Advertisement

ನೆರೆಯಿಂದ ಹಾನಿ: ಸೂಕ್ತ ಪರಿಹಾರ ಕೊಡಿಸಿಲ್ಲ  

02:36 PM Feb 20, 2023 | Team Udayavani |

ಮಧುಗಿರಿ: ಕಳೆದ ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದು, ನನ್ನ ಅವಧಿ ಹಾಗೂ ಈಗಿನ ಅವಧಿಯ ಅಭಿವೃದ್ಧಿಯ ಬಗ್ಗೆ ಜನತೆ ಪರಾಮರ್ಶೆ ಮಾಡುವಂತೆ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.

Advertisement

ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಯಾಕಾರ‌್ಲಹಳ್ಳಿಯಲ್ಲಿ ಜೆಡಿಎಸ್‌ನ ಹಲವು ಕಾರ್ಯಕರ್ತರು, ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಕೊಡಿಗೇನಹಳ್ಳಿ ಹೋಬಳಿಯ ಸರ್ವತೋಮುಖ ಅಭಿವೃದ್ಧಿ ಕಂಡಿತ್ತು. ಆದರೆ ಈಗಿನವರಿಗೆ ನನ್ನ ಅವಧಿಯಲ್ಲಿ ಮಾಡಿದ ರಸ್ತೆಯ ಗುಂಡಿ ಮುಚ್ಚಿಸಲು ಸಾಧ್ಯವಾಗುತ್ತಿಲ್ಲ. ನೆರೆಯಿಂದ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ಕೊಡಿಸಿಲ್ಲ. ಈ ಗ್ರಾಮಕ್ಕೆ ನಾನು ರಸ್ತೆ ಸೌಲಭ್ಯ, ಕೋಟ್ಯಂತರ ರೂ. ಸಾಲ ಸೌಲಭ್ಯ ನೀಡಿದ್ದೆ. ಆದರೆ 2018 ರ ಚುನಾವಣೆಯಲ್ಲಿ ಜೆಡಿಎಸ್‌ ಗೆಲಿದ್ದಿರಿ. ಗ್ರಾಮದ ಮಹಿಳೆಯರಿಗೆ ಸೀರೆ, ಅರಿಶಿನ-ಕುಂಕುಮ ನೀಡಿದ ಜೆಡಿಎಸ್‌ನವರು ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಿದರು.

ಆದರೆ, ಈ ಬಾರಿ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ. ತಾಲೂಕಿನ ರಾಗಿ ಖರೀದಿ ಕೇಂದ್ರದಲ್ಲಿ ರೈತರನ್ನು ಘೋಷಣೆ ಮಾಡಲಾಗುತ್ತಿದ್ದು, ಮೂಟೆಗೆ 20 ರೂ. ವಸೂಲಿ ಮಾಡುತ್ತಿದ್ದು ಯಾರೂ ಗಮನಿಸುತ್ತಿಲ್ಲ. 16,400 ಮನೆಗಳನ್ನು ನಾನು ತಂದಿದ್ದೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಎಂದು ವಾಗ್ಧಾನ ಮಾಡಿದರು.

ಮುಂದೆ ಶಾಸಕನಾದರೆ ಜಿಲ್ಲಾ ಕೇಂದ್ರ, ಕೆರೆಗಳಿಗೆ ನೀರು, ಕ್ಷೇತ್ರದಲ್ಲೇ ಉದ್ಯೋಗ, ಬೆಟ್ಟವನ್ನು ಪ್ರವಾಸಿ ತಾಣವಾಗಿಸುವುದರ ಜತೆಗೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುವುದು. ಜನತೆಗೆ ನೀಡಿದ ಮಾತಿನಂತೆ ನಡೆದುಕೊಳ್ಳುವುದು ಜನಪ್ರತಿನಿಧಿಯ ಕರ್ತವ್ಯ. ಅದನ್ನು ಮರೆತವರು ನಾಯಕರಾಗಲು ನಾಲಾಯಕ್‌ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆದಿನಾರಾಯಣರೆಡ್ಡಿ ಮಾತನಾಡಿ, ಈ ಗ್ರಾಮದ ಯುವಕರು ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪರವಾಗಿದ್ದು, 250 ಹೆಚ್ಚು ಬಹುಮತ ನೀಡಿದ್ದರು. ಆದರೆ ಅವರ ಭಾವನೆಗಳಿಗೆ ಶಾಸಕರು ಸ್ಪಂದಿಸದ ಕಾರಣ ಮನನೊಂದು ಕೆಎನ್‌ಆರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಗೆ ಸೇರಿದ್ದಾರೆ. ಮುಂದೆ ಗ್ರಾಮಕ್ಕೆ ಒಳ್ಳೆಯ ಭವಿಷ್ಯವಿದ್ದು, ರಾಜಣ್ಣನವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

Advertisement

ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ .ಶ್ರೀನಿವಾಸ ಮೂರ್ತಿ, ಜೆಡಿಎಸ್‌ ತೊರೆದ ಗ್ರಾಪಂ ಸದಸ್ಯ ನರಸೇಗೌಡ ಮಾತನಾಡಿದರು. ಮುಖಂಡರಾದ ನರಸಿಂಹಮೂರ್ತಪ್ಪ, ತಿಮ್ಮಾರೆಡ್ಡಿ, ನಂಜುಂಡ ರಾಜು, ಭಾಸ್ಕರ್‌, ಶ್ರೀಧರ್‌, ಸಿದ್ದಗಂಗಪ್ಪ, ಮೋಹನ್‌ ರೆಡ್ಡಿ, ಜಯರಾಮ ರೆಡ್ಡಿ, ಸುರೇಶ್‌, ಲಕ್ಷ್ಮೀನರಸೇ ಗೌಡ, ನವೀನ್‌, ಲಕ್ಷ್ಮೀನಾರಾಯಣ್‌, ವಿನೋದ ರಾಮಚಂದ್ರಯ್ಯ, ಸೇರಿದಂತೆ ನೂರಾರು ಯುವಕರು ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

2 ಸಾವಿರ ಕೋಟಿಯಷ್ಟು ಸಾಲ ಮನ್ನಾದ ಹಣ ಸರ್ಕಾರದಿಂದ ಡಿಸಿಸಿ ಬ್ಯಾಂಕಿಗೆ ಬರಬೇಕಿದ್ದು, ಜಿಲ್ಲೆಯ ರೈತರ 53 ಕೋಟಿ ಸಾಲಮನ್ನಾದ ಹಣ ಬರಬೇಕಿದೆ. ಕೊಟ್ಟ ಸಾಲ ಸರ್ಕಾರ ನೀಡಿಲ್ಲ. ಅದು ರೈತರ ಠೇವಣಿ ಹಣದಿಂದ ನೀಡಿದ್ದೇವೆ. ಅದನ್ನು ನನ್ನ ಮನೆಯಿಂದ ಕೊಟ್ಟಿಲ್ಲ ಎನ್ನುವವರಿಗೆ ಚುನಾವಣೆ ಮುಗಿದ ನಂತರ ಬುದ್ಧಿ ಕಲಿಸುತ್ತೇನೆ. -ಕೆ.ಎನ್‌.ರಾಜಣ್ಣ, ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next