Advertisement

ವನ್ಯಜೀವಿ-ಮಾನವ ಸಂಘರ್ಷ ಕೊನೆಗಾಣಿಸುವತ್ತ ಇರಲಿ ಗಮನ

11:34 PM Dec 03, 2022 | Team Udayavani |

ಮೂರು ದಿನಗಳಿಂದ ಬೆಂಗಳೂರಿನ ಸುತ್ತಮುತ್ತ ಕಂಡು ಬಂದಿರುವ ಚಿರತೆ ಗಳ ಬಗ್ಗೆಯೇ ಮಾಧ್ಯಮ ಗಳಲ್ಲಿ ಸುದ್ದಿ. ಇದೇನೋ ನ್ಯೂಟನ್‌ ಪ್ರಯೋಗಗಳ ಮೂಲಕ ಹೊಸದಾಗಿ ಕಂಡು ಹಿಡಿದಿರುವ, ಪ್ರಪಂಚವನ್ನು ಬದಲಾಯಿಸುವ ಫಲಿತಾಂಶ ಅನ್ನುವ ಹಾಗೆ ಎಲ್ಲರೂ ಮಾತನಾಡುತ್ತಿದ್ದಾರೆ. ನಿಜಾಂಶವೆಂದರೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಲೆತಲಾಂತರಗಳಿಂದ ಚಿರತೆಗಳು ಬದುಕಿವೆ. ರಾಜ ಧಾನಿಯ ಸುತ್ತಮುತ್ತ ಇರುವ ಕಲ್ಲು ಗುಡ್ಡೆ, ಎಲೆ ಉದುರುವ ಮತ್ತು ಕುರುಚಲು ಕಾಡುಗಳು ಚಿರತೆಗಳಿಗೆ ಉತ್ತಮ ಆವಾಸಸ್ಥಾನ. ಇಲ್ಲಿ ಸಿಗುವ ಚಿರತೆಗಳ ನೈಸರ್ಗಿಕ ಆಹಾರವಾದ ಕಾಡು ಹಂದಿ, ಮೊಲ, ಮುಳ್ಳು ಹಂದಿ, ಸಾರಗಗಳ ಜತೆಗೆ ಕುರಿ, ಮೇಕೆ, ನಾಯಿ ಎಲ್ಲವೂ ಚಿರತೆಗಳ ಉಳಿವಿಗೆ ಸೂಕ್ತ ವಾತಾವರಣವನ್ನು ಮಾಡಿಕೊಟ್ಟಿವೆ.

Advertisement

ಇಂದು ಬೆಂಗಳೂರಿನ ಭಾಗವಾಗಿರುವ ಬಿ.ಎಂ.ಕಾವಲ್‌, ಯು.ಎಂ. ಕಾವಲ್‌, ತಾತಗುಣಿ, ತಲಘಟ್ಟಪುರ, ತೊಟ್ಟಿಕಲ್ಲು, ಗುಲ್ಲಳ್ಳಿಗುಡ್ಡ, ಕೆಂಗೇರಿ, ಹೆಸರಘಟ್ಟ, ಕೆ.ಜಿ. ಲಕ್ಕೇನಹಳ್ಳಿ ಮತ್ತಿತರ ಪ್ರದೇಶಗಳಲ್ಲಿ ನಮ್ಮ ಅಧ್ಯಯನದ ಅಂಗವಾಗಿ ಚಿರತೆಗಳನ್ನು ದಾಖಲಿಸಿದ್ದೇವೆ. ಬೆಂಗಳೂರು ನಗರದ ಅಂಚಿನಲ್ಲೇ ಸುಮಾರು 30ರಿಂದ 35 ಚಿರತೆಗಳು ಇರುವ ಸಾಧ್ಯತೆಯಿದೆ. ಹಾಗೆಯೇ ಬೆಂಗಳೂರಿಗೆ ಹೊಂದಿ ಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ನಮ್ಮ ಕೆಮರಾ ಟ್ರ್ಯಾಪ್‌ ಅಧ್ಯಯನಗಳ ಪ್ರಕಾರ 40 ಚಿರತೆಗಳಿವೆ.

ಚಿರತೆಗಳು ತೋಟಗಳ ಮಧ್ಯದಲ್ಲಿಯೇ ಮನೆಗಳ ಮುಂದೆಯೇ ಇಷ್ಟು ವರ್ಷ ಓಡಾಡಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿಸಿಟಿವಿಗಳಲ್ಲಿ ಇವುಗಳು ದಾಖಲಾಗುತ್ತಿರು ವುದರಿಂದ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂಬ ಅಭಿಪ್ರಾಯ ಮೂಡಿದೆ. ಅದರೊಡನೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಇವುಗಳ ಇರುವಿಕೆ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಪ್ರಚಾರ ಮಾಡಿ ಜನರಲ್ಲಿ ಆತಂಕ ಮೂಡುವ ಹಾಗೆ ಮಾಡಲಾಗುತ್ತಿದೆ. ಉತ್ತರಾಖಂಡದಲ್ಲಿ ನಡೆದ ಒಂದು ಘಟನೆಯನ್ನು ನಿನ್ನೆಯಿಂದ ವಾಟ್ಸ್‌ಆ್ಯಪ್‌ ನಲ್ಲಿ ಬೆಂಗಳೂರಿನ ತುರಹಳ್ಳಿಯಲ್ಲಿ ಎಂದು ಹೇಳಿ ಸುಳ್ಳು ಮಾಹಿತಿ ಹಬ್ಬಿಸಲಾಗಿದೆ.

ರಾಜ್ಯದ ನೂರಾರು ಗ್ರಾಮಗಳಲ್ಲಿ ಪ್ರತೀ ದಿನವೂ ಚಿರತೆಗಳು ಕಾಣಿಸಿಕೊಳ್ಳುತ್ತವೆ, ದನ-ಕರುಗಳು, ಕುರಿ- ಮೇಕೆಗಳನ್ನು ಹಿಡಿದು ತಿನ್ನುತ್ತವೆ. ಕೆಲವೊಮ್ಮೆ ಜನರಿಗೆ ತೀವ್ರವಾಗಿ ಗಾಯವಾಗುವುದು ಮತ್ತು ಅಪರೂಪಕ್ಕೆ ಜೀವ ಹಾನಿಯಾಗುವುದೂ ಇದೆ. ಆದರೆ ಇದ್ಯಾವುದು ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ ಬೆಂಗಳೂರಿನ ಪಕ್ಕದಲ್ಲಿ ಕಾಣಿಸಿಕೊಂಡಿದೆ ಎನ್ನುವ ವಿಚಾರಕ್ಕೆ ಪ್ರಚಾರದ ಅಬ್ಬರವಾಗಿದೆ. ರಾಮನಗರ, ತುಮಕೂರು, ಹಾಸನ, ಮಂಡ್ಯ, ಚಾಮರಾಜನಗರ ಮತ್ತಿತರ ಕೆಲವು ಜಿಲ್ಲೆಗಳ ರೈತರಿಗೆ ಕೇಳಿದರೆ “ಇದ್ಯಾವ್‌ ದೊಡ್ಡ ವಿಷ್ಯ ಬುಡಿ, ನಮ್ಮೂರ್‌ ಪಕ್ಕದ್‌ ಗುಡ್ಡಲ್ಲಿ ದಿವ್ಸ ಕಾಣ್‌ಸ್ಕೋತದೆ’ ಅಂತಾರೆ. ಆದರೆ ಒಂದು ಮಾತಂತೂ ನಿಜ. ದಿನೇ ದಿನೆ ಮಾನವ-ಚಿರತೆ ಸಂಘರ್ಷ ಹೆಚ್ಚುತ್ತಿದೆ. ಇದರಿಂದ ಸಾರ್ವ ಜನಿಕರಲ್ಲಿ ವನ್ಯಜೀವಿ ಸಂರಕ್ಷಣೆ, ಅದರಲ್ಲೂ ಹೆಚ್ಚು ಸಂಘರ್ಷಕ್ಕೊಳಗಾಗುವ ಚಿರತೆ, ಆನೆ, ಕರಡಿ, ಕಾಡು ಹಂದಿಯಂತಹ ಪ್ರಾಣಿಗಳ ಬಗ್ಗೆ ಸಹನೆ, ಅನುಭೂತಿ ಕಡಿಮೆಯಾಗುತ್ತಿದೆ. ಅದೂ ಒಂದು ಜೀವ ಅದಕ್ಕೂ ಜೀವಿಸಲು ಹಕ್ಕಿದೆ ಎಂದು ಹೇಳುತ್ತಿದ್ದ ದಿನಗಳು ಮರೆಯಾಗುತ್ತಿವೆ.

ಚಿರತೆಗಳಿಗೆ ದಿನ ವೊಂದಕ್ಕೆ ಸುಮಾರು 4 ಕೆ.ಜಿ.ಯಷ್ಟು ಆಹಾರದ ಆವಶ್ಯಕತೆಯಿರುತ್ತದೆ. ಹಾಗಾಗಿ ಅದು ಸಣ್ಣ ಪುಟ್ಟ ಕಾಡು ಪ್ರದೇಶ, ಕಲ್ಲು ಬಂಡೆಗಳಿರುವ ಗುಡ್ಡಗಳು, ಕುರುಚಲು ಕಾಡು, ಎಲ್ಲ ಕಡೆಯೂ ಬದುಕಬಲ್ಲವು. ಎಲ್ಲ ಆವಾಸ ಸ್ಥಾನಗಳಿಗೆ ಹೊಂದಿಕೊಳ್ಳುವ ಗುಣ, ಅದರ ದೇಹ ಗಾತ್ರ, ಮತ್ತು ಸಣ್ಣ ಪುಟ್ಟ ಪ್ರಾಣಿಗಳನ್ನು ಭಕ್ಷಿಸಿ ಬದುಕಿ ಉಳಿಯ ಬಲ್ಲ ಶಕ್ತಿ ಈ ಮಾಂಸಾಹಾರಿ ಪ್ರಾಣಿ ಎಲ್ಲ ಕಡೆಯೂ ಹೊಂದಿಕೊಂಡು ಬದುಕುವ ಹಾಗೆ ಮಾಡಿದೆ. ಇದು ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿದೆ.

Advertisement

ಮುಂದಿನ ವರ್ಷಗಳಲ್ಲಿ ನಮ್ಮ ದೇಶದ ವನ್ಯಜೀವಿಗಳ ಭವಿಷ್ಯ ಅವುಗಳ ಸಂಘರ್ಷವನ್ನು ಕಡಿಮೆ ಮಾಡುವುದರ ಮೇಲೆ ಅವಲಂಬಿತವಾಗಿದೆ. ಆದರೆ ಸಂಘರ್ಷವನ್ನು ಕಡಿಮೆ ಮಾಡುವುದು ಅಥವಾ ತಾಳಿಕೆಯ ಮಟ್ಟಕ್ಕೆ ತರುವುದು ಸುಲಭದ ಮಾತಲ್ಲ. 1972ರ ಅನಂತರದ ವನ್ಯಜೀವಿ ಸಂರಕ್ಷಣ ಕಾಯಿದೆ ಮತ್ತಿತರ ಕಟ್ಟಳೆಗಳಿಂದ ಕೆಲವು ವನ್ಯಜೀವಿ ಪ್ರಭೇದಗಳ ಸಂಖ್ಯೆ ಹೆಚ್ಚಾಗಿದೆ. ಇಂದು ರಾಜ್ಯದಲ್ಲಿ ಸುಮಾರು 2,500 ಚಿರತೆಗಳಿವೆ. ಆದರೆ ಅವುಗಳ ನೈಸರ್ಗಿಕ ಆವಾಸಸ್ಥಾನ ದಿನೇ ದಿನೆ ಕ್ಷೀಣಿಸುತ್ತಿದೆ. ರಾಜ್ಯದಲ್ಲಿ ಮಾನವ-ಚಿರತೆ ಸಂಘರ್ಷದ ಶೇ.50ಕ್ಕಿಂತ ಹೆಚ್ಚು ಸನ್ನಿವೇಶಗಳು ಕಾಣುವುದು 5 ಜಿಲ್ಲೆಗಳಲ್ಲಿ (ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಮತ್ತು ಹಾಸನ). ಇತ್ತೀಚೆಗೆ ಕೊಪ್ಪಳ, ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳಲ್ಲೂ ಹೆಚ್ಚುತ್ತಿದೆ. ಇಲ್ಲಿ ಲಕ್ಷ್ಯವಹಿಸಬೇಕಾದ ಅಂಶ ವೆಂದರೆ ಇದೇ ಜಿಲ್ಲೆಗಳಲ್ಲಿ ಕಲ್ಲು ಕ್ವಾರಿ ಅಥವಾ ಗಣಿ ಗಾರಿಕೆಯು ಅತಿಯಾಗಿ ನಡೆಯುತ್ತಿರುವುದು. ತಮ್ಮ ನೈಸರ್ಗಿಕ ಆವಾಸಸ್ಥಾನ ಕಳೆದುಕೊಂಡ ಚಿರತೆಗಳು ಮಾನವ ನಿರ್ಮಿತ ಆವಾಸಸ್ಥಾನಗಳಿಗೆ (ಕಬ್ಬಿನ ಗದ್ದೆ, ಜೋಳದ ಹೊಲ, ನೀಲಗಿರಿ ತೋಪು, ಇತರ) ಸ್ಥಳಾಂತರ ಗೊಳ್ಳುತ್ತವೆ ಮತ್ತು ಸಂಘರ್ಷ ಪ್ರಾರಂಭವಾಗುತ್ತದೆ. ಹಾಗಾಗಿ ಸಮಾಜ ನಮಗೆ ನೈಸರ್ಗಿಕ ಸಂಪನ್ಮೂಲಗಳ ಅತಿ ಯಾದ ಬಳಕೆ ಬೇಕೋ ಅಥವಾ ವನ್ಯಜೀವಿ ಸಂಘರ್ಷ ವನ್ನು ಕಡಿಮೆಗೊಳಿಸುವತ್ತ ಆದ್ಯತೆ ನೀಡಬೇಕೋ ಎಂದು ನಿರ್ಧರಿಸಬೇಕು. ಗ್ರಾನೈಟ್‌, ಕಬ್ಬಿಣದ ಅದಿರಿನಂತಹ ನೈಸರ್ಗಿಕ ಸಂಪನ್ಮೂಲಗಳಿಂದ ಲಾಭ ಪಡೆಯುವವರು ಬೇರೆ, ಆದರೆ ಅದರ ಪರಿಣಾಮವಾಗಿ ಮಾನವ- ವನ್ಯಜೀವಿ ಸಂಘರ್ಷದ ಪ್ರಭಾವ ಆಗುವುದು ಹೆಚ್ಚಾಗಿ ಆರ್ಥಿಕವಾಗಿ ದುರ್ಬಲವಾಗಿರುವವರ ಮೇಲೆ. ನಮ್ಮನ್ನು ಆಳುವವರ ಮೇಲೆ ವನ್ಯಜೀವಿ ಸಂಘರ್ಷದ ಪರಿಣಾಮ ವಾಗುವುದಿಲ್ಲ, ಹಾಗಾಗಿ ಅವರು ಇದರತ್ತ ಹೆಚ್ಚು ಗಮನ ಹರಿಸುವುದಿಲ್ಲ.

ಹೇಗೆ ಸಂಘರ್ಷ ಹೆಚ್ಚಿಸಲು ಹಲವಾರು ಸರಕಾರಿ ಇಲಾಖೆಗಳು ಕಾರಣವಾಗಿವೆಯೋ ಹಾಗೆಯೇ ಸಂಘರ್ಷ ವನ್ನು ಕಡಿಮೆಗೊಳಿಸುವುದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಸಮಾಜದ ಹಲವು ವರ್ಗದ ಜನರು ಹಾಗೂ ಸರಕಾರದ ಹಲವು ಇಲಾಖೆಗಳು ಒಗ್ಗೂಡಬೇಕು. ಇದರಲ್ಲಿ ಮಾಧ್ಯಮಗಳ ಪಾತ್ರವೂ ಬಹು ಮುಖ್ಯ. ಜನರು ಕೆಲವು ಮುಂಜಾಗ್ರತ ಕ್ರಮಗಳನ್ನು ಕೈಗೊಂಡರೆ ಪರಿಣಾಮಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಬಹುದು ಮತ್ತು ಜೀವ ಹಾನಿಯನ್ನು ತಡೆಯಬಹುದು.

ಜನರು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು
ಚಿರತೆಗಳು ಇರುವ ಪ್ರದೇಶಗಳಲ್ಲಿ ರಾತ್ರಿ ವೇಳೆ ಒಂಟಿಯಾಗಿ ಓಡಾಡದೆ ಜತೆಯಲ್ಲಿ ಮಾತನಾಡಿಕೊಂಡು ಹೋಗಬೇಕು. ಇದರಿಂದ ಚಿರತೆಗಳು ಹಾದಿ ಬಿಟ್ಟು ಹೋಗುತ್ತವೆ.
ಒಬ್ಬರೇ ಓಡಾಡುವ ಅನಿವಾರ್ಯತೆ ಇದ್ದರೆ ಮೊಬೈಲ್‌ನಲ್ಲಿ ಹಾಡು ಹಾಕಿಕೊಂಡು ಹೋಗಿ.
ಸಾಕು ಪ್ರಾಣಿಗಳನ್ನು ರಾತ್ರಿ ವೇಳೆ ಕೋಣೆಯೊಳಗೆ ಕೂಡಿ ಹಾಕಿ.
ಚಿರತೆಗಳಿರುವ ಪ್ರದೇಶಗಳಲ್ಲಿ ಬಯಲಿನಲ್ಲಿ ಬಹಿರ್ದೆಸೆಗೆ ಹೋಗಬೇಡಿ.
ಸುಳ್ಳು ಸುದ್ದಿ ಹಬ್ಬಿಸಬೇಡಿ, ಇದರಿಂದ ಜನ ಆತಂಕಗೊಳ್ಳುತ್ತಾರೆ.

ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳು
-ಅರಣ್ಯ ಇಲಾಖೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ಪ್ರತ್ಯೇಕವಾದ ವಿಭಾಗ ಮಾಡಬೇಕು ಮತ್ತು ಅವರಿಗೆ ವಿಶೇಷ ತರಬೇತಿ ಮತ್ತು ಸಂಪನ್ಮೂಲಗಳನ್ನು ಒದಗಿಸಿಕೊಡಬೇಕು.
-ಚಿರತೆಗಳನ್ನು ಅನಾವಶ್ಯಕವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು.
-ಚಿರತೆಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಗೆ ಒತ್ತು ಕೊಡಬೇಕು.
-ವನ್ಯಜೀವಿಗಳಿಂದ ಜೀವಹಾನಿಯಾದರೆ ಅದು ಸಂಭವಿಸಿದ ಸ್ಥಳದ ಮೇಲೆ ಅವಲಂಬಿಸದೆ ಎಲ್ಲೇ ಪ್ರಾಣ ಹಾನಿಯಾದರೂ ಪರಿಹಾರ ಮತ್ತು ಜೀವನಾಂಶ ಕೊಡಬೇಕು.
-ಚಿರತೆಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ಸಮತೋಲನದತ್ತ ತೆಗೆದುಕೊಂಡು ಹೋಗುವ ಕ್ರಮಗಳ ಬಗ್ಗೆ ಯೋಚಿಸಬೇಕಾಗಿದೆ.
-ರೈತರು ರಾತ್ರಿ ವೇಳೆ ತೋಟ, ಜಮೀನುಗಳಿಗೆ ನೀರು ಕಟ್ಟಲು ಹೋದಾಗ ಹಲವಾರು ಬಾರಿ ವನ್ಯಜೀವಿಗಳಿಂದ ಜೀವ ಹಾನಿಯಾಗಿದೆ. ಹಳ್ಳಿಗಳಲ್ಲಿ ದಿನದ ವೇಳೆ ಮೂರು ಫೇಸ್‌ ವಿದ್ಯುತ್ಛಕ್ತಿ ನೀಡುವ ಹಾಗೆ ವ್ಯವಸ್ಥೆ ಆಗಬೇಕು.
-ವನ್ಯಜೀವಿ ಸಂಘರ್ಷ ಇರುವ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ, ನೀರಿನ ವ್ಯವಸ್ಥೆ ಇಡಬೇಕು.
-ಕಾಡಂಚಿನ ಗ್ರಾಮಗಳಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು.
-ಸಂಘರ್ಷ ಇರುವ ಪ್ರದೇಶಗಳಲ್ಲಿ ಮಕ್ಕಳಿಗೆ ಶಾಲೆಗೆ ಹೋಗಲು ಕಡ್ಡಾಯವಾಗಿ ಸಾರಿಗೆ ವ್ಯವಸ್ಥೆ ಮಾಡಬೇಕು.

-ಸಂಜಯ್‌ ಗುಬ್ಬಿ,
ವನ್ಯಜೀವಿ ವಿಜ್ಞಾನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next