Advertisement
ಕಳೆದ 10 ದಿನಗಳಿಂದ ರಾಜ್ಯದ ಹಲವೆಡೆ ಭಾರಿ ಮಳೆ, ಭೂಕುಸಿತದಿಂದ ಜನ ಜೀವನ ಅಸ್ತವ್ಯಸ್ತವಾಗಿ ಲಕ್ಷಾಂತರ ಮಂದಿ ಬೀದಿಪಾಲಾಗಿ ಜೀವ ಕೈಯಲ್ಲಿಡಿದು ಬದುಕುಳಿದವರಿಗೆ ಸದ್ಯ ಸರ್ಕಾರವಾಗಿ ಯಡಿಯೂರಪ್ಪ ಅವರು ಸಾಂತ್ವನ ಹೇಳುವ ಜತೆಗೆ ಪರಿಹಾರ, ಪುನರುಜ್ಜೀವನದ ಭರವಸೆಯನ್ನೂ ನೀಡುತ್ತಿದ್ದಾರೆ.
Related Articles
Advertisement
ಆ. 5ರಿಂದ ವೈಮಾನಿಕ ಸಮೀಕ್ಷೆ: ಆ.5ರಂದು ಯಡಿಯೂರಪ್ಪ ಅವರು ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಹಾನಿಗೆ ಒಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಅಥಣಿಯ ಪ್ರವಾಹಪೀಡಿತ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿ ಬಳಿಕ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಆ. 6ರಂದು ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ನಿತಿನ್ ಗಡ್ಕರಿ, ರಾಜನಾಥ ಸಿಂಗ್, ನಿರ್ಮಲಾ ಸೀತಾರಾಮನ್ ಇತರರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಿದರು. ಆ ದಿನ ರಾತ್ರಿ ರಾಜ್ಯದ ಸಂಸದರೊಂದಿಗೆ ಸಭೆಯನ್ನೂ ನಡೆಸಿ ರಾಜ್ಯದ ಜನರ ಕಲ್ಯಾಣಕ್ಕೆ ಪೂರಕವಾಗಿ ದೆಹಲಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು.
ಮರುದಿನ ಅಂದರೆ ಆ.7ರಂದು ಬೆಂಗಳೂರಿಗೆ ಬಂದಿಳಿದ ಯಡಿಯೂರಪ್ಪ ಅವರು ಸಂಜೆ ಬೆಳಗಾವಿಗೆ ವಿಶೇಷ ವಿಮಾನದಲ್ಲಿ ತೆರಳಿ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಸಾಂತ್ವನ ನೀಡಿದರು. ಮರುದಿನ ಬೆಳಗಾವಿ, ಬಾಗಲಕೋಟೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು. ನಂತರ ಚಿಕ್ಕೋಡಿ, ನಿಪ್ಪಾಣಿ, ಮುಧೋಳದಲ್ಲಿ ಸಂತ್ರಸ್ತರ ಅಳಲು ಆಲಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಆ. 9ರಂದು ಮುಧೋಳ, ಬಾಗಲಕೋಟೆ ಪ್ರವಾಸ ನಡೆಸಿದರು. ಈ ಮಧ್ಯೆ ತುರ್ತು ಪರಿಹಾರ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆ ಮಾಡಿದರು.
ಆ. 10ರಂದು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ ಅವರು ಪ್ರವಾಹಪೀಡಿತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಜತೆಗೆ 6000 ಕೋಟಿ ರೂ. ನಷ್ಟವಾಗಿದ್ದು, ತುರ್ತಾಗಿ 3000 ಕೋಟಿ ರೂ. ಬಿಡುಗಡೆ ಮಾಡುವಂತೆ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಪ್ರಸ್ತಾವ ಸಲ್ಲಿಸಿದರು. ಈ ನಡುವೆ, ಗೃಹ ಸಚಿವ ಅಮಿತ್ ಶಾ ಅವರ ಜತೆ ಬೆಳಗಾವಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಸೋಮವಾರ ಬಂಟ್ವಾಳ, ಬೆಳ್ತಂಗಡಿ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರೆ, ಮಂಗಳವಾರ ಶಿವಮೊಗ್ಗ ಪ್ರವಾಸ ನಡೆಸಿದರು.
ಅಧಿಕಾರಿಗಳ ಜತೆಗೆ ಸಭೆ: ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆ ನಡೆಸಿ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿರುವ ಯಡಿಯೂರಪ್ಪ ಅವರು, ಪರಿಹಾರ ಕಾರ್ಯಗಳು ಸಮರೋಪಾದಿ ಯಲ್ಲಿ ನಡೆಯುವ ಸಿದ್ಧತಾ ಕಾರ್ಯಗಳತ್ತಲೂ ಗಮನ ನೀಡಿದ್ದಾರೆ. ಪ್ರಕೃತಿ ವಿಕೋಪಕ್ಕೆ ಸಿಲುಕಿವರ ಪುನರ್ವಸತಿಗಾಗಿ ದೇಣಿಗೆ ಸಂಗ್ರಹಕ್ಕೂ ಒತ್ತು ನೀಡಿರುವ ಯಡಿಯೂರಪ್ಪ ಅವರು ಸಚಿವ ಸಂಪುಟವಿಲ್ಲದ ಕೊರತೆಯೇ ಕಾಡದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಪ್ರತಿಪಕ್ಷಗಳು ಕೂಡ ಯಡಿಯೂರಪ್ಪ ಅವರ ವಿರುದ್ಧ ಚಕಾರ ತೆಗೆಯುತ್ತಿಲ್ಲ. ಬದಲಿಗೆ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಲಾರಂಭಿಸಿದ್ದಾರೆ.
ಎಂ. ಕೀರ್ತಿಪ್ರಸಾದ್