Advertisement

ಹಾರುತ ದೂರಾ ದೂರಾ…

08:38 PM Sep 17, 2019 | mahesh |

“ಅಜ್ಜಿ ನಾನು ಹಕ್ಕಿಯಾಗಿದ್ದರೆ ಎಷ್ಟು ಚೆನ್ನಾಗಿತ್ತು? ನಾನು ರಭಸದಿಂದ ಓಡಾಡುವ ವಾಹನಗಳ ಭಯವಿಲ್ಲದೆ, ಆಗಸದಲ್ಲಿ, ಹಾರಾಡುತ್ತಾ ಖುಷಿಯಾಗಿ ಆಟವಾಡುತ್ತಿದ್ದೆ’ ಎಂದಳು ಸಿರಿ. ಅವಳಾಸೆ ನೆರವೇರುವ ದಿನವೊಂದು ಬಂದಿತು!

Advertisement

“ಅಜ್ಜೀ, ನಮ್ಮ ಮನೆಯ ಕೈತೋಟದಲ್ಲಿ ಎರಡು ಹಕ್ಕಿಗಳನ್ನು ನೋಡಿದೆ. ಅವು ಎಷ್ಟು ಮುದ್ದಾಗಿವೆ! ಮೈ ಪೂರಾ ಬಂಗಾರದ ಬಣ್ಣ. ಪೇರಲೆ ಗಿಡದಲ್ಲಿ ಕುಳಿತು ಚಿಲಿಪಿಲಿ ಅಂತ ಕೂಗಿ ನನ್ನನ್ನು ಕರೆದಂತಾಯಿತು. ಹಕ್ಕಿಗಳು ಮಾತಾಡುತ್ತವೆಯೇ?’ ಪುಟ್ಟ ಸಿರಿ ಮುದ್ದಾಗಿ ಪ್ರಶ್ನೆ ಕೇಳಿದಳು.

“ಹೌದು ಸಿರಿ, ಹಕ್ಕಿಗಳಿಗೂ ಮಾತು ಬರುತ್ತದೆ. ಕೋಗಿಲೆಯ ಕುಹೂ ದನಿ, ಪಾರಿವಾಳದ ಕೀಂಚ್‌ ಕೀಂಚ್‌, ಗುಬ್ಬಿಯ ಚಿಂವ್‌ ಚಿಂವ್‌, ಕಾಗೆಗಳ
ಕಾ ಕಾ… ಎಲ್ಲಕ್ಕೂ ಅರ್ಥವಿರುತ್ತೆ. ಆದರೆ ನಮಗೆ ಅದು ಅರ್ಥವಾಗೋಲ್ಲ, ಗಿಣಿ ಸ್ವಲ್ಪ ಮಟ್ಟಿಗೆ ನಮ್ಮ ಮಾತುಗಳನ್ನು ಅನುಕರಿಸುತ್ತವೆ.

ಈಗ ಮೊಬೈಲ್‌ ಟವರ್‌, ಟೆಕ್ನಾಲಜಿ ಅಂತ ಪಕ್ಷಿ ಸಂಕುಲವೇ ಕಾಣೆ ಆಗಿದೆ. ಮರಗಳ ನಾಶದಿಂದ ಹಕ್ಕಿಗಳಿಗೆ ಗೂಡು ಕಟ್ಟುವ ಅವಕಾಶವೇ ಇಲ್ಲ, ಗುಬ್ಬಿ ಮನೆಯಲ್ಲೇ ಗೂಡು ಕಟ್ಟುವಾಗ ಎಷ್ಟು ಚಂದವಿರುತ್ತಿತ್ತು ಗೊತ್ತಾ ?’
“ಅಜ್ಜೀ , ನಮ್ಮ ಮನೆಯಲ್ಲಿ ಒಂದು ಗೂಡು ತಂದಿಟ್ಟರೆ? ನಾನೇ ಹಕ್ಕಿಗಳನ್ನು ನೋಡಿಕೊಂಡು ಆಟ ಆಡುತ್ತಾ ಇರ್ತೀನಿ, ನನ್ನ ಫ್ರೆಂಡ್‌ ಸುರಭಿ ಮನೇಲೂ ಪಂಜರದಲ್ಲಿ ಹಕ್ಕಿಗಳಿವೆ’ ಕಣ್ಣರಳಿಸಿ ಕೇಳಿದಳು ಸಿರಿ.

“ಹಕ್ಕಿಗಳನ್ನು ಪಂಜರದಲ್ಲಿ ಇಡುವುದು ತಪ್ಪು ಮಗು. ಹಕ್ಕಿಗಳು ಸ್ವತಂತ್ರವಾಗಿ ಗಿಡ, ಮರ, ಆಕಾಶ, ಕೆರೆ ಅನ್ನುತ್ತಾ ತನ್ನ ಬಂಧುಗಳೊಡನೆ ಹಾರಾಡುತ್ತಾ, ಹಾಯಾಗಿ ಜೀವನ ಸಾಗಿಸಬೇಕು. ಅವುಗಳನ್ನು ನಾವು ಕಟ್ಟಿ ಹಾಕಿದರೆ ಅವುಗಳ ಸ್ವಾಭಾವಿಕ ಚಲನೆಗೆ ಅಡ್ಡಿ ತಂದಂತೆ ಅಲ್ವಾ ?’ ಅಜ್ಜಿ ಹೇಳಿದರು.

Advertisement

“ಹಕ್ಕಿಗಳು ನಮ್ಮ ಮನೆಯ ಸುತ್ತಲೂ ಹಾರಾಡುತ್ತಿದ್ದರೆ ನನಗೆ ತುಂಬಾ ಖುಷಿ ಆಗುತ್ತೆ ಅಜ್ಜಿ. ಹಾಗಾಗಲು ನಾವು ಏನು ಮಾಡಬೇಕು?’ ಸಿರಿ ಕುತೂಹಲದಿಂದ ಕೇಳಿದಳು.

“ಇದು ಜಾಣ ಪ್ರಶ್ನೆ. ಮನೆಯ ತೋಟದಲ್ಲಿ ಇನ್ನಷ್ಟು ಗಿಡಗಳನ್ನು ನೆಡೋಣ, ಒಂದು ಸಣ್ಣ ಮಡಿಕೆಯಲ್ಲಿ ಕುಡಿಯಲು ನೀರು, ಅಲ್ಲಲ್ಲಿ ಕಾಳುಗಳನ್ನು ಚೆಲ್ಲಿದರೆ, ಹಕ್ಕಿಗಳು ನಮ್ಮ ಮನೆಯ ಮರದಲ್ಲಿಯೂ ಕೂಡ ಗೂಡು ಕಟ್ಟುತ್ತದೆ. ಎಲ್ಲಿ ಪಕ್ಷಿಗಳಿಗೆ ಆಹಾರ, ನೀರು, ಗಾಳಿ ನಿರ್ಭಯವಾಗಿ ಗೂಡು ಕಟ್ಟಿಕೊಳ್ಳುವ ಅವಕಾಶ ಇರುತ್ತೋ, ಅಲ್ಲೆಲ್ಲ ಹಕ್ಕಿಗಳ ಗುಂಪು ಕಾಣಬಹುದು’

“ಅಜ್ಜಿ ನಾನು ಹಕ್ಕಿಯಾಗಿದ್ದರೆ ಎಷ್ಟು ಚೆನ್ನ? ನಾನು ರಭಸದಿಂದ ಓಡಾಡುವ ವಾಹನಗಳ ಭಯವಿಲ್ಲದೆ, ಆಗಸದಲ್ಲಿ, ಹಾರಾಡುತ್ತ ಖುಷಿಯಾಗಿ ಆಟವಾಡಬಹುದಿತ್ತು.’

“ಅದೇನೋ ನಿಜ ಸಿರಿ, ಮನುಷ್ಯನ ಅತಿ ಬುದ್ದಿವಂತಿಕೆ, ಕುತೂಹಲಗಳಿಂದ ಕೆಡುಕೇ ಹೆಚ್ಚಾಗಿದೆ. ಸರಿ, ಈಗಾಗಲೇ ತಡವಾಗಿದೆ, ಸಂಜೆ ನಿನ್ನ ಹುಟ್ಟಿದ ಹಬ್ಬದ ತಯಾರಿ ನಡೆಯುತ್ತಿದೆ. ಮನೆಯೊಳಗೆ ಹೋಗೋಣ ನಿನ್ನ ಗೆಳೆಯರು ಬರುವ ಸಮಯ’ ಎನ್ನುತ್ತಾ ಅಜ್ಜಿ ಮನೆಯೊಳಕ್ಕೆ ಬಂದರು .

ಸಂಜೆ ಗೆಳೆಯರೊಂದಿಗೆ ಸಿರಿಯ ಹುಟ್ಟುಹಬ್ಬದ ಆಚರಣೆ ಶುರುವಾಯಿತು. ಸಿರಿಯ ಗೆಳತಿಯರು ಬಂದರು. ಮನೆ ತುಂಬಾ ಬಣ್ಣಬಣ್ಣದ ಹೀಲಿಯಂ ಅನಿಲ ತುಂಬಿದ ಬಲೂನುಗಳು ಇದ್ದವು. ಹೀಲಿಯಂ ಅನಿಲ ತುಂಬಿದ ಬಲೂನು ಗಾಳಿಯಲ್ಲಿ ಮೇಲೇರುವ ಸಂಗತಿ ಸಿರಿಗೆ ಗೊತ್ತಿತ್ತು. ಅವನ್ನು ಸಿರಿ ಮತ್ತವಳ ಗೆಳತಿಯರು ಮನೆಯ ತುಂಬಾ ಹಾರಿಸಿ ಸಂಭ್ರಮಿಸುತ್ತಿದ್ದರು.

ಹುಟ್ಟಿದ ಹಬ್ಬದ ಆಚರಣೆ ಮುಗಿಯಿತು. ಮಕ್ಕಳ ಆಟ, ಹಾಡು ತಿನಿಸು ಕಾರ್ಯಕ್ರಮ ಮುಗಿಯುತ್ತಲೇ, ಮನೆಗೆ ಹೊರಟ ಗೆಳೆಯರಿಗೆಲ್ಲ ಒಂದೊಂದು ಬಲೂನ್‌ ಕೊಟ್ಟಳು ಸಿರಿ. ಆಗಲೇ ಅವಳಿಗೆ “ಇದನ್ನು ಹಿಡಿದುಕೊಂಡರೆ ನಾನೂ ಆಗಸದಲ್ಲಿ ತೇಲಬಹುದೇ ಹಕ್ಕಿಗಳಂತೆ’ ಎಂಬ ಆಲೋಚನೆ ಬಂದಿತು. ಅದೇ ಗುಂಗಿನಲ್ಲಿ ನಿದ್ದೆಗೆ ಜಾರಿದಳು ಸಿರಿ.

ಕಣ್ಣು ಬಿಟ್ಟಾಗ ಅವಳ ಬಳಿ ಒಂದು ದೊಡ್ಡ ಹೀಲಿಯಂ ಬಲೂನು ಇತ್ತು. ಅವಳು ಉಟ್ಟಿದ್ದ ಹೊಸ ಕೆಂಪು ಬಣ್ಣದ ಉಡುಗೆಗೆ ಹೊಂದುವಂತೆ, ಕೆಂಪು ಬಣ್ಣದ ಬಲೂನ್‌ ಅದು! ಅದರ ದಾರ ಹಿಡಿದು ಮಹಡಿ ಮೇಲೆ ಬಂದಳು ಸಿರಿ. ಆಕಾಶದಲ್ಲಿ ಬಂಗಾರದ ಹಕ್ಕಿಗಳು ಹಾರಾಡುತ್ತಿದ್ದವು. ಅದನ್ನು ನೋಡಿ ತಾನು ಅವುಗಳ ಜೊತೆ ಹಾರುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದುಕೊಂಡಳು. ಅಷ್ಟರಲ್ಲಿ ಜೋರಾಗಿ ಗಾಳಿ ಬೀಸತೊಡಗಿತು. ನಿಧಾನವಾಗಿ ಬಲೂನು ಗಾಳಿಯಲ್ಲಿ ಏರತೊಡಗಿತು. ಅದರ ಜೊತೆಗೇ ಸಿರಿ ಕೂಡಾ ಮೇಲೇರತೊಡಗಿದಳು. ಅವಳ ಸುತ್ತಮುತ್ತ ಬಂಗಾರದ ಹಕ್ಕಿಗಳು ಕಂಡವು. ಅವುಗಳ ಜೊತೆ ಸಿರಿ ಮಾತಾಡಿದಳು. ಅಷ್ಟರಲ್ಲಿ ಅವಳಿಗೆ ಅಜ್ಜಿಯ ದನಿ ಕೇಳಿಸಿತು. ಆಕಾಶದಲ್ಲಿ ಅಮ್ಮನ ದನಿ ಹೇಗೆ ಬರುತ್ತಿದೆ ಎಂದುಕೊಳ್ಳುಷ್ಟರಲ್ಲಿ ಸಿರಿಗೆ ನಿದ್ದೆಯಿಂದ ಎಚ್ಚರವಾಗಿತ್ತು. ಇಷ್ಟುಹೊತ್ತು ತಾನು ಕಂಡಿದ್ದು ಕನಸು ಎಂದು ಅರ್ಥವಾಗಿತ್ತು. “ಇರು ಅಜ್ಜಿ. ಎರಡು ನಿಮಿಷ, ಹಕ್ಕಿಗಳಿಗೆ ಟಾಟಾ ಮಾಡಿ ಬರ್ತಿನಿ’ ಎಂದು ಮತ್ತೆ ನಿದ್ದೆಗೆ ಜಾರಿದಳು ಸಿರಿ. ಅಜ್ಜಿ ನಸು ನಗುತ್ತ, ಸಿರಿಯ ಹಣೆಗೆ ಹೂಮುತ್ತನ್ನಿತ್ತರು.

– ಕೆ.ವಿ. ರಾಜಲಕ್ಷ್ಮೀ

Advertisement

Udayavani is now on Telegram. Click here to join our channel and stay updated with the latest news.

Next