ಕಲಬುರಗಿ: ಅತಿವೃಷ್ಟಿ ಮತ್ತು ಭೀಮಾ ನದಿ ಪ್ರವಾಹ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ನೀಡಬೇಕು, ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳ ಸುಗ್ರೀವಾಜ್ಞೆ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಗುರುವಾರ ನಗರದಲ್ಲಿ ರಸ್ತೆ ತಡೆ ನಡೆಸುತ್ತಿದ್ದ ರೈತರ ಮುಖಂಡರನ್ನು ಪೊಲೀಸರು ಬಂಧಿಸಿದರು. ಇಲ್ಲಿನ ಜಗತ್ ವೃತ್ತದಲ್ಲಿ ಅಖೀಲ ಭಾರತ
ಕಿಸಾನ್ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಲವು ಮುಖಂಡರು ಹಾಗೂ ರೈತರು ಸೇರಿ ರಸ್ತೆ ತಡೆ ನಡೆಸಿದರು. ರಸ್ತೆತಡೆ ನಡೆಸದಂತೆ ಪೊಲೀಸರು ಒತ್ತಡ ಹೇರಿದರೂ ಪ್ರತಿಭಟನೆ ಆರಂಭವಾಯಿತು. ನಂತರ ಹೋರಾಟ ಹಿಂದಕ್ಕೆ ಪಡೆಯಲು ಪೊಲೀಸರು ತಾಕೀತು ಮಾಡಿದರು. ಆದರೂ, ರಸ್ತೆ ತಡೆ ಮುಂದುವರೆಸಿದಾಗ ಹೋರಾಟದಲ್ಲಿ ತೊಡಗಿದ್ದ ಸಮಿತಿ ಜಿಲ್ಲಾ ಸಂಚಾಲಕ ಶರಣಬಸವಪ್ಪ ಮಮಶೆಟ್ಟಿ, ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಮೌಲಾಮುಲ್ಲಾ, ಭೀಮಾಶಂಕರ ಮಾಡಿಯಾಳ, ಮಹೇಶ ಎಸ್.ಬಿ, ಗಣಪತರಾವ್ ಮಾನೆ, ಮಹ್ಮದ ಮುಕದ್ದಂ, ಅಶೋಕ ಮ್ಯಾಗೇರಿ, ಅರ್ಜುನ ಭದ್ರೆ, ಜಗದೇವಿ ಹೆಗಡೆ, ಬಸ್ಸುಗೌಡ ಪಾಟೀಲ, ಪಾಂಡುರಂಗ ಮಾವಿನಕರ್, ಗುಂಡಣ್ಣ ಕುಂಬಾರ, ಮಲ್ಲಣ್ಣ ದಂಡಬಾ, ಮಲ್ಲಯ್ಯ ಗುತ್ತೇದಾರ ಸೇರಿದಂತೆ 50ಕ್ಕೂ ಹೆಚ್ಚಿನ ಹೋರಾಟಗಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಪೊಲೀಸರನ್ನು ಬಿಟ್ಟು ಹೋರಾಟಗಾರರರ ಮೇಲೆ ದಬ್ಟಾಳಿಕೆ ನಡೆಸುತ್ತಿದೆ ಎಂದು ಎಂದು ಮುಖಂಡರು ಧಿಕ್ಕಾರದ ಘೋಷಣೆ ಕೂಗಿದರು.
ಪ್ರವಾಹದಿಂದ ಸಂಕಷ್ಟದಲ್ಲಿರುವ ಸಂತ್ರಸ್ತರು ಮತ್ತು ರೈತರಿಗೆ ತಕ್ಷಣವೇ ಪರಿಹಾರ ಕಲ್ಪಿಸಬೇಕು. ಪ್ರತಿ ಎಕರೆ ಬೆಳೆ ಹಾನಿಗೆ 25 ಸಾವಿರ ರೂ. ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು. ನೆರೆ ಪೀಡಿತ ಗ್ರಾಮಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸುಗ್ರಿವಾಜ್ಞೆಗಳ ಮೂಲಕ ಜಾರಿಗೊಳಿಸಿರುವ ಜನ ವಿರೋಧಿ ಮತ್ತು ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಮುಖಂಡರು ಆಗ್ರಹಿಸಿದರು.
ಪೊಲೀಸ್ ಮೈದಾನಕ್ಕೆ ಕರೆದುಕೊಂಡು ಹೋದ ಬಳಿಕವೂ ಹೋರಾಟಗಾರರು ಪ್ರತಿಭಟನೆ ಮುಂದುವರೆಸಿದರು. ರೈತರ ಸಂಕಷ್ಟ ಆಲಿಸಲು ಜಿಲ್ಲಾಧಿಕಾರಿಗಳೇ ಬರಬೇಕೆಂದು ಪಟ್ಟು ಹಿಡಿದು ಅಲ್ಲೇ ಕುಳಿತುಕೊಂಡರು. ಕೊನೆಗೂ ಹೋರಾಟಗಾರರ ಪಟ್ಟಿಗೆ ಮಣಿದು ಕಲಬುರಗಿ ತಹಶೀಲ್ದಾರ್ ಮಲ್ಲೇಶ ತಂಗಾ ಅವರನ್ನು ಅಲ್ಲಿಗೆ ಕರೆಸಿಕೊಳ್ಳಲಾಯಿತು. ತಹಶೀಲ್ದಾರರು ಮನವಿ ಸ್ವೀಕರಿಸಿದ ಬಳಿಕ ಹೋರಾಟಗಾರರನ್ನು ಬಿಡುಗಡೆ ಮಾಡಿ ಕಳುಹಿಸಲಾಯಿತು.