ಕೊಪ್ಪಳ: ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಎಲ್ಲರಿಗೂ ಆ ಆಸೆ ಈಡೇರುವುದು ಈ ಕಾಲದಲ್ಲೂ ಗಗನ ಕುಸುಮವಾಗಿರುವಾಗ ಕೊಪ್ಪಳ ತಾಲೂಕಿನ ಲಿಂಗದಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಳ್ಳಾರಿ ಜಿಂದಾಲ್ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಶಾಲಾ ಶೈಕ್ಷಣಿಕ ಪ್ರವಾಸ ಬೆಳೆಸಿ ಸಂಭ್ರಮಿಸಿದರು.
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ವಿಮಾನ ಯಾನ ಪ್ರವಾಸಕ್ಕೆ ಸ್ವತಃ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಶುಕ್ರವಾರ ಆಗಮಿಸಿ ಮಕ್ಕಳಿಗೆ ಶುಭ ಹಾರೈಸಿ ಕಳುಹಿಸಿದ್ದರು. ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವರ್ಗವು ಶಾಲಾ ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಪ್ರವಾಸ ಮಾಡಿಸಬೇಕು ಎಂದು ಕಳೆದ ಮೂರು ತಿಂಗಳ ಮೊದಲೇ ಯೋಜನೆ ರೂಪಿಸಿ ಶುಕ್ರವಾರದಂದು 30 ಶಾಲಾ ವಿದ್ಯಾರ್ಥಿಗಳು ಟಿಕೆಟ್ ಬುಕ್ ಮಾಡಿದ್ದರು. ಲಿಂಗದಹಳ್ಳಿ ಗ್ರಾಮದಿಂದ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದ ಮೂಲಕ ಹೈದರಾಬಾದ್ ಪ್ರವಾಸ, ನಂತರ ವಿಜಯಪುರ, ಆಲಮಟ್ಟಿ ಪುನಃ ಕೊಪ್ಪಳಕ್ಕೆ ರೈಲಿನ ಮೂಲಕ ಆಗಮಿಸುವ ಶೈಕ್ಷಣಿಕ ಪ್ರವಾಸ ನಿಗದಿ ಮಾಡಿದ್ದರು.
ವಿದ್ಯಾರ್ಥಿಗಳ ಖುಷಿಗೆ ಪಾರವೇ ಇಲ್ಲ:
ಮಧ್ಯಾಹ್ನ 12 ಗಂಟೆ ಲಿಂಗದಳ್ಳಿ ಗ್ರಾಮದಿಂದ ಕಿರ್ಲೋಸ್ಕರ್ ಕಂಪನಿಯ ಬಸ್‌ನಲ್ಲಿ ಜಿಂದಾಲ್ ವಿಮಾನ ನಿಲ್ದಾಣಕ್ಕೆ ತೆರಳಿದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಸೇರಿ ಒಟ್ಟು 42 ಮಂದಿ ಮಧ್ಯಾಹ್ನ ವಿಮಾನ ಹತ್ತಿದರು. ಈ ವೇಳೆ ವಿದ್ಯಾರ್ಥಿಗಳ ಖುಷಿಗೆ ಪಾರವೇ ಇರಲಿಲ್ಲ.
ಮೊದಲೆಲ್ಲಾ ಶಾಲಾ ಆವರಣ, ತಮ್ಮ ಮನೆಯ ಮುಂದೆ ನಿಂತು ಆಕಾಶದಲ್ಲಿ ಹಾರಾಟ ಮಾಡುವ ವಿಮಾನ ನೋಡಿ ಖುಷಿ ಪಡುತ್ತಿದ್ದರು. ಸುದೈವ ಎಂಬಂತೆ ಶಾಲಾ ಶಿಕ್ಷಕರೊಂದಿಗೆ ಹೈದ್ರಾಬಾದ್‌ಗೆ ವಿಮಾನದಲ್ಲಿ ಪ್ರವಾಸ ಬೆಳೆಸುವ ಅವಕಾಶ ದೊರೆತಿದ್ದಕ್ಕೆ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ, ಸಂಭ್ರಮ ಮನೆ ಮಾಡಿತ್ತು.
ಇತ್ತ ಮಕ್ಕಳ ಪಾಲಕರಲ್ಲೂ ಸಂತಸ ತರಿಸಿತ್ತು. ನಾವಂತೂ ವಿಮಾನ ಹತ್ತಲಿಲ್ಲ. ನಮ್ಮ ಮಕ್ಕಳಾದರೂ ವಿಮಾನದಲ್ಲಿ ಪ್ರವಾಸ ಬೆಳೆಸುತ್ತಿದ್ದಾರಲ್ಲ ಎಂದು ಅವರಲ್ಲೂ ಸಂತಸ ತರಿಸಿತ್ತು. ವಿಮಾನ ಆಕಾಶದೆತ್ತರಕ್ಕೆ ಹಾರುತ್ತಿದ್ದಂತೆ ಮಕ್ಕಳು ಖುಷಿಯಿಂದಲೇ ವಿಮಾನದ ಕಿಟಕಿಯ ಮೂಲಕ ಭೂಮಿಯ ತದೇಕ ಚಿತ್ತದಿಂದ ನೋಡುತ್ತಿದ್ದರು. ಆಕಾಶದಲ್ಲಿ ತೇಲುವ ಮೋಡಗಳ ನೋಡಿ ಖುಷಿ ಪಟ್ಟರು. ವಿಮಾನ ಏರುವ ಹಾಗೂ ಇಳಿಯುವ ವೈಖರಿ ನೋಡಿ ವಿಸ್ಮಿತರಾದರು.
ವಿಮಾನ ನಿಲ್ದಾಣದ ಆರಂಭದಿಂದ ಮುಕ್ತಾಯದವರೆಗೂ ಮಕ್ಕಳಿಗೆ ಎಲ್ಲವೂ ಹೊಸದಾಗಿತ್ತು. ಸಂಜೆ ಹೈದ್ರಾಬಾದ್‌ಗೆ ಸುರಕ್ಷಿತವಾಗಿ ತಲುಪಿದ ಶಾಲಾ ಮಕ್ಕಳು ಮುಂದೆ ಅಲ್ಲಿನ ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು. ಮುಖ್ಯ ಶಿಕ್ಷಕ ವಿಶ್ವೇಶ್ವರಯ್ಯ, ಶಿಕ್ಷಕ ಮಂಜುನಾಥ ಪೂಜಾರ ಸೇರಿ ಹಲವು ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಮಕ್ಕಳ ಬಗ್ಗೆ ಕಾಳಜಿ ವಹಿಸಿದ್ದು ಗಮನಾರ್ಹವಾಗಿತ್ತು. ಈ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ವಿಮಾನಯಾನ ಪ್ರವಾಸಕ್ಕೆ ಸ್ಥಳೀಯ ಕಂಪನಿ, ಗ್ರಾ.ಪಂ ಸೇರಿ ದಾನಿಗಳು ನೆರವಾಗಿ ಮಕ್ಕಳ ಗಗನಯಾನದ ಕನಸು ನನಸು ಮಾಡಿದರು.