ಬನಹಟ್ಟಿ: ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ರಬಕವಿ ಬನಹಟ್ಟಿ ತಾಲ್ಲೂಕಿನ ಕುಲಹಳ್ಳಿ ಗ್ರಾಮದ 100 ಕ್ಕೂ ಹೆಚ್ಚು ಕುಟುಂಬಗಳ ಅಂದಾಜು ೩೦೦ ಕ್ಕೂ ಹೆಚ್ಚು ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
ಗ್ರಾಮದ ಮೋರೆ ಮತ್ತು ಗಸ್ತಿ ಪ್ರದೇಶದ ಜನರು ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದಾರೆ. ಅದೇ ರೀತಿಯಾಗಿ ನದಿ ತೀರದ ತೋಟ ಹಾಗೂ ಹೊಲಗಳಲ್ಲಿ ವಾಸವಿದ್ದ ಜನರನ್ನು ಕೂಡಾ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
ಮೋರೆ ಮತ್ತು ಗಸ್ತಿ ಪ್ರದೇಶದ ಜನರನ್ನು ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಹಾಗೂ ಶಾಲೆಯ ಆವರಣದಲ್ಲಿರುವ ಪತ್ರಾಸ ಶೆಡ್‌ಗಳಲ್ಲಿ ಸ್ಥಳಾಂತರಿಸಲಾಗಿದೆ. ಇಲ್ಲಿಯ ಜನರಿಗೆ ಬಿಸಿಯೂಟದ ವ್ಯವಸ್ಥೆಯನ್ನು ಮಾಡಿದ್ದು, ಗ್ರಾಮದ ಜನರು ಕೂಡಾ ಸಂತ್ರಸ್ತರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.
ಕೃಷ್ಣಾ ನದಿಯಲ್ಲಿಯ ಅಪಾರ ಪ್ರಮಾಣದ ನೀರಿನಿಂದಾಗಿ ಕುಲಹಳ್ಳಿ ಹಾಗೂ ಹಿಪ್ಪರಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಹಾಗೂ ಗೊಂಬಿಗುಡ್ಡ ಮೂಲಕ ಆಸಂಗಿಗೆ ಹೋಗುವ ತೋಟದ ರಸ್ತೆ ಕೂಡಾ ಜಲಾವೃತಗೊಂಡಿವೆ.
ಇದನ್ನೂ ಓದಿ :7 ರಾಜ್ಯಗಳ 22 ಜಿಲ್ಲೆಗಳಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳ: ಕಳವಳಕಾರಿ ಎಂದ ಕೇಂದ್ರ ಸರ್ಕಾರ
ಇಟ್ಟಂಗಿ ಭಟ್ಟಿಗಳು ನೀರಿನಲ್ಲಿ: ಕುಲಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಹತ್ತಾರು ಇಟ್ಟಂಗಿ ಭಟ್ಟಿಗಳು ಸಂಪೂರ್ಣವಾಗಿ ನೀರಿನಲ್ಲಿ ನಿಂತಿವೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಇಟ್ಟಂಗಿಗಳಿಗೆ ಇದರಿಂದ ಭಾರಿ ಹಾನಿಯಾಗಲಿದೆ.
ಸೋಮವಾರದಿಂದ ಕುಲಹಳ್ಳಿ ಗ್ರಾಮದಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಜನರಿಗೆ ಊಟದ, ಜಾನುವಾರುಗಳಿಗೆ ಮೇವಿನ ಹಾಗೂ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.