ಕುದೂರು(ರಾಮನಗರ): ಶಾಲಾ ಮಕ್ಕಳನ್ನು ಪ್ರವಾ ಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ, ಶಾಲೆಯ ಸಂಸ್ಕೃತ ಮುಖ್ಯಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳು ಮತ್ತು ಸಿಬ್ಬಂದಿಯನ್ನು ಪ್ರವಾಸಕ್ಕೆ ವಿಮಾ ನದಲ್ಲಿ ಕರೆದೊಯ್ಯಲು ಮುಂದಾಗಿರುವುದು ವಿಶೇಷ.
ಮಾಗಡಿ ತಾಲೂಕಿನ ಕುದೂರು ಹೋಬಳಿಯ ಹರಳೂರು ಗ್ರಾಮದ ಶ್ರೀ ಸಿದ್ಧಗಂಗಾ ಸಂಸ್ಥೆಯ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢ ಶಾಲೆಯ ಸಂಸ್ಕೃತ ಮುಖ್ಯ ಶಿಕ್ಷಕ, ತಾಲೂಕಿನ ಕಣನೂರು ಪಾಳ್ಯದ ರಾಜಣ್ಣ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 2.76 ಲಕ್ಷ ರೂ. ವ್ಯಯಿಸಿ ಶಾಲೆಯ 8, 9, 10ನೇ ತರಗತಿಯ 51 ವಿದ್ಯಾರ್ಥಿಗಳು ಮತ್ತು 8 ಜನ ಶಾಲಾ ಸಿಬ್ಬಂದಿಯನ್ನು ಮಹಾರಾಷ್ಟ್ರದ ಪೂನಾಗೆ ವಿಮಾನದಲ್ಲಿ ಕರೆದೊಯ್ಯಲು ಮುಂದಾಗಿದ್ದಾರೆ.
ಡಿ.3 ರಂದು ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಪುಣೆಗೆ ತೆರಳಿ ನಂತರ ಬಸ್ನಲ್ಲಿ ಶಿರಡಿ, ನಾಸಿಕ್, ಶನಿಸಿಂಗ್ಲಾಪುರ, ಅಂಜತಾ, ಎಲ್ಲೋರ, ಪಂಢರಾಪುರ, ಕೊಲ್ಲಾಪುರ ಮೊದಲಾದ ಪ್ರವಾಸಿ ಕೇಂದ್ರಗಳಿಗೆ ತೆರಲಿದ್ದಾರೆ. ನಾನು ಚಿಕ್ಕಂದಿನಿಂದಲೇ ವಿಮಾನವನ್ನು ಹತ್ತಿರದಿಂದ ನೋಡಬೇಕು, ಅದರಲ್ಲಿ ಹೋಗಬೇಕೆಂಬ ಆಸೆ ಇತ್ತು. ಅದು ಈಡೇರದಿದ್ದಾಗ ಸಂಕಟಪಟ್ಟಿದ್ದೆ. ಇಂತಹ ಸ್ಥಿತಿ ಮಕ್ಕಳಿಗೆ ಬರಬಾರದೆಂದು ವಿಮಾನದಲ್ಲಿ ಪ್ರಯಾಣ ಮಾಡಿಸುತ್ತಿದ್ದೇನೆ. ಮಕ್ಕಳ ಆಲೋಚನೆಗಳು ಬಹಳ ಎತ್ತರಕ್ಕೆ ಬೆಳೆಯಬೇಕು. ಅದಕ್ಕಾಗಿ ಇಂತಹ ಒಂದು ಸಣ್ಣ ಪ್ರಯೋಗವನ್ನು ಮಾಡುತ್ತಿದ್ದೇನೆ ಎಂದು ರಾಜಣ್ಣ ಅವರು “ಉದಯವಾಣಿ’ಗೆ ತಿಳಿಸಿದರು.
ಮಕ್ಕಳು ಮತ್ತು ಶಿಕ್ಷಕರ ಜೊತೆಗೆ ಬಿಸಿಯೂಟ ತಯಾರಿಸುವವರು, ಶಾಲೆ ಸ್ವತ್ಛಗೊಳಿಸುವ ಸಿಬ್ಬಂದಿಯನ್ನು ಪ್ರವಾಸಕ್ಕೆ ಕರೆದೊಯ್ಯುವ ಬಗ್ಗೆ ಮಾಹಿತಿ ನೀಡಿದರು. ಒಟ್ಟಾರೆ ಶಾಲೆಯ 51 ಮಕ್ಕಳು, 8 ಜನ ಶಾಲಾ ಸಿಬ್ಬಂದಿಯನ್ನು ಪ್ರವಾಸಕ್ಕೆ ವಿಮಾನದಲ್ಲಿ ಕರೆದುಕೊಂಡು ಹೋಗಲು 2.76 ಲಕ್ಷ ರೂ.ಗಳನ್ನು ಸಂಸ್ಕೃತ ಮುಖ್ಯಶಿಕ್ಷಕ ರಾಜಣ್ಣ ವ್ಯಯಿಸುತ್ತಿದ್ದಾರೆ. ಬರುವಾಗ ಬಸ್ನಲ್ಲಿ ಪ್ರಯಾಣ ಬೆಳೆಸಲಿದ್ದು ಇದಕ್ಕೆ 1.80 ಲಕ್ಷ ರೂ. ಖರ್ಚಾಗಲಿದೆ. ಈ ಹಣವನ್ನು ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿ ಭರಿಸಲಿದ್ದಾರೆ. ಪ್ರವಾಸ ವೇಳೆ ಊಟ, ವಸತಿ, ಓಡಾಟಕ್ಕಾಗಿ ಶಾಲೆಯ ಮುಖ್ಯ ಶಿಕ್ಷಕ ಗುರುಮೂರ್ತಿ 50 ಸಾವಿರ ರೂ. ವ್ಯಯಿಸಲಿದ್ದಾರೆ.
ರಾಜಣ್ಣ ಅವರು ಹಳ್ಳಿಗಾಡಿನ ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪ್ರವಾಸಕ್ಕೆ ವಿಮಾನದಲ್ಲಿ ಕರೆದು ಕೊಂಡು ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮಕ್ಕಳಿಗೆ ಅವರು ಚೈತನ್ಯ ತುಂಬುತ್ತಿದ್ದಾರೆ.
– ಎಸ್.ಗುರುಮೂರ್ತಿ, ಮುಖ್ಯ ಶಿಕ್ಷಕ ಶ್ರೀವೀರಭದ್ರೇಶ್ವರ ಪ್ರೌಢ ಶಾಲೆ
– ಕೆ.ಎಸ್.ಮಂಜುನಾಥ್ ಕುದೂರು