Advertisement

ಲೋಕಲ್‌ ರೈಲುಗಳಲ್ಲಿ ಫ್ಲೆಕ್ಸಿ ಫೇರ್‌? : ಲೋಕಲ್‌ ರೈಲುಗಳಲ್ಲಿ ಫ್ಲೆಕ್ಸಿ ಫೇರ್‌?

09:59 AM Aug 03, 2019 | Team Udayavani |

ಮುಂಬಯಿ: ಉಪನಗರ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಜೇಬುಗಳು ಮುಂಬರುವ ದಿನಗಳಲ್ಲಿ ಹೆಚ್ಚು ಭಾರವಾಗಲಿವೆ. ಎಂ.ಆರ್‌.ವಿ.ಸಿ.ಯ ಯೋಜನೆಯ ಪ್ರಕಾರ ಎಲ್ಲವೂ ಉತ್ತಮವಾಗಿ ನಡೆದರೆ, ಜನಸಂದಣಿಯ ಸಮಯದಲ್ಲಿ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಮಾನ ಮತ್ತು ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಮಾದರಿಯಂತೆ ಫ್ಲೆಕ್ಸಿ ಶುಲ್ಕದ ಹೊರೆ ಬೀಳುವ ಸಾಧ್ಯತೆಯಿದೆ.

Advertisement

ಮುಂಬಯಿ ರೈಲ್‌ ವಿಕಾಸ್‌ ಕಾರ್ಪೊರೇಶನ್‌ (ಎಂ.ಆರ್‌.ವಿ.ಸಿ.) ರೈಲ್ವೇ ಮಂಡಳಿಗೆ ಕಳುಹಿಸಿರುವ ವನ್‌ ನೇಶನ್‌ ವನ್‌ ಕಾರ್ಡ್‌ (ಏಕೀಕೃತ ಟಿಕೆಟಿಂಗ್‌ ವ್ಯವಸ್ಥೆ) ಯೋಜನೆಯ ಕರಡು ಪ್ರತಿಯಲ್ಲಿ ಈ ಸಲಹೆಯನ್ನು ಸೂಚಿಸಲಾಗಿದೆ. ಒಂದೊಮ್ಮೆ ರೈಲ್ವೇ ಸಚಿವಾಲಯವು ಇದಕ್ಕೆ ತನ್ನ ಅನುಮೋದನೆಯನ್ನು ನೀಡಿದರೆ, ಜನಸಂದಣಿಯ ಸಮಯದಲ್ಲಿ ದುಬಾರಿ ಶುಲ್ಕದ ಟಿಕೆಟ್‌ನಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಪೀಕ್‌ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ತಿಳಿಸಿದೆ.

ಮಾಹಿತಿಯ ಪ್ರಕಾರ, ಆಡಳಿತವು ಲೋಕಲ್‌ ರೈಲು, ಮೆಟ್ರೋ, ಮೋನೋ ಮುಂತಾದ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಬಳಸುವ ಪ್ರಯಾಣಿಕರಿಗೆ ಒಂದೇ ಟಿಕೆಟ್‌ ವ್ಯವಸ್ಥೆಯನ್ನು ಜಾರಿಗೆ ತರುವ ಯೋಚನೆಯಲ್ಲಿದೆ. ಉಪನಗರ ರೈಲ್ವೇ ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಲಸವನ್ನು ಎಂಆರ್‌ವಿಸಿ ಪರಿಶೀಲಿಸುತ್ತಿದೆ. ಈ ಯೋಜನೆಯ ಕರಡನ್ನು ಇತ್ತೀಚೆಗೆ ರೈಲ್ವೇ ಮಂಡಳಿಗೆ ಕಳುಹಿಸಲಾಗಿದೆ ಎಂದಿದೆ.

ಕಾಗದ ಬಳಕೆಗೆ ಕಡಿತ
ಪ್ರಸ್ತುತ ಮುಂಬಯಿ ಉಪನಗರ ರೈಲ್ವೇ ಮಾರ್ಗದ ಮೂಲಕ ಪ್ರತಿದಿನ 80 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಈ ಪ್ರಯಾಣಿಕರಲ್ಲಿ 20ರಿಂದ 22 ಲಕ್ಷ ಜನರು ಏಕಮುಖಿ ಪ್ರಯಾಣ ಮಾಡುತ್ತಾರೆ. ಏಕೀಕೃತ ಟಿಕೆಟ್‌ ವ್ಯವಸ್ಥೆಯನ್ನು ಜಾರಿಗೊಳಿಸಿದ ಅನಂತರ ಲಭ್ಯವಾಗಲಿರುವ ಸ್ಮಾರ್ಟ್‌ ಕಾರ್ಡ್‌ ಅನ್ನು ಇಂತಹ ಪ್ರಯಾಣಿಕರು ಕೂಡ ಬಳಸುತ್ತಾರೆ ಎಂದು ನಂಬಲಾಗಿದೆ. ಈ ವ್ಯವಸ್ಥೆಯು ಟಿಕೆಟಿಂಗ್‌ಗಾಗಿ ಮಾಡಲಾಗುವ ಕಾಗದದ ವೆಚ್ಚವನ್ನು ಕೂಡ ಕಡಿಮೆ ಮಾಡುತ್ತದೆ.

ನಷ್ಟಕ್ಕೆ ಪರಿಹಾರ
ಮಧ್ಯ ಮತ್ತು ಪಶ್ಚಿಮ ರೈಲ್ವೇಯಲ್ಲಿ ಏಕೀಕೃತ ಟಿಕೆಟಿಂಗ್‌ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಅನಂತರ ಪ್ರಯಾಣಿಕರ ದಟ್ಟಣೆಯ ಸಮಯದಲ್ಲಿ ಫ್ಲೆಕ್ಸಿ ಫೇರ್‌ ವ್ಯವಸ್ಥೆಯ ಅನುಷ್ಠಾನವನ್ನು ಪರಿಗಣಿಸಲಾಗುವುದು ಎಂದು ಎಂಆರ್‌ವಿಸಿ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೇ ದರ ಸೂತ್ರದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುವುದು.

Advertisement

ಮುಂಬಯಿಯ ಉಪನಗರ ರೈಲ್ವೇ ಮಾರ್ಗದಲ್ಲಿ ವಾರ್ಷಿಕವಾಗಿ 1,700 ಕೋಟಿ ರೂ.ಗಳ ನಷ್ಟ ಉಂಟಾಗುತ್ತಿತ್ತು. ಕಳೆದ ಕೆಲವು ವರ್ಷಗಳಲ್ಲಿ ಈ ನಷ್ಟವು ಸಾವಿರಾರು ಕೋಟಿ ರೂಪಾಯಿಗಳಾಗಿವೆ. ರೈಲ್ವೇಗೆ ಆಗುವ ನಷ್ಟವನ್ನು ಕಡಿಮೆ ಮಾಡುವ ಸಲುವಾಗಿ ರೈಲ್ವೇ ಆಡಳಿತವು ಇಂತಹ ಯೋಜನೆಗಳನ್ನು ಜಾರಿಗೆ ತರುವ ಸಿದ್ಧತೆಯಲ್ಲಿ ನಿರತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next