Advertisement

Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ

09:01 PM Oct 16, 2024 | Team Udayavani |

ಬೆಳಗಾವಿ: ಬೆಳಗಾವಿ ಮತ್ತು ಬೆಂಗಳೂರು ಮಧ್ಯೆ ದಿನನಿತ್ಯ ಸಂಚರಿಸುವ ಇಂಡಿಗೋ ವಿಮಾನವನ್ನು ದಿನಾಂಕ 27 ರಿಂದ ಸ್ಥಗಿತಗೊಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವರಾದ ಕೆ. ಆರ್ ನಾಯ್ಡು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

Advertisement

ಬೆಳಗಾವಿ ಬೆಂಗಳೂರು ಬೆಳಗಾವಿ ಮಧ್ಯೆ ದಿನನಿತ್ಯ ಬೆಳಿಗ್ಗೆ ಸಂಚರಿಸುವ ಇಂಡಿಗೋ ಸಂಸ್ಥೆ ವಿಮಾನಯಾನ ಸೇವೆಯನ್ನು ರದ್ದು ಮಾಡಬಾರದು‌. ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗಲಿದೆ ಎಂದರು.

ಬೆಳಗಾವಿ – ಬೆಂಗಳೂರು ನಡುವೆ ಇಂಡಿಗೋ ಸಂಸ್ಥೆ ಪ್ರತಿನಿತ್ಯ ಬೆಳಿಗ್ಗೆ ವಿಮಾನಯಾನ ಸೇವೆಯನ್ನು ಒದಗಿಸುತ್ತಾ ಬಂದಿದೆ. ಕಳೆದ ಒಂದು ವರ್ಷದಲ್ಲಿ ಪ್ರತಿಶತ 82 ರಷ್ಟು ಅಂದರೆ ಪೂರ್ಣ ಸಾಮರ್ಥ್ಯ ಪ್ರಯಾಣಿಕರು ಇದರಲ್ಲಿ ಸಂಚಾರ ಮಾಡಿದ್ದಾರೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.

ಆದರೆ ಈಗ ಇಂಡಿಗೋ ಏರ್ ಲೈನ್ಸ್ ಬರುವ ದಿನಾಂಕ 27 ರಿಂದ ಈ ಸೇವೆಯನ್ನು ರದ್ದುಗೊಳಿಸಲಿದೆ. ಇದು ಅತ್ಯಂತ ಬೇಸರದ ಸಂಗತಿ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಲಿದೆ‌. ಆದ್ದರಿಂದ ಯಾವುದೇ ಕಾರಣಕ್ಕೂ ರದ್ದು ಮಾಡದಂತೆ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸುವಂತೆ ಜಗದೀಶ್ ಶೆಟ್ಟರ್ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಈ ಬಗ್ಗೆ ಸಂಬಂಧಿಸಿದ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸುವ ಭರವಸೆ ನೀಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

Advertisement

ಇದಲ್ಲದೆ ಬೆಳಗಾವಿ ವಿಮಾನ ನಿಲ್ದಾಣದಿಂದ ಪುಣೆ, ಚೆನ್ನೈ ಕೊಚ್ಚಿನ್, ಲಖನೌ, ಮೈಸೂರು, ಸೂರತ್, ಮುಂಬಯಿ (ಏರ್ ಬಸ್) ಬೆಂಗಳೂರು (ಏರ್ ಬಸ್) ಗಳಿಗೂ ಸಹ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಇತರೆ ವಿಮಾನ ಸಂಸ್ಥೆಗಳೊಂದಿಗೆ ಸಮಾಲೋಚಿಸುವಂತೆ ಮನವಿ ಮಾಡಿದರು.

ಉಡಾನ್ -3/0 ಯೋಜನೆಯನ್ನು ಸಹ 10 ವರ್ಷಗಳ ಕಾಲಾವಧಿಗೆ ವಿಸ್ತರಿಸಿ, ಇದಕ್ಕೆ ಬೆಳಗಾವಿ ವಿಮಾನ ನಿಲ್ದಾಣವನ್ನು ಸೇರ್ಪಡೆ ಮಾಡಿ ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.

ಇದೇ ಸಮಯದಲ್ಲಿ ಜಗದೀಶ್ ಶೆಟ್ಟರ್ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಪ್ರಸ್ತಾಪಿತ ವಿಮಾನಯಾನ ಸೇವೆಯ ಲೀಸ್ ಅವಧಿ ಪೂರ್ಣಗೊಂಡಿರುವ ಕಾರಣ ಈ ಸೇವೆಯನ್ನು ರದ್ದುಪಡಿಸುವುದು ಅನಿವಾರ್ಯವಾಗಿದೆ.
ಆದರೆ ಬರುವ ಡಿಸೆಂಬರ್ ತಿಂಗಳಲ್ಲಿ ಖಂಡಿತವಾಗಿ ಪ್ರಸ್ತಾಪಿತ ಮಾರ್ಗದಲ್ಲಿ ಈ ಸೇವೆಯನ್ನು ಪುನಃ ಆರಂಭಿಸುವ ಭರವಸೆಯನ್ನು ಸಂಸ್ಥೆಯ ಅಧಿಕಾರಿಗಳು ನೀಡಿದರು ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next