ಹಟ್ಟಿ ಚಿನ್ನದ ಗಣಿ: ನಾರಾಯಣಪುರ ಬಲದಂಡೆ ನಾಲೆಯಿಂದ ಗುಡ್ಡದಂಚಿನ ರೈತರ ಜಮಿನುಗಳಿಗೆ ನೀರು ಹರಿಸಲು ಮೀನ ಮೇಷ ಎಣಿಸುತ್ತಿರುವ ಕೃಷ್ಣ ಭಾಗ್ಯ ಜಲ ನಿಗಮ ಮತ್ತು ಸರ್ಕಾರ ಸದ್ದಿಲ್ಲದೆ ರೈತರ ಬಾಳಲ್ಲಿ ಆಟವಾಡುತ್ತಿದೆ.
ಬಸವಸಾಗರ ಜಲಾಶಯದ ಬಲದಂಡೆ ಮುಖ್ಯ ನಾಲೆಯ 54ನೇ ಕಿ.ಮೀ. ರೆಗ್ಯೂಲೇಟರ್ ಎಸ್ಕೇಪ್ ಮೂಲಕ ಬರುವ ನೀರನ್ನು ಒಂದೆಡೆ ಸಂಗ್ರಹ ಮಾಡಿ ಗುಡ್ಡದಂಚಿನ ಗ್ರಾಮಗಳ ಯರಜಂತಿ, ಪೈದೋಡ್ಡಿ ಸೇರಿ ಹಲವು ದೊಡ್ಡಿಗಳ ರೈತರ ಸುಮಾರು 700 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲು ಕೆಬಿಜೆಎನ್‌ಎಲ್ ನಾಲೆ ನಿರ್ಮಿಸಿದೆ. ಮಳೆ ಇಲ್ಲದ ಬರಗಾಲದ ಪರಿಸ್ಥಿತಿಯಲ್ಲೂ ರೈತರ ಜಮೀನುಗಳಿಗೆ ನೀರಿನ ತೊಂದರೆ ಆಗದಂತೆ ನಿಗಮದ ಅಧಿಕಾರಿಗಳು ಎರಡೂ ನಾಲೆಗಳ ಮೂಲಕ ನೀರು ಹರಿಸಿದ್ದರು. ಇದರಿಂದ ರೈತರು ಮುಂಗಾರಿನಲ್ಲಿ ಸಜ್ಜೆ, ಬೇಸಿಗೆ ಬೆಳೆಯಾದ ಶೇಂಗಾ ಬಿತ್ತನೆ ಮಾಡುತ್ತಿದ್ದರು.
ನೀರು ಹರಿವಿಗೆ ತಡೆ: ಪ್ರಸಕ್ತ ವರ್ಷ ಉತ್ತಮ ಮಳೆ ಆಗಿದ್ದು, ಬಸವಸಾಗರ ಅಣೆಕಟ್ಟೆಯಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಆದರೆ ಮುಖ್ಯ ನಾಲೆಯ 54ನೇ ಕಿ.ಮೀ. ರೆಗ್ಯೂಲೇಟರ್ ಮೂಲಕ ನಾಲೆಗಳಿಗೆ ನೀರು ಹರಿಸುವುದನ್ನು ತೆಡೆಗಟ್ಟಿ ಗೇಟ್ ಬಂದ್ ಮಾಡಲಾಗಿದೆ. ಇದರಿಂದ ಗುಡ್ಡದಂಚಿನ ರೈತರ ಜಮೀನುಗಳಿಗೆ ಹನಿ ನೀರು ಹರಿಯುತ್ತಿಲ್ಲ.
ನೀರಿಗಾಗಿ ರೈತರ ಗುದ್ದಾಟ: ಬಿತ್ತನೆ ಮಾಡಿದ ನಂತರ 20 ದಿನಗಳ ನಂತರ ಶೇಂಗಾ ಬೆಳೆಗೆ ನೀರಿನ ಅಗತ್ಯವಿದೆ. ಈಗ ಜಲಾಶಯದಲ್ಲಿ ನೀರಿದ್ದರೂ 54ನೇ ಕಿ.ಮೀ. ರೆಗ್ಯೂಲೇಟರ್ ಮೂಲಕ ನಾಲೆಗಳಿಗೆ ನೀರು ಹರಿಸದ್ದರಿಂದ ರೈತರು ಕಂಗೆಟ್ಟಿದ್ದು, ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಗುಡ್ಡದಂಚಿನ ಜಮೀನುಗಳಿಗೆ ನೀರು ಹರಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮ ವಹಿಸಬೇಕೆಂದು ರೈತರು ಆಗ್ರಹಿಸಿದ್ದಾರೆ
ಸುಮಾರು ನಾಲ್ಕು ವರ್ಷಗಳಿಂದ ನಾಲೆ ಮೂಲಕ ನೀರು ಬಿಡಲಾಗುತ್ತಿದ್ದು, ಇದನ್ನು ನಂಬಿ ಬೇಸಿಗೆಯಲ್ಲೂ ಬಿತ್ತನೆ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ಈ ವರ್ಷ ನೀರು ಬಿಡುವುದಿಲ್ಲ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುವ ನಮಗೆ ಇದರ ಅರಿವು ಇಲ್ಲ. ಏಕಾಏಕಿ ನಾಲೆಗೆ ನೀರು ಬಂದ್ ಮಾಡಿದ್ದರಿಂದ ತೊಂದರೆ ಆಗಿದೆ. ತಿಮ್ಮಯ್ಯ, ಯರಜಂತಿ ಗ್ರಾಮದ ರೈತ
ಯರಜಂತಿ, ಪೈದೊಡ್ಡಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರಿಗೆ ನೀರು ಬಿಡಬೇಕು ಎಂಬ ಆದೇಶವಿಲ್ಲ. ಮುಖ್ಯ
ನಾಲೆಯಿಂದ ರೈತರ ಜಮೀನಿಗೆ ನೀರಿನ ಲಭ್ಯತೆ ಇಲ್ಲ. ಅದಕ್ಕಾಗಿ ರೆಗ್ಯೂಲೇಟರ್ ಎಸ್ಕೇಪ್ ಗೇಟ್ ಬಂದ್
ಮಾಡಲಾಗಿದೆ. ಅಶೋಕ ಅಭಿಯಂತರ, ಕೆಬಿಜೆಎನ್ ಎಲ್ ರೋಡಲಬಂಡಾ (ಯುಕೆಪಿ)