Advertisement

ವಿಮಾನ ಹಾರಾಟ ಪುನರಾರಂಭ; ಡಿಜಿಸಿಎ ತನಿಖೆ

02:23 AM Jul 02, 2019 | Sriram |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ರನ್‌ವೇಯಿಂದ ಜಾರಿದ್ದ ಏರ್‌ ಇಂಂಡಿಯಾ ಎಕ್ಸ್‌ಪ್ರೆಸ್‌ ವಿಮಾನವನ್ನು ಎಂಜಿನಿಯರ್‌ಗಳು ಅಲ್ಲಿಂದ ರನ್‌ವೇಯ ಬೇರೆ ಕಡೆಗೆ ಸೋಮವಾರ ಸ್ಥಳಾಂತರಿಸಿದರು. ಆ ಬಳಿಕ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಪುನರಾರಂಭಗೊಂಡಿತು.

Advertisement

ಈ ನಡುವೆ ರವಿವಾರ ಸಂಜೆ ನಡೆದ ಘಟನೆಗೆ ಸಂಬಂಧಿಸಿ ತನಿಖೆ ನಡೆಸಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ಐವರು ಸದಸ್ಯರ ತಂಡವನ್ನು ಮಂಗಳೂರಿಗೆ ಕಳುಹಿಸಿದ್ದು, ತಂಡವು ಬೆಳಗ್ಗಿನಿಂದ ಸಂಜೆಯವರೆಗೆ ತನಿಖೆ ನಡೆಸಿ ವಾಪಸಾಗಿದೆ.

ರವಿವಾರ ಸಂಜೆ 5.45ಕ್ಕೆ ದುಬಾೖಯಿಂದ ಬಂದಿಳಿದ 183 ಪ್ರಯಾಣಿಕರು ಮತ್ತು 6 ಜನ ಸಿಬಂದಿ ಸಹಿತ 189 ಮಂದಿ ಇದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ಬಿ737- 300)ವು ನಿಲ್ದಾಣದಲ್ಲಿ ಇಳಿದ ಬಳಿಕ ಟರ್ಮಿನಲ್ ಬಿಲ್ಡಿಂಗ್‌ ಕಡೆಗೆ ಸಾಗುತ್ತಿದ್ದಾಗ ರನ್‌ವೇಯಿಂದ ಜಾರಿ ಅದರ ಚಕ್ರವು ಮಣ್ಣಿನಲ್ಲಿ ಹೂತು ಹೋಗಿತ್ತು. ಈ ವಿಮಾನವನ್ನು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಎಂಜಿನಿಯರ್‌ಗಳು ರನ್‌ವೇಯ ಬೇರೆಡೆಗೆ ಸ್ಥಳಾಂತರಿಸುವಲ್ಲಿ ಸೋಮವಾರ ಮುಂಜಾನೆ 3 ಗಂಟೆ ವೇಳೆಗೆ ಯಶಸ್ವಿಯಾಗಿದ್ದಾರೆ. ಹಾಗಾಗಿ ಮುಂಜಾನೆಯಿಂದಲೇ ಇಲ್ಲಿಂದ ವಿಮಾನ ಹಾರಾಟ ಪುನರಾರಂಭಗೊಂಡಿದೆ.

ಘಟನೆಯ ಕುರಿತಂತೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಕೂಡ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.

ಡಿಜಿಸಿಎ ತಂಡ ವರದಿ ಸಲ್ಲಿಸಿದ ಬಳಿಕ ಮುಂದೆ ಇಂತಹ ಘಟನೆಗಳು ನಡೆಯದಂತೆ ಸಾಧ್ಯವಿರುವ ಎಲ್ಲ ಕ್ರಮ ಜರಗಿಸಲಾಗುತ್ತದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್‌ ತಿಳಿಸಿದ್ದಾರೆ.

Advertisement

ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರ್ಘ‌ಟನೆ ಯಿಂದಾಗಿ ಶನಿವಾರ ರಾತ್ರಿ ಮಂಗಳೂರಿನಲ್ಲಿ ಇಳಿಯ ಬೇಕಾಗಿದ್ದ ಸ್ಪೈಸ್‌ ಜೆಟ್ ವಿಮಾನ ಬೆಂಗಳೂರಿಗೆ ತೆರಳಿತ್ತು. ಅಲ್ಲಿಂದ ಪ್ರಯಾಣಿಕರನ್ನು ಬಸ್‌ನಲ್ಲಿ ಕಳುಹಿಸಲಾಗಿತ್ತು.

ತನಿಖೆಗೆ ನಳಿನ್‌ ಆಗ್ರಹ
ರವಿವಾರ ಏರ್‌ ಇಂಡಿಯಾ ವಿಮಾನವು ರನ್‌ ವೇಯಿಂದ ಹೊರಗೆ ಜಾರಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಸೋಮವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರನ್ನು ಲೋಕಸಭೆಯಲ್ಲಿ ಅಧಿವೇಶನ ಸಂದರ್ಭ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಇಂತಹ ದುರ್ಘ‌ಟನೆಗಳಿಗೆ ಇಲ್ಲಿನ ಕಿರಿದಾದ ರನ್‌ವೇಯೇ ಕಾರಣ ಎಂಬುದು ಸ್ಪಷ್ಟ. ಹಾಗಾಗಿ ರನ್‌ವೇಯನ್ನು ವಿಸ್ತರಿಸುವ ಬಗ್ಗೆ ಹಾಗೂ ವಿಮಾನ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಸದರು ಈ ವೇಳೆ ಸಚಿವರನ್ನು ಆಗ್ರಹಿಸಿದರು.


Advertisement

Udayavani is now on Telegram. Click here to join our channel and stay updated with the latest news.

Next