Advertisement

ಕಾಳಜಿ ಕೇಂದ್ರದಲ್ಲೇ ಸಂತ್ರಸ್ತರ ದಸರಾ

06:48 PM Oct 25, 2020 | Suhan S |

ರಾಯಚೂರು: ಕಳೆದ ವರ್ಷ ಪ್ರವಾಹವನ್ನಷ್ಟೇ ಎದುರಿಸಿದ್ದ ಜಿಲ್ಲೆ ಈ ಬಾರಿ ಪ್ರವಾಹದ ಜತೆಗೆಅತಿವೃಷ್ಟಿಯಿಂದಲೂ ತತ್ತರಿಸಿದೆ. ವರುಣ ರಕ್ಕಸ  ನರ್ತನಕ್ಕೆ ತಾಲೂಕಿನ ಇಡಪನೂರು ಗ್ರಾಮದ 58ಕ್ಕೂ ಅಧಿಕ ಕುಟುಂಬಗಳು ನಲುಗಿ ಹೋಗಿದ್ದು ಸೂರಿಲ್ಲದೇ ಕಾಳಜಿ ಕೇಂದ್ರದಲ್ಲೇ ವಿಜಯ ದಶಮಿ ಆಚರಿಸುವಂತಾಗಿದೆ.

Advertisement

ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಈ ಕುಟುಂಬಗಳು ಮಾತ್ರ ಮನೆ ಇಲ್ಲದೇ ಬದುಕು ಕಟ್ಟಿಕೊಳ್ಳುವ ತವಕದಲ್ಲಿ ಕಾಲ ದೂಡುತ್ತಿದ್ದಾರೆ. ಸೆಪ್ಟೆಂಬರ್‌ ಕೊನೆ ವಾರದಲ್ಲಿ ಎಡೆಬಿಡದೆ ರಾತ್ರಿಯಿಡಿ ಸುರಿದ ಭಾರಿ ವರ್ಷಧಾರೆಗೆ ಅನೇಕ ಕುಟುಂಬಗಳು ಸೂರು ಕಳೆದುಕೊಂಡವು. ಬಹುತೇಕ ಆಶ್ರಯ ಮನೆಗಳು, ಗುಡಿಸಲು ಸೇರಿದಂತೆ ಸಣ್ಣ ಪುಟ್ಟ ಮನೆಗಳಲ್ಲೇ ವಾಸಿಸುತ್ತಿದ್ದ ಈ ಕುಟುಂಬಗಳು ಬೆಳಗಾಗುವುದರೊಳಗೆ ಅತಂತ್ರ ಸ್ಥಿತಿಗೆ ತಲುಪಿದ್ದವು. 58 ಕುಟುಂಬಗಳ ಸುಮಾರು 250ಕ್ಕೂ ಅಧಿಕ ಜನರಿಗೆ ಸೂರಿಲ್ಲದಂತಾಯಿತು. ಇದರಿಂದಗ್ರಾಮದಲ್ಲಿರುವ ಮೂರು ಶಾಲೆಗಳಲ್ಲೇ ಕಾಳಜಿ  ಕೇಂದ್ರ ತೆರೆದು ಆಶ್ರಯ ನೀಡಲಾಗಿದೆ. ಕೆಲವರು ಇರುವ ಮನೆಗಳನ್ನು ದುರಸ್ತಿ ಮಾಡಿಕೊಳ್ಳುವ ಯತ್ನದಲ್ಲಿದ್ದರೂ ಎಡೆಬಿಡದೆ ಸುರಿದ ಮಳೆಯಿಂದ ವ್ಯರ್ಥ ಯತ್ನಕ್ಕೆ ಕೈ ಹಾಕದೆ ಕುಳಿತು ಬಿಟ್ಟಿದ್ದಾರೆ.

ವರುಣಾರ್ಭಟಕ್ಕೆ ಬದುಕು ತತ್ತರ: ಈ ಬಾರಿ ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಈ ಭಾಗದಲ್ಲಿ ಅಷ್ಟಾಗಿ ಮಳೆ ಸುರಿಯದಿದ್ದರೂ ಒಂದೇ ದಿನ ಇಡೀ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಬದುಕು ನಲುಗಿ ಹೋಗಿತ್ತು. ಬಹುತೇಕ ಮನೆಗಳ ಛಾವಣಿಗಳು ಹಾರಿ ಹೋದರೆ, ಗುಡಿಸಲು ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಇನ್ನೂ ಮಣ್ಣಿನ ಮನೆಗಳು ಕೂಡ ಕುಸಿದು ಬಿದ್ದವು. ಹೀಗಾಗಿ ವಿಧಿ ಇಲ್ಲದೇ ಎಲ್ಲ ಸಂತ್ರಸ್ತರು ಈಗ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು. ನ್ಯಾಯಾಧೀಶರು ಕೂಡ ಗ್ರಾಮಕ್ಕೆ ಭೇಟಿ ತ್ವರಿತಗತಿಯಲ್ಲಿ ಅವರಿಗೆ ಸೂರು ಒದಗಿಸಲು ಸೂಚನೆ ನೀಡಿದ್ದಾರೆ.

ಪರಿಹಾರ ವಿತರಣೆ ವಿಳಂಬವಾಗಲು ಸರ್ಕಾರದ ಶಿಷ್ಟಾಚಾರಗಳು ಅಡ್ಡಿಯಾಗುತ್ತಿವೆ. ಆನ್‌ಲೈನ್‌ನಲ್ಲಿ ಅರ್ಜಿ ದಾಖಲಿಸಿ ಆದ್ಯತಾನುಸಾರ ಸರ್ಕಾರವೇ ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಬಿಡುಗಡೆ ಮಾಡುತ್ತಿರುವುದು ಸಮಸ್ಯೆ ತಂದೊಡ್ಡಿದೆ.

ತಿಂಗಳಿಂದ ಠಿಕಾಣಿ: ಕಳೆದ ಒಂದು ತಿಂಗಳಿಂದ ಕಾಳಜಿ ಕೇಂದ್ರಗಳಲ್ಲೇ ಸಂತ್ರಸ್ತರು ಕಾಲ ದೂಡುತ್ತಿದ್ದಾರೆ. ಈಚೆಗೆ ಎನ್‌ಡಿಆರ್‌ಎಫ್‌ ಅನುದಾನದಡಿ ಸುಮಾರು 35ಕ್ಕೂ ಅಧಿಕ ಕುಟುಂಬಗಳಿಗೆ ಟಿನ್‌ ಶೆಡ್‌ ಗಳು, ಅದಕ್ಕೆ ಬೇಕಾದ ಕಟ್ಟಿಗೆ ಸಾಮಗ್ರಿಗಳನ್ನು ನೀಡಿ ತಾತ್ಕಾಲಿಕ ವಸತಿ ಸೌಕರ್ಯ ಕಲ್ಪಿಸಲು ತಿಳಿಸಲಾಗಿದೆ. ಆದರೆ, ಅದರಲ್ಲೂ ಸಾಕಷ್ಟು ಜನರಿಗೆ ಈ ಸೌಲಭ್ಯ ದಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲಾಡಳಿತ ತಿಂಗಳಾದರೂ ಅವರಿಗೆ ಶಾಶ್ವತ ಸೂರು ಕಲ್ಪಿಸಿಲ್ಲ ಎಂಬುದು ಸಂತ್ರಸ್ತರ ಆರೋಪ. ಬಯಲಲ್ಲೇ ಸ್ನಾನ, ಊಟ, ನಿದ್ದೆ ಮಾಡುವಂತಾಗಿದೆ. ಹಾಸಿಗೆ ಹಿಡಿದ ವೃದ್ಧರಿಂದ ಆಡುವ ಮಕ್ಕಳವರೆಗೂ ಎಲ್ಲರೂ ಇಕ್ಕಟ್ಟಾದ ಸ್ಥಳಗಳಲ್ಲೇ ಕಾಲದೂಡುವಂತಾಗಿದೆ.

Advertisement

ಅಗತ್ಯ ವಸ್ತು ಪೂರೈಕೆ: ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಕಾಳಜಿ ಕೇಂದ್ರದಲ್ಲಿ ಒಂದು ತಿಂಗಳಲ್ಲಿ ಪ್ರತಿ ಕುಟುಂಬಕ್ಕೆ 50 ಕೆಜಿಗೂ ಅಧಿಕ ಅಕ್ಕಿ

ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ಇನ್ಫೋಸಿಸ್‌ ಸಂಸ್ಥೆ ಕೂಡ ಸಂತ್ರಸ್ತರಿಗೆ ಬೇಕಾದ ಅಗತ್ಯ ನೆರವು ಒದಗಿಸಿದೆ. ಆದರೆ, ಕೊರೊನಾ ನಿಯಂತ್ರಣದ ವಿಚಾರದಲ್ಲಿ ನಿಯಮಗಳು ಮಾತ್ರ ಪಾಲನೆ ಆಗಿಲ್ಲ. ಮಾಸ್ಕ್ಗಳಾಗಲಿ, ಸ್ಯಾನಿಟೈಸರ್‌ಗಳಾಗಲಿ ಒದಗಿಸಿಲ್ಲ

ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ವಿವಿಧ ಶಾಲೆಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಿದ್ದು, 250ಕ್ಕೂ ಅಧಿ ಕ ಸಂತ್ರಸ್ತರಿದ್ದಾರೆ. ಗ್ರಾಮದ ಹಳ್ಳದ ದಂಡೆಗೆ ಮನೆಗಳನ್ನುಕಟ್ಟಿಕೊಟ್ಟಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಈಗಾಗಲೇ ಎಲ್ಲ ಸಂತ್ರಸ್ತರಿಗೆ ಅಗತ್ಯ ದವಸ ಧಾನ್ಯ  ಪೂರೈಸಲಾಗಿದೆ. ತಾತ್ಕಾಲಿಕ ಸೂರು ಮಾಡಿಕೊಳ್ಳಲು ಟಿನ್‌ ಶೆಟ್‌, ಅಗತ್ಯ ವಸ್ತುಗಳನ್ನು ನೀಡಲಾಗಿದೆ. ಸಂತ್ರಸ್ತರಿಗೆ ಪರಿಹಾರವನ್ನು ಸರ್ಕಾರವೇ ನೇರವಾಗಿ ನೀಡಲಿದೆ. ಹಾನಿಗೊಳಗಾದ ಮನೆಗಳ ಸಮೀಕ್ಷೆ ರಾಜಿವ್‌ ಗಾಂಧಿ ಹೌಸಿಂಗ್‌ ಕಾರ್ಪೋರೇಶನ್‌ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗಿದೆ. ಶೀಘ್ರದಲ್ಲೇ ಪರಿಹಾರ ನಿರೀಕ್ಷೆ ಇದೆ. -ಡಾ| ಹಂಪಣ್ಣ ಸಜ್ಜನ್‌, ತಹಶೀಲ್ದಾರ್‌, ರಾಯಚೂರು

Advertisement

Udayavani is now on Telegram. Click here to join our channel and stay updated with the latest news.

Next