Advertisement

ಫ್ಲೆಕ್ಸ್ ವಿರುದ್ಧ ಕೇಸ್‌, ದಂಡ ಕ್ರಮಕ್ಕೆ ಹಿಂದೇಟು

01:04 PM Feb 11, 2023 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂಬ ನಿಯಮವಿದೆ. ಆದರೆ, ಕಳೆದ ಒಂದೂವರೆ ತಿಂಗಳಿನಿಂದ ಬಿಬಿಎಂಪಿ ಅಧಿಕಾರಿಗಳು ಯಾರೊಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ ಮತ್ತು ಒಂದು ರೂಪಾಯಿ ಕೂಡ ದಂಡ ವಸೂಲಿ ಮಾಡಿಲ್ಲ.

Advertisement

ನಗರದ ಸೌಂದರ್ಯ ಮತ್ತು ಪರಿಸರ ಹಾಳು ಮಾಡುತ್ತಿರುವ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲಾಗಿದೆ. ಹೈಕೋರ್ಟ್‌ ಆದೇಶ ಹಾಗೂ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕೆಲ ಸಂದರ್ಭಗಳನ್ನು ಹೊರತು ಪಡಿಸಿ ಜಾಹೀರಾತು ಪ್ರದರ್ಶನ ಸಂಪೂರ್ಣ ನಿಷೇಧಿಸಲಾಗಿದೆ. ಅದರಲ್ಲೂ ಫ್ಲೆಕ್ಸ್‌, ಬ್ಯಾನರ್‌ಗಳ ಅಳವಡಿಕೆಯನ್ನು ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಈ ಕುರಿತಂತೆ ಬಿಬಿಎಂಪಿ ಜಾಹೀರಾತು ಬೈಲಾ 2006ಕ್ಕೆ ತಿದ್ದುಪಡಿ ತಂದು, ಅನಧಿಕೃತ ಜಾಹೀರಾತು ಅಳವಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕಂದಾಯ ವಿಭಾಗದ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆದರೆ, ಅನಧಿಕೃತ ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ಸಮ ರ್ಪಕ ಕ್ರಮ ಕೈಗೊಳ್ಳದ ಬಿಬಿಎಂಪಿ ಕಂದಾಯ ಅಧಿಕಾರಿಗಳು, 2023ರ ಜನವರಿಯಿಂದ ಈವರೆಗೆ ಒಂದು ರೂಪಾಯಿ ಕೂಡ ದಂಡ ವಸೂಲಿ ಮಾಡದೆ ಬೇಜವಾಬ್ದಾರಿತನ ತೋರಿದ್ದಾರೆ.

8,424 ಫ್ಲೆಕ್ಸ್‌, ಬ್ಯಾನರ್‌: ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಲೆಕ್ಕ ಹಾಕಿರುವಂತೆ ಜನವರಿ 1ರಿಂದ ಈವರೆಗೆ ನಗರದಲ್ಲಿ 8,424 ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳು ಅಳವಡಿಕೆಯಾಗಿವೆ. ಅದರಲ್ಲಿ ಈಗಾಗಲೇ 7,847 ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವು ಮಾಡಲಾಗಿದೆ. ಆದರೆ, ಹೀಗೆ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಿದವರ ವಿರುದ್ಧ ನೋಟಿಸ್‌ ನೀಡ ಲು ಬಿಬಿಎಂಪಿ ವಲಯ ಅಧಿಕಾರಿಗಳು ಮುಂದಾಗಿಲ್ಲ. ಬಿಬಿಎಂಪಿ ಅಧಿಕಾರಿಗಳು ನೀಡಿರುವ ವಲಯವಾರು ಮಾಹಿತಿಯಂತೆ ಮಹದೇವಪುರ ದಲ್ಲಿ ಅತಿಹೆಚ್ಚು ಫ್ಲೆಕ್ಸ್‌, ಬ್ಯಾನರ್‌ಗಳು ಅಳವಡಿಕೆಯಾಗಿವೆ. ಮಹದೇವಪುರ ಒಂದೇ ವಲಯ ದಲ್ಲಿ 4,897 ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಲಾಗಿದೆ. ಅದೇ ಪೂರ್ವ ವಲಯದಲ್ಲಿ ಒಂದೂ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಗುರುತಿಸಿಲ್ಲ ಎಂದು ಮಾಹಿತಿ ನೀಡಲಾಗಿದೆ.

ಅಲ್ಲದೆ, ಮಹದೇವಪುರ, ಪಶ್ಚಿಮ, ಬೊಮ್ಮನಹಳ್ಳಿ ವಲಯಗಳಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‌, ಬ್ಯಾನರ್‌ಗಳನ್ನೆಲ್ಲ ತೆರವು ಮಾಡಲಾಗಿದ್ದು, ಸದ್ಯ ಯಾವುದೇ ಫ್ಲೆಕ್ಸ್‌, ಬ್ಯಾನರ್‌ಗಳಿಲ್ಲ ಎಂದು ತಿಳಿಸಲಾಗಿದೆ. ಅದೇ ಯಲಹಂಕ ವಲಯದಲ್ಲಿ ಕೇವಲ 270 ಫ್ಲೆಕ್ಸ್‌, ಬ್ಯಾನರ್‌ಗಳಿದ್ದು, ಅವುಗಳ ತೆರವಿಗೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಫ್ಲೆಕ್ಸ್‌, ಬ್ಯಾನರ್‌ಗಳ ಹಾವಳಿ ತಪ್ಪಿಸಲು ಪಾಲಿಕೆ ವಲಯ ಅಧಿಕಾರಿಗಳು ಪ್ರತಿ ತಿಂಗಳು ಅನಧಿಕೃತ ಅಳವಡಿಕೆ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ತಲಾ 10 ಪ್ರಕರಣ ದಾಖಲಿಸಬೇಕು ಎಂಬ ಆದೇಶವಿದೆ. ಅದನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ಪದೇ ಪದೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ, ಮುಖ್ಯ ಆಯುಕ್ತರ ಆದೇಶಕ್ಕೂ ವಲಯ ಅಧಿಕಾರಿಗಳು ಬೆಲೆ ನೀಡದಂತಾಗಿದೆ.

Advertisement

ಹೈಕೋರ್ಟ್‌ ತರಾಟೆ ನಂತರ ಸರಣಿ ಸಭೆ : ಅನಧಿಕೃತ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ಕುರಿತಂತೆ ಗುರುವಾರವಷ್ಟೇ ಹೈಕೋರ್ಟ್‌ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, 2018ರ ನಂತರದಿಂದ ಫ್ಲೆಕ್ಸ್‌, ಬ್ಯಾನರ್‌ಗಳ ಅಳವಡಿಕೆಗೆ ತಡೆಯ ಕುರಿತಂತೆ ಬಿಬಿಎಂಪಿ ಕಾರ್ಯವೈಖರಿ ವಿರುದ್ಧ ಹೈಕೋರ್ಟ್‌ ಆಗಾಗ ಛೀಮಾರಿ ಹಾಕುತ್ತಲೇ ಇದೆ. ಆದರೂ, ಬಿಬಿಎಂಪಿ ಅಧಿಕಾರಿಗಳುಕ್ರಮ ಕೈಗೊಳ್ಳುವಲ್ಲಿ ವಿಫ‌ಲರಾಗಿದ್ದಾರೆ. ಇದೀಗ ಗುರುವಾರ ಹೈಕೋರ್ಟ್‌ ತರಾಟೆ ನಂತರ ಶುಕ್ರವಾರ ಕಂದಾಯ ವಿಭಾಗದ ಅಧಿಕಾರಿಗಳು ಸರಣಿ ಸಭೆ ನಡೆಸಿ, ವಲಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಮುಂದಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳ ಕಾರ್ಯ ಹಂಚಿಕೆ ಕುರಿತಂತೆ ಆದೇಶಿಸಲಾಗುತ್ತಿದೆ.

ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ವಲಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ದಂಡ ವಿಧಿಸಲು, ಪ್ರಕರಣ ದಾಖಲಿಸಲು ವಿಫ‌ಲರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. -ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ್ತ

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next