ನರಗುಂದ: ಮಲಪ್ರಭಾ ಪ್ರವಾಹ ನದಿ ಪಾತ್ರದ ಗ್ರಾಮಗಳನ್ನು ತಲ್ಲಣಗೊಳಿಸಿವೆ. ತಾಲೂಕಿನ ಶಿರೋಳ ಗ್ರಾಮದ ತಾಂತ್ರಿಕ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರೆ ತಾಪತ್ರಯ ತಂದೊಡ್ಡಿದೆ.
ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಶಿರೋಳ ತೋಂಟದಾರ್ಯ ವಿದ್ಯಾಪೀಠದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಕಾಲೇಜಿನ ಸಾಕಷ್ಟು ಯಂತ್ರೋಪಕರಣಗಳು ಜಲಾವೃತದಿಂದ ಜಖಂಗೊಂಡಿದೆ. ಈಗ ಇವುಗಳ ಸುಧಾರಣೆ, ಸ್ವಚ್ಛತಾ ಕಾರ್ಯ ನಡೆದಿದೆ.
ಐಟಿಐ ಕಾಲೇಜು ಸುತ್ತ 6 ಅಡಿಯಷ್ಟು ನೀರು ನಿಂತಿದ್ದರಿಂದ ಕಾಲೇಜಿನ ಎಲ್ಲ ಕೊಠಡಿಗಳಿಗೂ ನೀರು ನುಗ್ಗಿತ್ತು. ಪರಿಣಾಮ ಕಾಲೇಜಿನ ಮೆಕ್ಯಾನಿಕ್ ಡೀಸೆಲ್ ಟ್ರೇಡ್‌ನ ಜನರೇಟರ್, ಎಂಜಿನ್, ಕಾರ್, ಕಾರ್ ವಾಶರ್ ತುಕ್ಕು ಹಿಡಿದಿವೆ.
ಫಿಟ್ಟರ್ ವಿಭಾಗದ ವೆಲ್ಡಿಂಗ್, ಡ್ರಿಲ್ಲಿಂಗ್ ಬೆಲೆಬಾಳುವ ಯಂತ್ರೋಪಕರಣ, ಸ್ವೀಯಿಂಗ್ ಟೆಕ್ನಾಲಜಿ ವಿಭಾಗದ ಹೊಲಿಗೆ ಯಂತ್ರಗಳು ಪ್ರವಾಹ ಹೊಡೆತಕ್ಕೆ ಜಖಂಗೊಂಡಿವೆ. ಸಹಜವಾಗಿ ವಿದ್ಯಾರ್ಥಿಗಳ ತಾಂತ್ರಿಕ ವ್ಯಾಸಂಗಕ್ಕೆ ಧಕ್ಕೆಯಾಗಿದ್ದು, ಕ್ರಮೇಣ ಯಂತ್ರೋಪಕರಣಗಳ ದುರಸ್ತಿ ಕಾರ್ಯ ನಡೆಸಲಾಗಿದೆ. ಸುಮಾರು 2.5 ಲಕ್ಷ ರೂ. ಹೆಚ್ಚು ಹಾನಿಯಾಗಿದೆ ಎನ್ನಲಾಗಿದೆ.
ಕಾಲೇಜಿನ ಗ್ರಂಥಾಲಯಕ್ಕೂ ನೀರು ನುಗ್ಗಿದ್ದರಿಂದ ತಾಂತ್ರಿಕ ತರಬೇತಿಗೆ ಸಂಬಂಧಿಸಿದ ಬೆಲೆಬಾಳುವ ಪುಸ್ತಕಗಳು ಹಾನಿಯಾಗಿದ್ದು, ತಲಾ 200 ರೂ.ಗೂ ಹೆಚ್ಚು ಮೌಲ್ಯದ 200ಕ್ಕೂ ಹೆಚ್ಚು ಪುಸ್ತಕಗಳು ಹಾಳಾಗಿದೆ. ಅದೃಷ್ಟವಶಾತ್ ಪ್ರವಾಹ ಮುನ್ನೆಚ್ಚರಿಕೆಯಿಂದ ಕಾಲೇಜು ಸಿಬ್ಬಂದಿ ಕಚೇರಿ ಕೊಠಡಿಯಲ್ಲಿರುವ ವಿದ್ಯಾರ್ಥಿಗಳ ವ್ಯಾಸಂಗ ಪ್ರಮಾಣ ಪತ್ರಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಮೇಲಂತಸ್ತಿನ ಕಟ್ಟಡಗಳಿಗೆ ಸ್ಥಳಾಂತರಿಸಿದ್ದರಿಂದ ರಕ್ಷಣೆಯಾಗಿವೆ.
ತೋಂಟದಾರ್ಯ ಮಠದ ಕಟ್ಟಡಗಳಿಗೂ ಪ್ರವಾಹ ನೀರಿನಿಂದ ಧಕ್ಕೆಯಾಗಿದ್ದು, ಮಠದ ಒಳಾಂಗಣದ ಆಂಗ್ಲ ಮಾಧ್ಯಮ ಶಾಲೆ ಹಳೆಯ ಕಟ್ಟಡ ಸಂಪೂರ್ಣ ಜಲಾವೃತವಾಗಿದ್ದರಿಂದ ಕಟ್ಟಡದ ಗೋಡೆಗಳಿಗೆ ಸಾಕಷ್ಟು ಧಕ್ಕೆಯಾಗಿದೆ. 15 ದಿನಗಳ ಕಾಲ ಸ್ಥಗಿತಗೊಂಡಿದ್ದ ಐಟಿಐ ವಿದ್ಯಾರ್ಥಿಗಳ ತಾಂತ್ರಿಕ ವ್ಯಾಸಂಗ ಇದೀಗ ಸಾಂಗವಾಗಿ ಮುಂದುವರೆದಿದೆ.
•ಸಿದ್ಧಲಿಂಗಯ್ಯ ಮಣ್ಣೂರಮಠ