ಗುಡಿಬಂಡೆ: ಶ್ರಾವಣ ಮಾಸ ಮುಗಿದು ಸಾಲು ಸಾಲು ಹಬ್ಬಗಳು ಶುರುವಾಗುತ್ತಿದ್ದರೂ, ಹೂವಿನ ಬೆಲೆ ಪಾತಾಳಕ್ಕೆ ಹೋದ ಕಾರಣದ ಇಲ್ಲೋಬ್ಬ ರೈತ ತೋಟದಲ್ಲಿ ಬೆಳೆದಿರುವ ಹೂವನ್ನು ಉಚಿತವಾಗಿ ಕಿತ್ತು ಕೊಂಡು ಹೋಗುವಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿ ಬಿಟ್ಟಿದ್ದಾನೆ.
ತಾಲೂಕಿನ ಗೇರುಮರದಹಳ್ಳಿ ಗ್ರಾಮದ ದೇವರಾಜರೆಡ್ಡಿ ಎಂಬ ರೈತ ತಮ್ಮ 1.20 ಎಕರೆ ಜಮೀನಿನಲ್ಲಿ ಸೇವಂತಿಗೆ ಹೂ ಬೆಳೆದಿದ್ದು, ಸುಮಾರು ಇಪ್ಪತ್ತು ದಿನಗಳಿಂದ ಹೂವಿನ ಬೆಲೆ ತಳಮಟ್ಟಕ್ಕೆ ಇಳಿದ ಕಾರಣ, ಹೂವು ಕಿತ್ತರೆ ಕನಿಷ್ಟ ಕೂಲಿಕಾರರಿಗೆ ನೀಡಬೇಕಾದ ಹಣವು ಸಹ ಸಿಗುವುದಿಲ್ಲ ಎಂದು ಅರಿತ ರೈತ, ಗಣೇಶ ಹಬ್ಬ ಇದ್ದ ಕಾರಣ, ತಮ್ಮ ಫೇಸ್ ಬುಕ್ ನಲ್ಲಿ ಗೌರಿ ಗಣೇಶನ ಹಬ್ಬದ ಪ್ರಯುಕ್ತ ಉಚಿತ ಆಫರ್, ಯಾರು ಬೇಕಾದರೂ ಹೂ ಕಿತ್ತುಕೊಂಡು ಹೋಗಬಹುದು ಈ ಆಫರ್ ಮತ್ತೆಂದು ಸಿಗದು, ತ್ವರಿ ಮಾಡಿ ಭೇಟಿ ನೀಡಿ ನಮ್ಮ ತೋಟಕ್ಕೆ ಎಂದು ತೋಟದ ಚಿತ್ರ ಸಮೇತ ಹಂಚಿಕೊಂಡಿದ್ದಾರೆ.
ಕಡಿಮೆಯಾದ ಹೂವಿನ ಬೇಡಿಕೆ: ಜಿಲ್ಲಾದ್ಯಾಂತ ಮಳೆ ಹೆಚ್ಚಾಗುತ್ತಿರುವುದರಿಂದ ಹೂವು ಗಳಲ್ಲಿ ನೀರು ತುಂಬಿ, ಬೇರೆಡೆಗೆ ಸಾಗಿಸಲು ಸಾಧ್ಯವಾಗದ ಕಾರಣ ಮಂಡಿಗಳಲ್ಲಿ ಹೂವು ಖರೀದಿಯಾಗುತ್ತಿಲ್ಲ. ಬೇರೆ ಜಿಲ್ಲೆ ಮತ್ತು ರಾಜ್ಯ ಗಳಲ್ಲೂ ಸ್ಥಳೀಯವಾಗಿ ಬೆಳೆದಿರುವ ಹೂಗಳೇ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗಳಿಗೆ ಬರುತ್ತಿರುವುದರಿಂದ, ಹೂವಿಗೆ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಮಂಡಿ ವ್ಯಾಪಾರಿಗಳು.
ನೆಲಕ್ಕಚ್ಚಿದ ಹೂವಿನ ಬೆಲೆ: ವರಮಹಾಲಕ್ಷ್ಮೀ, ಗಣೇಶ, ದಸರಾ ಸಾಲು ಸಾಲು ಹಬ್ಬ ಬಂತು ಎಂದರೆ ಹೂವಿನ ಬೆಲೆ ಗಗನಕ್ಕೆ ಏರುತ್ತಿತ್ತು, ಆದರೆ ಗಣೇಶ ಹಬ್ಬಕ್ಕೆ ಕಳೆದ ಬಾರಿ ಬೇಡಿಕೆ ಇದ್ದಷ್ಟರಲ್ಲಿ ಬೇಡಿಕೆ ಸಹ ಈ ಭಾರಿ ಇಲ್ಲವಾಗಿದೆ. ಸೆಂಟೋಯೆಲ್ಲೋ ಕೆ.ಜಿ.30 ರೂ.ಗೆ, ಸೆಂಟ್ ವೈಟ್ 50 ರೂ. ಚಾಕಲೇಟ್ 30 ರೂ ಗೆ, ಚೆಂಡು ಹೂ ಕೆ.ಜಿ.ಗೆ 10 ರೂ ಮಾರಾಟವಾಗಿದೆ. ಸಾಗಾಣಿಕೆ ಬೆಲೆ ಸಹ ಇಲ್ಲ: ಗಣೇಶ ಹಬ್ಬಕ್ಕೆ ಅಲ್ಪ ಸ್ವಲ್ಪ ಬೇಡಿಕೆ ಇದ್ದರೂ ಸಹ, ತೋಟದಲ್ಲಿ ಹೂವು ಕಿತ್ತು, ಮಾರುಕಟ್ಟೆಗೆ ಹೋಗಿ ಬರುವ ಸಾಗಾಣಿಕೆ ಬೆಲೆ ಸಹ ಬರುತ್ತಿಲ್ಲ, ಇನ್ನು ಹೂವು ಕೀಳಲು ಬರುವ ಕೂಲಿಕಾರರಿಗೆ ಎಲ್ಲಿಂದ ಹಣವನ್ನು ನೀಡುವುದು ಎಂದು ಹೂವು ಬೇಕಾದವರು ತೋಟಕ್ಕೆ ಬಂದು ಹೂವನ್ನು ಕಿತ್ತುಕೊಂಡು ಹೋಗಿ ಎಂದು ಹಾಕಿದ್ದೇವೆ ಎಂದರು.
ಸುಮಾರು 1.20 ಎಕರೆ ಪ್ರದೇಶದಲ್ಲಿ ಸೇವಂತಿಗೆ ಬೆಳೆದಿದ್ದು, ಈಗಿನ ಮಾರುಕಟ್ಟೆ ದರದಲ್ಲಿ ಸಾಗಾಣಿಕೆ ಬೆಚ್ಚ ಸಹ ಬರುವುದಿಲ್ಲ, ದೇವರಿಗಾದರು ಉಚಿತವಾಗಿ ಜನರೇ ಬಂದು ಕಿತ್ತುಕೊಂಡು ಹೋಗಲಿ. ●
ದೇವರಾಜರೆಡ್ಡಿ, ರೈತ, ಗೇರುಮರದಹಳ್ಳಿ
-ಎನ್.ನವೀನ್ ಕುಮಾರ್