Advertisement

ಬರ ನಿರ್ವಹಣೆಗೆ ಗಮನ ಹರಿಸಿ: ಡೀಸಿ

05:39 PM Apr 26, 2019 | Team Udayavani |

ಹಾಸನ: ಲೋಕಸಭಾ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಬರ ನಿರ್ವಹಣೆಗೆ ಗಮನಹರಿಸಬೇಕೆಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಕೃತಿ ವಿಕೋಪ ಪರಿಹಾರ ಸಭೆಯಲ್ಲಿ ತಾಲೂಕುವಾರು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಯಾವುದೇ ಗ್ರಾಮವೂ ಕುಡಿಯುವ ನೀರಿನ ಪೂರೈಕೆಯಿಂದ ವಂಚಿತವಾಗಬಾರದು. ಸಾಧ್ಯವಿರುವ ಕಡೆ ಹೊಸ ಕೊಳವೆ ಬಾವಿ ಕೊರೆಸುವ, ಅಗತ್ಯವಿರುವ ಕಡೆ ಖಾಸಗಿ ಕೊಳವೆ ಬಾವಿಗಳಿಂದಲೂ ನೀರು ಪಡೆದುಕೊಂಡು ಸರಬರಾಜು ಮಾಡಬೇಕು. ಅನಿವಾರ್ಯ ಇರುವ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಿ ಎಂದರು.

ಸಮಸ್ಯಾತ್ಮಕ ಗ್ರಾಮಗಳ ಬಗ್ಗೆ ನಿಗಾ ವಹಿಸಿ: ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಸಂಘರ್ಷ ನಡೆಯುವ ಹಂತ ತಲುಪುತ್ತಿದೆ. ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು ಸಮಸ್ಯಾತ್ಮಕ ಗ್ರಾಮಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ತಾಲೂಕು ಟಾಸ್ಕ್ ಫೋರ್ಸ್‌ ಸಮಿತಿ ನಿರಂತರ ಮೇಲ್ವಿಚಾರಣೆ ಮಾಡಿ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿಭಾಯಿಸಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ನಿರ್ದೇಶನ ನೀಡಿದರು.

ಹೊಸ ಕಾಮಗಾರಿ ಅಂದಾಜು ಪಟ್ಟಿ ನೀಡಿ: ಕುಡಿಯುವ ನೀರು ಪೂರೈಕೆ ಬಿಲ್ಲುಗಳ ಸಲ್ಲಿಕೆಯಲ್ಲಿ ವಿಳಂಬ ಮಾಡಕೂಡದು. ಸಂಜೆಯೊಳಗೆ ನೀಡಬೇಕು. ಹೊಸ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಶನಿವಾರದೊಳಗೆ ನೀಡಬೇಕು ಎಂದು ತಾಕೀತು ಮಾಡಿದ ಜಿಲ್ಲಾಧಿಕಾರಿಯವರು, ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ತಹಶೀಲ್ದಾರರುಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ತಮ್ಮ ಗಮನಕ್ಕೆ ತರಬೇಖು. ಯಾವುದೇ ಬಿಲ್ಲುಗಳು ಬಾಕಿ ಇದ್ದಲ್ಲಿ ಅವುಗಳನ್ನು ತುರ್ತಾಗಿ ಕಚೇರಿಗೆ ಸಲ್ಲಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್‌.ವಿಜಯ ಪ್ರಕಾಶ್‌ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಈ ವರ್ಷ 3 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿ ಗುರಿಹೊಂದಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆಯ ಜಲ ಸಂವರ್ಧನೆ, ಜಲ ಮರುಪೂರಣ, ಕೆರೆಗಳ ಪುನಶ್ಚೇತನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

Advertisement

ಎಲ್ಲಾ ಗ್ರಾಮಗಳಲ್ಲಿಯೂ ಗೋಕಟ್ಟೆಗಳ ನಿರ್ಮಾಣವಾಗಬೇಕು ಹಾಗೂ ಅವುಗಳಲ್ಲಿ ಸದಾ ನೀರು ತುಂಬಿರಬೇಕು. ಯಾವುದೇ ಗ್ರಾಮಗಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಹಾಗೂ ಮೇವಿನ ಸಮಸ್ಯೆಯಾಗಬಾರದು ಎಂದ ಅವರು, ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ನೀರು ಸರಬರಾಜು ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಈಗಾಗಲೇ 1460 ಕೊಳವೆ ಬಾವಿಗಳು ಜಲ ಮರುಪೂರ್ಣ ಕಾಮಗಾರಿ ಕೈಗೊಳ್ಳಲಾಗಿದ್ದು, ಸುಮಾರು 1400 ರಷ್ಟು ಬಾವಿಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಬೇಕಿದೆ ಎಂದು ತಿಳಿಸಿದರು.

ಹಸಿರೀಕರಣಕ್ಕೆ ಆದ್ಯತೆ ನೀಡಿ: ಜಿಲ್ಲೆಯಲ್ಲಿ ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಲಭ್ಯತೆ ಇರುವ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಮೂಲಕ 50ಲಕ್ಷ ಗಿಡಗಳನ್ನು ನೆಡುವುದು ಮಾತ್ರವಲ್ಲದೇ ಅವುಗಳನ್ನು ಬೆಳೆಸುವುದು ಕೂಡ ಅವರದೇ ಜವಾಬ್ದಾರಿಯಾಗಿರುತ್ತದೆ. ಉತ್ತಮ ನೆರಳು ಕೊಡುವ ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವುದರ ಮೂಲಕ ಜಿಲ್ಲೆಯನ್ನು ಹಸಿರಾಗಿಸಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕಾಗಿದೆ ಎಂದರು.

ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ‌ ಆನಂದ್‌ಕುಮಾರ್‌ ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next