Advertisement
ಮಲ್ರಪಭಾ ನದಿಗೆ ಶನಿವಾರ ಸಂಜೆ 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರೆ, ರವಿವಾರ ಮಧ್ಯಾಹ್ನ 1ಕ್ಕೆ 15 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಶನಿವಾರ ಸಂಜೆ ಬಿಟ್ಟ ನೀರು, ರವಿವಾರ ಜಿಲ್ಲೆಗೆ ಪ್ರವೇಶಿಸಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕು ಆಡಳಿತದಿಂದ ಡಂಗುರ ಸಾರಿ, ಕಟ್ಟೆಚ್ಚರ ವಹಿಸಲಾಗಿದೆ.
Related Articles
Advertisement
ಮಲಪ್ರಭಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಬಾದಾಮಿ ತಹಶಿಲ್ದಾರ ಸುಹಾಸ ಇಂಗಳೆ ಮುಂತಾದ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಮದುರ್ಗ ತಾಲೂಕಿನ ಕಳಸ ಬಳಿ ಮಲಪ್ರಭಾ ನದಿ ಜಿಲ್ಲೆ ಪ್ರವೇಸಿಸುತ್ತಿದ್ದು, ಅಲ್ಲಿಂದ ಕೂಡಲಸಂಗಮ ಬಳಿ ಕೃಷ್ಣಾ ನದಿಯೊಂದಿಗೆ ವಿಲೀನಗೊಳ್ಳುವ ಮಧ್ಯೆ ಒಟ್ಟು 23 ಬ್ಯಾರೇಜ್‌ಗಳಿವೆ.
ಎಲ್ಲ ಬ್ಯಾರೇಜ್‌ಗಳ ಗೇಟ್ ತೆಗೆಯಲಾಗಿದ್ದು, ಅಪಾರ ಪ್ರಮಾಣದ ಮುಳ್ಳು ಕಂಠಿ ಹರಿದು ಬಂದು, ಬ್ಯಾರೇಜ್ ಗೇಟ್‌ನಡಿ ನೀರು ಹರಿದು ಹೋಗಲು ತೊಡಕಾಗಿತ್ತು. ಬಾದಾಮಿ ತಾಲೂಕು ಆಡಳಿತದಿಂದ ಎಲ್ಲ ಬ್ಯಾರೇಜ್ ಗೇಟ್‌ನಲ್ಲಿ ಸುಲುಕಿದ್ದ ಮುಳ್ಳು ಕಂಠಿ ತೆರವುಗೊಳಿಸಿ, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲಾಗಿದೆ.
ಮೂರು ನದಿಯಲ್ಲೂ ಭೀತಿ: ಕಳೆದೊಂದು ವಾರದಿಂದ ತಗ್ಗಿದ್ದ ಪ್ರವಾಹ ಭೀತಿ, ರವಿವಾರ ಮತ್ತೆ ಎದುರಾಗಿದೆ. ಜಿಲ್ಲೆಯ ಕೃಷ್ಣಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದು 2.15 ಲಕ್ಷ ದಾಟಿದರೆ ಕೆಲವು ಹಳ್ಳಿಗಳಿಗೆ ಪ್ರವಾಹ ಭೀತಿ ಶುರುವಾಗಲಿದೆ. ಸದ್ಯ ನದಿ ಪಾತ್ರದ ಭೂಮಿಗೆ ನೀರು ನುಗ್ಗಿದ್ದು, ಬೆಳೆಗಳು ನೀರಿನಲ್ಲಿ ನಿಂತಿವೆ.
ಇನ್ನು ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ 13,626 ಕ್ಯೂಸೆಕ್, ಧೂಪದಾಳ ಜಲಾಶಯದಿಂದ 18,470 ಕ್ಯೂಸೆಕ್ ಸೇರಿ ಒಟ್ಟು 32,096 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಘಟಪ್ರಭಾ ನದಿಗೆ 45 ಸಾವಿರ ಕ್ಯೂಸೆಕ್ ನೀರು ಹರಿದು ಬರಲು ಆರಂಭಿಸಿದರೆ, ಈ ನದಿಯಲ್ಲೂ ಪ್ರವಾಹ ಉಂಟಾಗಲಿದೆ.
ಮಲ್ರಪಭಾ ನದಿಗೆ ರವಿವಾರ ಮಧ್ಯಾಹ್ನ 15 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಅದು ಸೋಮವಾರದ ಹೊತ್ತಿಗೆ ಜಿಲ್ಲೆ ಪ್ರವೇಶಿಸಲಿದೆ. ಸಧ್ಯಕ್ಕೆ ಈ ನೀರು ನದಿ ಮಟ್ಟದಲ್ಲಿ ಮಾತ್ರ ಹರಿಯಲಿದ್ದು, ಪ್ರವಾಹ ಉಂಟಾಗುವುದಿಲ್ಲ. ಈ ನದಿಗೆ 18 ರಿಂದ 20 ಸಾವಿರ ಕ್ಯೂಸೆಕ್ ನೀರು ಹರಿದರೆ 43 ಹಳ್ಳಿಗಳು ಪ್ರವಾಹಕ್ಕೆ ಒಳಗಾಗಲಿವೆ.