Advertisement
ಹೌದು, ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹದಿಂದ ಜಿಲ್ಲೆಯ 138 ಶಾಲೆಗಳು ಸಂಪೂರ್ಣ ನೀರಿನಲ್ಲಿ ನಿಂತಿವೆ. ಅದರಲ್ಲೂ ಶಾಲಾ ಮತ್ತು ಬಿಸಿಯೂಟ ತಯಾರಿಸುವ ಅಡುಗೆ ಕೊಡಿಗಳು ಸೇರಿ ಒಟ್ಟು 1,925 ಶಾಲಾ ಕೊಠಡಿಗಳು ಹಾನಿಯಾಗಿವೆ. ಅವುಗಳ ದುರಸ್ತಿ, ಪುನರ್ ನಿರ್ಮಾಣದ ಬಳಿಕ ಶಾಲೆಗಳು ಪುನಃ ಮೊದಲಿದ್ದ ಸ್ಥಿತಿಗೆ ಬರಲು ಬಹು ದಿನಗಳೇ ಬೇಕಾಗುತ್ತದೆ.
ಎರಡು ಅಪರೂಪದ ಸಂಭ್ರಮ: ಪ್ರವಾಹದಲ್ಲೂ ದೇಶಭಕ್ತಿ ಹಾಗೂ ವಿಶಿಷ್ಟತೆಯ ಎರಡು ಪ್ರಸಂಗಗಳು ಸ್ವಾತಂತ್ರ್ಯೋತ್ಸವದಂದು ಜಿಲ್ಲೆಯಲ್ಲಿ ನಡೆದವು. ನೂತನ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿಯ ಆಯುಷ್ ಆಸ್ಪತ್ರೆ ಆವರಣದಲ್ಲಿ ನಡೆದ 73ನೇ ಸ್ವಾತಂತ್ರ್ಯ ದಿನಾಚಣೆ ಕಾರ್ಯಕ್ರಮದಲ್ಲಿ ಮನೆ ಮುಳುಗಿ, ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತೆ ಮಹಿಳೆ ಸತ್ಯವ್ವ ಈರಪ್ಪ ಸಿಂಧೂರ ಎಂಬುವವರು ಧ್ವಜಾರೋಹಣ ನೆರವೇರಿಸಿದರು. ಇವರು ಧ್ವಜಾರೋಹಣ ನೆರವೇರಿಸುವಾಗ ಭಾವುಕರಾಗಿದ್ದರು. ಇನ್ನು ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮ ಇಂದಿಗೂ ಜಲಾವೃತಗೊಂಡಿದ್ದು, ಎದೆಮಟ ನಿಂತ ನೀರಿನಲ್ಲೇ ತೆಪ್ಪದ ಮೂಲಕ ಗ್ರಾಮಕ್ಕೆ ತೆರಳಿದ ಶೇಖರ ಪಾಟೀಲ, ಎನ್.ಎಂ. ಪಾಟೀಲ ನೇತೃತ್ವದ ಯುವಕರ ತಂಡ, ತೆಪ್ಪದಲ್ಲಿ ನಿಂತುಕೊಂಡೇ ಧ್ವಜಾರೋಹಣ ನೆರವೇರಿಸಿದರು. ತೆಪ್ಪದಲ್ಲಿ ನಿಂತು, ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸುತ್ತ ರಾಷ್ಟ್ರಗೀತೆ ಹಾಡಿದರು.
ಪ್ರವಾಹದಿಂದ ಜಿಲ್ಲೆಯ 138 ಶಾಲೆಗಳು ಜಲಾವೃತಗೊಂಡಿದ್ದು, ಬಿಸಿಯೂಟದ ಅಡುಗೆ ಕೊಠಡಿ ಸಹಿತ 1925 ಕೊಠಡಿಗಳು ಹಾನಿಯಾಗಿವೆ. ಇನ್ನೂ ಕೆಲವೆಡೆ ನೀರು ನಿಂತಿದ್ದು, ಎಷ್ಟು ಕೊಠಡಿಗಳಿಗೆ ಹಾನಿಯಾಗಿದೆ ಎಂಬುದು ಸಮೀಕ್ಷೆ ಮಾಡಿಲ್ಲ. ನೀರು ಕಡಿಮೆಯಾದ ಬಳಿಕ ಸಮಗ್ರ ವರದಿ ತಯಾರಿಸಲಾಗುವುದು.• ಬಿ.ಎಚ್. ಗೋನಾಳ, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ
ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಬಹುತೇಕ ನಗರ ಭಾಗದಲ್ಲಿವೆ. ಗ್ರಾಮೀಣ ಭಾಗದ ಜಮಖಂಡಿ ತಾಲೂಕಿನ ಹಿಪ್ಪರಗಿ ಮತ್ತು ಬಾದಾಮಿ ತಾಲೂಕಿನ ಪಟ್ಟದಕಲ್ಲ ಕಾಲೇಜುಗಳ ಜಲಾವೃತಗೊಂಡಿವೆ. ಉಳಿದಂತೆ ಯಾವುದೇ ಕಾಲೇಜುಗಳು ಜಲಾವೃತವಾಗಿಲ್ಲ. ಆದರೆ, ಕೆಲವೆಡೆ ಕಾಲೇಜುಗಳ ಕಾಂಪೌಂಡ್ ಮತ್ತು ಆವರಣದಲ್ಲಿ ಮಾತ್ರ ನೀರು ನುಗ್ಗಿದೆ.•ಶ್ರೀಧರ ಪೂಜಾರಿ, ಉಪ ನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ
ಎಷ್ಟೇ ಮಳೆ ಬಂದಿದ್ದರೂ ನಮ್ಮ ಶಾಲೆಗೆ ನೀರು ಬಂದಿರಲಿಲ್ಲ. ಈ ಬಾರಿ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಂದಿದ್ದರಿಂದ ನಮ್ಮ ಶಾಲೆ ಜಲಾವೃತಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಹೊತ್ತಿಗೆ ನೀರು ತಗ್ಗುತ್ತದೆ ಎಂದು ಭಾವಿಸಿದ್ದೇವು. ಆದರೆ, ಇಂದಿಗೂ ನೀರು ನಿಂತಿದೆ. ಹೀಗಾಗಿ ನಮ್ಮ ಮುಖ್ಯಾಧ್ಯಾಪಕರು, ಎಲ್ಲ ಶಿಕ್ಷಕರೊಂದಿಗೆ ಗ್ರಾಪಂ ಕಚೇರಿ ಎದುರು ಸ್ವಾತಂತ್ರ್ಯ ದಿನ ಆಚರಿಸಿದ್ದೇವೆ.•ಸಂಗಮೇಶ ಉಟಗಿ, ಶಿಕ್ಷಕ, ಕುಂಬಾರಹಳ್ಳ ಶಾಲೆ
Related Articles
Advertisement
•ಶ್ರೀಶೈಲ ಕೆ. ಬಿರಾದಾರ