಯ ಬಣಗಳ ಒಗ್ಗೂಡುವಿಕೆಯಿಂದ ಜಯಲಲಿತಾ  ಉತ್ತರಾಧಿಕಾರಿ ಎಂದು ಬಿಂಬಿಸಿಕೊಂಡಿದ್ದ, ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿ. ಕೆ. ಶಶಿಕಲಾ ಮತ್ತು ಅವರ ಸೋದರ ಬಂಧು ಟಿ.ಟಿ.ವಿ. ದಿನಕರನ್‌ ಅವರ ರಾಜಕೀಯ ಭವಿಷ್ಯ ಮುಗಿದಂತಾಗಿದೆ. ಜಯಲಲಿತಾ ನಿಧನಾನಂತರ ಪಕ್ಷದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಳ್ಳಲು ಶಶಿಕಲಾ ನಡೆಸಿದ ನಾಟಕಗಳು ಒಂದೆರಡಲ್ಲ.   ಜೈಲಿನಲ್ಲಿರುವಾಗಲೂ ಪಕ್ಷ ಮತ್ತು ಸರಕಾರವನ್ನು  ನಿಯಂತ್ರಿಸಲು ಶಶಿಕಲಾ ಪ್ರಯತ್ನಿಸಿದ್ದರು. ಇದಕ್ಕೆ ತೀವ್ರ ವಿರೋಧ ಒಡ್ಡಿದ್ದು ಪನ್ನೀರ್‌ಸೆಲ್ವಂ ಬಣ. ಎರಡೂ ಬಣಗಳು ಒಂದಾಗಲು ಪನ್ನೀರ್‌ಸೆಲ್ವಂ ಹಾಕಿದ ಮೊದಲ ಶರತ್ತೇ ಶಶಿಕಲಾ ಮತ್ತು ದಿನಕರನ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕೆನ್ನುವುದು. ಈ ಶರತ್ತಿಗೆ ಪಳನಿಸ್ವಾಮಿ ಬಣ ಒಪ್ಪಿರುವುದರಿಂದ ಎಐಎಡಿಎಂಕೆಯಲ್ಲಿ ಶಶಿಕಲಾ ಮತ್ತವರ ಬೆನ್ನ ಹಿಂದಿರುವ ಮನ್ನಾರ್‌ಗುಡಿ ಮಾಫಿಯಾದ ಹಿಡಿತ ತಪ್ಪಿದಂತಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಎಐಎಡಿಎಂಕೆಯಲ್ಲಿ ಏಕವ್ಯಕ್ತಿ ಚಕ್ರಾಧಿಪತ್ಯ ಕೊನೆಗೊಂಡಂತಾಗಿದೆ. ಸರಕಾರಕ್ಕೆ ಮಾರ್ಗದರ್ಶನ ನೀಡಲು ಒಂಬತ್ತು ಮಂದಿಯ ಸಮಿತಿಯನ್ನು ರಚಿಸಲು ತೀರ್ಮಾನಿಸಿರುವುದು ಇದಕ್ಕೆ ಪೂರಕವಾಗಿರುವ ಅಂಶ. ಅಂತೆಯೇ ಎರಡೆಲೆ ಚಿಹ್ನೆ ಸಿಗಲು ಇದ್ದ ಅಡ್ಡಿಯೂ ನಿವಾರಣೆಯಾದಂತಾಗಿದೆ. ಹಾಗೆಂದು ಇಷ್ಟಕ್ಕೆ ಎಐಎಡಿಎಂಕೆಯ ಸಮಸ್ಯೆಗಳೆಲ್ಲ ಮುಗಿಯಿತು ಎಂದು ಹೇಳುವಂತಿಲ್ಲ.

ಮುಖ್ಯವಾಗಿ ದಿನಕರನ್‌ ಅವರಿಂದ ಸರಕಾರಕ್ಕಿರುವ ಬೆದರಿಕೆಯನ್ನು ಓಪಿಎಸ್‌ ಮತ್ತು ಇಪಿಎಸ್‌ ಯಾವ ರೀತಿ ಎದುರಿಸುತ್ತಾರೆ ಎನ್ನುವುದರ ಮೇಲೆ ಸರಕಾರದ ಭವಿಷ್ಯ ನಿಂತಿದೆ. ತನಗೆ 30 ಶಾಸಕರ ಬೆಂಬಲವಿದೆ ಎಂದು ದಿನಕರನ್‌ ಹೇಳುತ್ತಿದ್ದಾರೆ. ಒಂದು ವೇಳೆ ಇಷ್ಟು ಶಾಸಕರನ್ನು ದಿನಕರನ್‌ ಎಐಎಡಿಎಂಕೆಯಿಂದ ಹೊರಗೆ ಕರೆ ತಂದರೆ ತತ್‌ಕ್ಷಣಕ್ಕೆ ಸರಕಾರಕ್ಕೆ ಅಪಾಯವಾಗದಿದ್ದರೂ ಭವಿಷ್ಯ ಸುಭದ್ರವಾಗಿರಬಹುದು ಎಂದು ಹೇಳುವಂತಿಲ್ಲ. ಪಕ್ಷ ಇನ್ನೊಮ್ಮೆ ವಿಭಜನೆಯಾಗದಂತೆ ನೋಡಿಕೊಳ್ಳದಂತೆ ನೋಡಿಕೊಳ್ಳುವುದು ಇಪಿಎಸ್‌ ಮತ್ತು ಓಪಿಎಸ್‌ ಅವರ ಅನುಭವ ಮತ್ತು ಜಾಣ್ಮೆಯನ್ನು ಅವಲಂಬಿಸಿದೆ. ಇದಕ್ಕೂ ಮೊದಲು ಸಚಿವ ಸ್ಥಾನಗಳನ್ನು ಹಂಚುವಾಗಲೇ ಕಾಣಿಸಿಕೊಳ್ಳುವ ಭಿನ್ನಾಭಿಪ್ರಾಯ, ಅಸಮಾಧಾನವನ್ನು ನಿಭಾಯಿಸುವ ಸವಾಲು ಕೂಡ ಇದೆ. ಇದೇ ವೇಳೆ ಜಯಲಲಿತಾ ಆಪ್ತರು, ಬಂಧುಗಳು ಎಂದು ಹೇಳಿಕೊಳ್ಳುತ್ತಿರುವ ಹಲವು ಮಂದಿ ಆಗಾಗ ಕಾಣಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಪೋಯೆಸ್‌ ಗಾರ್ಡನ್‌ ಅನ್ನು ಸ್ಮಾರಕವಾಗಿ ಪರಿವರ್ತಿಸುವ ಪ್ರಸ್ತಾವವನ್ನು ಜಯಲಲಿತಾ ಸೊಸೆಯೇ ವಿರೋಧಿಸುತ್ತಿದ್ದಾರೆ. ಇಂತಹ ಬಂಧುಗಳ ಪಕ್ಷ ಮತ್ತು ಜಯಲಲಿತಾ ಆಸ್ತಿಗಳ ಮೇಲೆ ಮಾಡುವ ಹಕ್ಕು ಸ್ಥಾಪನೆಯ ಪ್ರಯತ್ನಗಳನ್ನು ಕೂಡ ಸಮರ್ಥವಾಗಿ ನಿಭಾಯಿಸಬೇಕು. 

ಡಿ.5ರಂದು ಜಯಲಲಿತಾ ತೀರಿಕೊಂಡ ಅನಂತರ ಕಳೆದ ಒಂಬತ್ತು ತಿಂಗಳಲ್ಲಿ ತಮಿಳುನಾಡು ಅಕ್ಷರಶಃ ಅರಾಜಕವಾಗಿತ್ತು. ನೆಪಮಾತ್ರಕ್ಕೆ ಇದ್ದ ಸರಕಾರಕ್ಕೆ ಕಚ್ಚಾಟವನ್ನು ನಿಭಾಯಿಸುವುದೇ ಮುಖ್ಯ ಕೆಲಸವಾಗಿದ್ದುದರಿಂದ ಆಡಳಿತ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಇದರಿಂದಾಗಿ ಅಭಿವೃದ್ಧಿ ಯೋಜನೆಗಳೆಲ್ಲ ನನೆಗುದಿಗೆ ಬಿದ್ದಿರುವುದು ಮಾತ್ರವಲ್ಲದೆ ಹೂಡಿಕೆ ಮೇಲೂ ವ್ಯತಿರಿಕ್ತ ಪರಿಣಾಮವಾಗಿದೆ. ಇನ್ನಾದರೂ ಇಪಿಎಸ್‌ ಮತ್ತು ಓಪಿಎಸ್‌ ಆಡಳಿತವನ್ನು ಹಳಿಗೆ ತರುವತ್ತ ಗಮನ ಹರಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next