ಬಳ್ಳಾರಿ: ತುಂಗಭದ್ರಾ ನದಿ ಮತ್ತು ಜಲಾಶಯದಿಂದ ಪ್ರತಿವರ್ಷ ಉಂಟಾಗುವ ಪ್ರವಾಹಕ್ಕೆ ಬಳ್ಳಾರಿ/ವಿಜಯನಗರ ಅವಳಿ ಜಿಲ್ಲೆಗಳ 35 ಗ್ರಾಮಗಳು ತುತ್ತಾಗಿ ಜನರು ತೊಂದರೆ ಅನುಭವಿಸುತ್ತಿದ್ದರೂ, ಬರೀ ತಾತ್ಕಾಲಿಕ ಪರಿಹಾರಕ್ಕೆ ಸೀಮಿತವಾಗಿರುವ ಅವಳಿ ಜಿಲ್ಲಾಡಳಿತಗಳು, ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ.
ತುಂಗಭದ್ರಾ ನದಿ ಜಲಾನಯನ ಪ್ರದೇಶದಲ್ಲಿ ಸುರಿಯುವ ಮಳೆಯಿಂದಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ 10, ಹಗರಿಬೊಮ್ಮನಹಳ್ಳಿ ತಾಲೂಕಿನ 2, ಹೂವಿನಹಡಗಲಿ ತಾಲೂಕಿನ 10 ಗ್ರಾಮಗಳು, ಅದೇ ರೀತಿ ತುಂಗಭದ್ರಾ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸುವುದರಿಂದಲೂ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು 2, ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರುಗುಪ್ಪ ತಾಲೂಕುಗಳ 13 ಗ್ರಾಮಗಳು ಜಲಾವೃತ್ತಗೊಳ್ಳಲಿವೆ. ಪ್ರತಿವರ್ಷ ಮಳೆಗಾಲ ಬಂತೆಂದರೆ ವಿಜಯನಗರ ಜಿಲ್ಲೆಯ ಹಡಗಲಿ, ಹರಪನಹಳ್ಳಿ, ಹ.ಬೊ.ಹಳ್ಳಿ ತಾಲೂಕುಗಳ 20 ಗ್ರಾಮಗಳಿಗೆ ಪ್ರವಾಹ ಕಟ್ಟಿಟ್ಟ ಬುತ್ತಿಯಾಗಿದ್ದು, ಹೊಸಪೇಟೆ, ಬಳ್ಳಾರಿ ಜಿಲ್ಲೆಯ 15 ಗ್ರಾಮಗಳಿಗೆ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣವನ್ನು ಆಧರಿಸಿ (ಅಂದರೆ 1 ಲಕ್ಷ ಕ್ಯೂಸೆಕ್ಗೂ ಮೇಲ್ಪಟ್ಟು ಬಿಟ್ಟರೆ) ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳಿದ್ದು, ಅವಳಿ ಜಿಲ್ಲೆಗಳ ಜಿಲ್ಲಾಡಳಿತಗಳು ಸಹ ಅದಕ್ಕೆ ತಕ್ಕಂತೆ ತಾತ್ಕಾಲಿಕ ಪರಿಹಾರಗಳನ್ನು ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಹೊರತು, ಶಾಶ್ವತ ಪರಿಹಾರಕ್ಕೆ ಮುಂದಾಗದಿರುವುದು ಖೇದಕರ.
ಪ್ರವಾಹಪೀಡಿತ ಗ್ರಾಮಗಳ ಸಮೀಕ್ಷೆ
ಪ್ರತಿವರ್ಷ ಮಳೆಗಾಲದಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿದು ಬಂದಾಗ ಹಡಗಲಿ ತಾಲೂಕಿನ ಕುರುವತ್ತಿ, ಹರವಿ, ಹಿರೇಬನ್ನಿಮಟ್ಟಿ, ಚಿಕ್ಕಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣಸಿ, ಮದಲಗಟ್ಟ ಇನ್ನಿತರೆ ಗ್ರಾಮಗಳು ಜಲಾವೃತವಾಗಿ, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥ, ಮನೆಗಳು ಕುಸಿತ, ಜಾನುವಾರುಗಳಿಗೆ ಮೇವಿನ ಕೊರತೆ ಇನ್ನಿತರೆ ಸಮಸ್ಯೆಗಳು ಸಾಮಾನ್ಯ. ಇದಕ್ಕಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಿರುವ ಅವಳಿ ಜಿಲ್ಲೆಗಳ ಜಿಲ್ಲಾಡಳಿತಗಳು, ನದಿಗೆ ಎಷ್ಟು ಟಿಎಂಸಿ ನೀರು ಹರಿದು ಬಂದರೆ ಹಾಗೂ ಜಲಾಶಯದಿಂದ 50 ಸಾವಿರ, 1 ಲಕ್ಷ, ಅದಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಟ್ಟರೆ ಎಷ್ಟು ಗ್ರಾಮಗಳು ಜಲಾವೃತ್ತಗೊಳ್ಳಲಿವೆ. ಆ ಗ್ರಾಮಗಳಲ್ಲಿನ ಮನೆಗಳು, ಜನರು, ವೃದ್ಧರು, ಗರ್ಭಿಣಿ ಮಹಿಳೆಯರು, ಜಾನುವಾರುಗಳ ಸಂಖ್ಯೆ ಎಷ್ಟು? ಎಂಬ ಇತ್ಯಾದಿ ವಿಷಯಗಳ ಕುರಿತು ಸಮೀಕ್ಷೆ ನಡೆಸಿ ವರದಿಗಳನ್ನು ಸಿದ್ಧಪಡಿಸಿಟ್ಟುಕೊಂಡಿವೆ. ನದಿ ಹಾಗೂ ಜಲಾಶಯದಿಂದ ಹೊರ ಬಿಡುವ ನೀರಿನ ಪ್ರಮಾಣದಿಂದ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ಅಧರಿಸಿ ತಾತ್ಕಾಲಿಕ ಪರಿಹಾರ ಕಲ್ಪಿಸಿಕೊಳ್ಳಲು ಸಿದ್ಧತೆ ನಡೆಸಿದೆ ಎಂದು ಅವಳಿ ಜಿಲ್ಲಾಡಳಿತಗಳ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.
Related Articles
ತಾತ್ಕಾಲಿಕ ಪರಿಹಾರ
ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗುವ ಈ ಗ್ರಾಮಗಳ ಜನರು, ಜಾನುವಾರುಗಳಿಗಾಗಿ ತಾತ್ಕಾಲಿಕವಾಗಿ ಪುನರ್ವಸತಿ, ಗಂಜಿಕೇಂದ್ರ, ಮೇವು ಬ್ಯಾಂಕ್ನ್ನು ತೆಗೆದು ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಲಾಗುತ್ತದೆ. ಪ್ರವಾಹ ಪರಿಸ್ಥಿತಿ ಕಡಿಮೆಯಾದ ಬಳಿಕ ಆಯಾ ಗ್ರಾಮಗಳ ಗ್ರಾಮಸ್ಥರು ಪುನಃ ತಮ್ಮ ತಮ್ಮ ಮನೆಗಳಿಗೆ ತೆರಳಲಿದ್ದಾರೆ. ಹಾಗಾಗಿ ಜಿಲ್ಲಾಡಳಿತಗಳು ಕೇವಲ ತಾತ್ಕಾಲಿಕ ಪರಿಹಾರಕ್ಕಷ್ಟೇ ಕ್ರಮ ವಹಿಸುತ್ತಿದ್ದು, ಅದಕ್ಕಾಗುವ ವೆಚ್ಚವನ್ನು ಆಯಾ ತಾಲೂಕು ಆಡಳಿತಗಳು ಎನ್ಡಿಆರ್ಎಫ್ ಅನುದಾನ ಬಳಸಿಕೊಳ್ಳಲಾಗುತ್ತದೆ.
ಹಚ್ಚೊಳ್ಳಿ ಸ್ಥಳಾಂತರಕ್ಕೆ ಕ್ರಮ
ದಶಕದ ಹಿಂದೆ 2009ರಲ್ಲಿ ನಿರಂತರ ಸುರಿದ ಮಳೆ, ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಪರಿಣಾಮ, ಸಿರುಗುಪ್ಪ ತಾಲೂಕು ಹಚ್ಚೊಳ್ಳಿ ಸೇರಿ ಹಲವು ಗ್ರಾಮಗಳಿಗೆ ನೀರು ನುಗ್ಗಿ ಜನ, ಜಾನುವಾರುಗಳ ಜೀವನ ಅಸ್ತವ್ಯಸ್ಥಗೊಳಿಸಿತ್ತು. ಅಂದು ಹಚ್ಚೊಳ್ಳಿ ಗ್ರಾಮ ಸ್ಥಳಾಂತರಕ್ಕೆ ಕ್ರಮಕೈಗೊಂಡಿದ್ದ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಗಣಿಮಾಲೀಕರು, ದಾನಿಗಳ ನೆರವಿನಿಂದ ಸಮೀಪದಲ್ಲೇ ಫಲಾನುಭವಿಗಳಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿತ್ತು. ಆದರೆ, ಕೆಲ ಮನೆಗಳು ಬಳಕೆಯಾದರೆ, ಕೆಲವು ಖಾಲಿಯಾಗಿದ್ದು, ಬಹುತೇಕ ಗ್ರಾಮಸ್ಥರು ವಾಪಸ್ ತಮ್ಮ ಮನೆಗಳಲ್ಲಿ ವಾಸವಾಗಿದ್ದಾರೆ. ಹಾಗಾಗಿ ಕೆಲ ದಿನಗಳು ಮಾತ್ರ ಉಂಟಾಗುವ ಪ್ರವಾಹ ಭೀತಿಗೆ ಜಿಲ್ಲಾಡಳಿತಗಳೂ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಹಿಂದೇಟು ಹಾಕುತ್ತಿವೆ.
ವೆಂಕೋಬಿ ಸಂಗನಕಲ್ಲು