Advertisement

ಪಾಕಿಸ್ಥಾನದಲ್ಲಿ ಜಲಪ್ರಳಯ; ಹವಾಮಾನ ವೈಪರೀತ್ಯದ ಕರಾಳ ದರ್ಶನ

11:22 AM Sep 25, 2022 | Team Udayavani |

ನದಿಗಳು ದಡವನ್ನು ದಾಟಿ ಎರಡೂ ತೀರದಲ್ಲಿ ಮೈಲುಗಳಷ್ಟು ದೂರದವರೆಗೆ ವ್ಯಾಪಿಸಿವೆ, ಜಲಾವೃತಗೊಂಡು ಎರಡು, ಮೂರು ಅಂತಸ್ತಿನ ಮನೆಗಳ ಛಾವಣಿಯೂ ಕಾಣಿಸುತ್ತಿಲ್ಲ. ಬಹುಮಹಡಿ ಕಟ್ಟಡಗಳ ಅಡಿಪಾಯ ದುರ್ಬಲಗೊಂಡು ಕುಸಿದು ಬೀಳುತ್ತಿವೆ. ರಸ್ತೆ, ರೈಲು ಸಂಪರ್ಕ ಕಡಿತಗೊಂಡು ಬಹುತೇಕ ಹಳ್ಳಿಗಳು ಮಾತ್ರವಲ್ಲ ನಗರ ಪ್ರದೇಶಗಳೂ ದ್ವೀಪದಂತಾಗಿವೆ. ಇದು ಕಳೆದ ಎರಡು ತಿಂಗಳಲ್ಲಿ ಸುರಿದ ಭಾರೀ ಮಳೆಯ ಪರಿಣಾಮದಿಂದಾಗಿ ಪಾಕಿಸ್ಥಾನದಲ್ಲಿ ಉಂಟಾದ ಪರಿಸ್ಥಿತಿ. ಹವಾಮಾನ ವೈಪರೀತ್ಯದ ಕರಾಳ ಚಿತ್ರಣವನ್ನು ಪಾಕಿಸ್ಥಾನದಲ್ಲಿನ ಈ ಬೆಳವಣಿಗೆಗಳು ಜಗತ್ತಿನ ಮುಂದೆ ತೆರೆದಿಟ್ಟಿವೆ.

Advertisement

ಏನಾಗಿದೆ?
ಜುಲೈ- ಆಗಸ್ಟ್‌ ತಿಂಗಳಲ್ಲೇ ಪಾಕಿಸ್ಥಾನದಲ್ಲಿ ಕಳೆದ 30 ವರ್ಷಗಳ ಸರಾಸರಿಗಿಂತ ಶೇ. 190ರಷ್ಟು ಹೆಚ್ಚು ಅಂದರೆ ಒಟ್ಟು 391 ಮಿ.ಮೀ. ಮಳೆಯಾಗಿದೆ. ಅದರಲ್ಲೂ ಸಿಂಧ್‌ ಪ್ರಾಂತದಲ್ಲಿ ಶೇ.466ಕ್ಕಿಂತಲೂ ಹೆಚ್ಚು ಮಳೆ ಸುರಿದಿದೆ. ಸುಮಾರು 33 ಮಿಲಿಯನ್‌ ಜನಜೀವನದ ಮೇಲೆ ಪರಿಣಾಮ ಬೀರಿರುವ ಪ್ರವಾಹದಿಂದಾಗಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಬಹುತೇಕ ರಸ್ತೆ, ಮನೆ, ರೈಲ್ವೇ ಸೇತುವೆಗಳು, ಜೀವನ ನಿರ್ವಹಣೆಗೆ ಬೇಕಾದ ಅಗತ್ಯ ವಸ್ತುಗಳು, ದೇಶದ ಅರ್ಧ ಭಾಗದಷ್ಟು ಜನರಿಗೆ ಬೇಕಾಗಿದ್ದ ಆಹಾರ ಸಾಮಗ್ರಿಗಳೆಲ್ಲವೂ ನಾಶವಾಗಿದ್ದು, 33 ಶತಕೋಟಿ ಡಾಲರ್‌ ನಷ್ಟ ಸಂಭವಿಸಿದೆ. ನಗರ ಪ್ರದೇಶಗಳು ಮುಳುಗಡೆಯಾಗಿದ್ದು, ಹಳ್ಳಿಗಳು ದ್ವೀಪದಂತಾಗಿವೆ. ಮನೆಮಠಗಳನ್ನು ಕಳೆದುಕೊಂಡ ಸಾವಿರಾರು ಜನರು ಬೀದಿಪಾಲಾಗಿದ್ದಾರೆ.

ಎಲ್ಲಿ?
ಹವಾಮಾನ ವೈಪರೀತ್ಯದಿಂದ ಏನಾಗಬಹುದು ಎನ್ನುವುದಕ್ಕೆ ಈಗ ಸ್ಪಷ್ಟ ನಿದರ್ಶನ ಪಾಕಿಸ್ಥಾನ. ಎರಡು ತಿಂಗಳುಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ದೇಶದ ಮೂರನೇ ಒಂದು ಭಾಗ ಸಂಪೂರ್ಣ ಜಲಾವೃತಗೊಂಡಿದೆ. ಪಾಕ್‌ ಆಕ್ರಮಿತ ಕಾಶ್ಮೀರದಿಂದ ಹಿಡಿದು ಸಿಂಧ್‌, ಬಲೂಚಿಸ್ಥಾನದವರೆಗೆ ಜಲಪ್ರಳಯದ ಭಯಾನಕ ದೃಶ್ಯಗಳೇ ಕಾಣಸಿಗುತ್ತಿವೆ.

ಹೇಗಿದೆ ಪರಿಸ್ಥಿತಿ?
ಸಿಂಧ್‌ ಪ್ರಾಂತದ ದಾದು ಜಿಲ್ಲೆಯನ್ನು ಸಂಪರ್ಕಿಸುವ ಮೂರು ಪ್ರಮುಖ ದಾರಿಗಳಿವೆ. ಅದರಲ್ಲಿ ಸಿಂಧೂ ಹೆದ್ದಾರಿ ಮುಳುಗಿದ್ದು, ಉತ್ತರ, ದಕ್ಷಿಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ಪ್ರವಾಹ ನೀರಿನಿಂದ ಆವೃತಗೊಂಡಿವೆ. ಕೆಲವು ವಾರಗಳಿಂದ ಇಲ್ಲಿಗೆ ಸಂಪರ್ಕ ಕಡಿತಗೊಂಡಿದೆ. ಸಿಂಧೂ ನದಿಗೆ ಹತ್ತಿರವಾಗಿರುವ ಕಂಬಾರ್‌ ಮತ್ತು ಲರ್ಕಾನ ನಗರಗಳ ಸುತ್ತಲೂ ಸುಮಾರು 25 ಕಿ.ಮೀ. ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಣ್ಣು ಹಾಯಿಸಿದಷ್ಟು ದೂರವಿದ್ದ ಕೃಷಿ ಭೂಮಿಗಳು ಮುಳುಗಡೆಯಾಗಿ ಮೈಲುಗಳಷ್ಟು ದೂರದವರೆಗೆ ಸರೋವರಗಳ ಪ್ರವಾಹ ನೀರು ವ್ಯಾಪಿಸಿಕೊಂಡಿದೆ. ಎಲ್ಲೆಲ್ಲಿ ಕಂಡರೂ ಈಗ ನೀರು ಮಾತ್ರ ಗೋಚರಿಸುತ್ತಿವೆ. ಎತ್ತರಕ್ಕೆ ಬೆಳೆದು ನಿಂತಿರುವ ಮರಗಳು, ಕಟ್ಟಡಗಳು ಮಾತ್ರ ಗೋಚರಿಸುತ್ತಿವೆ.

ಕಾರಣ?
ಭೌಗೋಳಿಕವಾಗಿ ಪಾಕಿಸ್ಥಾನವು ಎರಡು ಪ್ರಮುಖ ಹವಾಮಾನ ವ್ಯವಸ್ಥೆಯನ್ನು ಹೊಂದಿರುವ ಸ್ಥಳದಲ್ಲಿದೆ. ತೀವ್ರ ಬೇಸಗೆ ಅವಧಿಯಲ್ಲಿ ಅಂದರೆ ಮಾರ್ಚ್‌ ವೇಳೆಗೆ ತಾಪಮಾನದ ತೀವ್ರತೆ ಹೆಚ್ಚಾಗಿರುತ್ತದೆ. ಸಿಂಧ್‌ ಪ್ರಾಂತದ ಜಕೋಬಬಾದ್‌ನಲ್ಲಿ ತಾಪಮಾನ 51 ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗಿದೆ. ಇದರ ಪರಿಣಾಮ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿಯುತ್ತದೆ. ಅಲ್ಲದೇ ಇಲ್ಲಿ ಹೆಚ್ಚಿನ ಜನರು ಸಿಂಧೂ ನದಿ ತೀರದಲ್ಲೇ ವಾಸವಾಗಿದ್ದಾರೆ. ಹೀಗಾಗಿ ಮಳೆಗಾಲದಲ್ಲಿ ಪ್ರವಾಹ ಉಂಟಾದಾಗ ಹೆಚ್ಚಿನ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಹವಾಮಾನ ವೈಪರೀತ್ಯಕ್ಕೂ ಕಾರಣವಾಗುತ್ತಿದೆ.

Advertisement

ಹೇಗೆ?
ಜಾಗತಿಕ ತಾಪಮಾನ ಏರಿಕೆಯು ಗಾಳಿ, ಸಮುದ್ರದ ಉಷ್ಣತೆಯನ್ನು ಹೆಚ್ಚಿಸಿ ಮಳೆ ಹೆಚ್ಚು ಸುರಿಯುವಂತೆ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಮ ನದಿಗಳನ್ನು ಹೊಂದಿರುವ ಪಾಕಿಸ್ಥಾನದಲ್ಲಿ ಹವಾಮಾನ ಬದಲಾವಣೆ ಹೆಚ್ಚು ಮಳೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪಾಕಿಸ್ಥಾನದ ಗಿಲಿYಟ್‌- ಬಾಲ್ಟಿಸ್ಥಾನ್‌, ಖೈಬರ್‌ ಪಕು¤ಂಖ್ವಾ ಪ್ರದೇಶಗಳಲ್ಲಿನ ಹಿಮ ನದಿಗಳು ವೇಗವಾಗಿ ಕರಗುತ್ತಿದ್ದು, 3 ಸಾವಿರಕ್ಕೂ ಹೆಚ್ಚು ಸರೋವರಗಳನ್ನು ಸೃಷ್ಟಿಸುತ್ತಿವೆ. ಇವುಗಳಲ್ಲಿ ಸುಮಾರು 33 ಅಪಾಯಕಾರಿಯಾಗಿದ್ದು, ಇದು 7 ಮಿಲಿಯನ್‌ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.

ಹೇಗಿದೆ ತುರ್ತು ಸೇವೆ?
ನಗರ ಕೇಂದ್ರಗಳಾಗಿರುವ ಲರ್ಕಾನ ಮತ್ತು ಸುಕ್ಕೂರ್‌ ಸಂಪೂರ್ಣ ಹಾನಿಗೊಳಗಾಗಿದ್ದರೂ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತಿವೆ. ಚೀನ, ಟರ್ಕಿ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ ಟೆಂಟ್‌, ಆಹಾರ, ಔಷಧ ಸಹಿತ ಅಗತ್ಯ ಪರಿಹಾರ ಸಾಮಗ್ರಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ಸಂತ್ರಸ್ತರಿಗೆ ಇದನ್ನು ಯುದ್ಧ ವಿಮಾನಗಳ ಮೂಲಕ ತಲುಪಿಸಲಾಗುತ್ತಿದೆ.

ಅಂಕಿಅಂಶಗಳು
ಏನು ಹೇಳುತ್ತವೆ?
-   ಪಾಕಿಸ್ಥಾನದ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶೇ. 43ರಷ್ಟು ಸಾವು ಸಿಂಧ್‌ ಪ್ರಾಂತದಲ್ಲಿ ಸಂಭವಿಸಿವೆ.
-   ಸೆ. 18ರಂದು ಉಂಟಾದ ಪ್ರವಾಹದಿಂದಾಗಿ ಸುಮಾರು 1.9 ಮಿಲಿಯನ್‌ ಮನೆಗಳಿಗೆ ಹಾನಿಯಾಗಿದೆ, ಸುಮಾರು 12,718 ಕಿ.ಮೀ. ರಸ್ತೆಗಳು ನಾಶವಾಗಿವೆ ಹಾಗೂ 1.2 ಮಿಲಿಯನ್‌ ಹೆಕ್ಟೇರ್‌ಗಳಿಗೂ ಅಧಿಕ ಕೃಷಿ ಭೂಮಿ ಜಲಾವೃತಗೊಂಡಿದ್ದು, ಒಂದು ಮಿಲಿಯನ್‌ ಜಾನುವಾರುಗಳ ಪ್ರಾಣ ಹಾನಿಯಾಗಿವೆ.
-  ಸಿಂಧ್‌ ಪ್ರಾಂತದಲ್ಲೇ ಶೇ. 65ರಷ್ಟು ರಸ್ತೆಗಳು, 150ಕ್ಕೂ ಹೆಚ್ಚು ಸೇತುವೆಗಳು, 5 ಲಕ್ಷಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿವೆ.
- ಸಿಂಧೂ ನದಿಯ ಪಶ್ಚಿಮದಲ್ಲಿರುವ ಖೈರ್‌ಪುರ್‌ ನಾಥನ್‌ ಶಾ ನಗರ ಸಂಪೂರ್ಣ ದ್ವೀಪದಂತಾಗಿದ್ದು, ಸುಮಾರು 25 ಕಿ.ಮೀ. ರಸ್ತೆ ಸಂಪೂರ್ಣವಾಗಿ ಪ್ರವಾಹ ನೀರಿನಿಂದ ತುಂಬಿಕೊಂಡಿದ್ದು, ಮನೆಗಳ ಛಾವಣಿಗಳು ಮಾತ್ರ ಕಾಣಿಸುತ್ತಿವೆ.
-   ದೇಶದ ಅರ್ಧಕ್ಕಿಂತಲೂ ಹೆಚ್ಚು ಭಾಗ ಸರಿಸುಮಾರು 160 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಸಂಪೂರ್ಣ ರಕ್ಷಣ ಕಾರ್ಯಾಚರಣೆ ಅಸಾಧ್ಯವಾಗಿದೆ. 33 ಮಿಲಿಯನ್‌ಗೂ ಅಧಿಕ ಜನರ ಜೀವನದ ಮೇಲೆ ಪರಿಣಾಮ ಬೀರಿದ್ದು, ಇದರಲ್ಲಿ ಅರ್ಧದಷ್ಟು ಮಂದಿಯನ್ನು ಸಂತ್ರಸ್ತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 1.80 ಲಕ್ಷ ಜನರನ್ನು ರಕ್ಷಿಸಲಾಗಿದೆ.

ಯಾವ ಪ್ರದೇಶ- ಹೇಗಾಗಿದೆ?
-   ಮೆಹೆರ್‌- ಅನೇಕ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿವೆ. ಎರಡು ಅಂತಸ್ತಿನ ಮನೆಗಳೂ ಗೋಚರಿಸುತ್ತಿಲ್ಲ.
-   ಕಂಬಾರ- 40 ಕಿ.ಮೀ. ದೂರದಲ್ಲಿ ಹಮಾಲ್‌ ಸರೋವರವಿದ್ದು, ನಗರದ ಸುತ್ತಲಿನ ಪ್ರದೇಶಗಳು ಬಹುತೇಕ ಜಲಾವೃತವಾಗಿವೆ.
-   ಲರ್ಕಾನ- ನಗರದ ಹೊರವಲಯದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.
-   ಸುಕ್ಕೂರ್‌- ಸಿಂಧೂ ನದಿಯ ದಡದಲ್ಲಿರುವ ಸಿಂಧ್‌ನ ಮೂರನೇ ಅತೀ ದೊಡ್ಡ ನಗರವಾಗಿದ್ದು, ನದಿ ದಡದ ಸುತ್ತಲಿನ ಪ್ರದೇಶ ಬಹುತೇಕ ಮುಳುಗಡೆಯಾಗಿವೆ.
-   ಸೆಹ್ವಾನ್‌- ಸಿಂಧ್‌ ಪ್ರಾಂತದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಅತೀ ದೊಡ್ಡ ಸಿಹಿ ನೀರಿನ ಸರೋವರದ ಪಕ್ಕದಲ್ಲಿದೆ. ಭಾರೀ ಮಳೆಯಿಂದಾಗಿ ಸುತ್ತಲಿನ ಪಟ್ಟಣ, ಹಳ್ಳಿಗಳು ಜಲಾವೃತಗೊಂಡಿವೆ.
-   ಖೈರ್‌ಪುರ್‌ ನಾಥನ್‌ ಶಾ- ದೊಡ್ಡ ನಗರ ಪ್ರದೇಶದಿಂದ ದೂರವಿರುವ ಸ್ವಲ್ಪವೇ ನೀರಿನ ಮೂಲ ಹೊಂದಿದ್ದ ನಗರವಿದು. ಆದರೆ ಭಾರೀ ಮಳೆಯ ಅನಂತರ ಸುತ್ತಲಿನ ಪ್ರದೇಶ ಮುಳುಗಡೆಯಾಗಿ ದ್ವೀಪದಂತಾಗಿದೆ. ಬಹುತೇಕ ಮಂದಿ ಸುರಕ್ಷಿತ ಸ್ಥಳಗಳಿಗೆ ಬೋಟ್‌ಗಳಲ್ಲಿ ತೆರಳಿದ್ದು, ಕೆಲವರು ಮಾತ್ರ ತಮ್ಮ ಮನೆ, ಜಾನುವಾರುಗಳಿಗಾಗಿ ಉಳಿದುಕೊಂಡಿದ್ದಾರೆ.

-ವಿದ್ಯಾ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next