Advertisement

ಪ್ರತಿ ತಿಂಗಳು ಇಂತಿಷ್ಟು ಫ್ಲೆಕ್ಸ್‌ ತೆರವು ಗುರಿ

01:25 PM Nov 08, 2022 | Team Udayavani |

ಬೆಂಗಳೂರು: ನಗರವನ್ನು ಫ್ಲೆಕ್ಸ್‌ ಮತ್ತು ಬ್ಯಾನರ್‌ ಮುಕ್ತವಾಗಿಸಲು ಕಂದಾಯ ಅಧಿಕಾರಿಗಳಿಗೆ ಫ್ಲೆಕ್ಸ್‌ ತೆರವು ಮತ್ತು ಫ್ಲೆಕ್ಸ್‌ ಅಳವಡಿಸುವವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವಂತೆ ಮಾಸಿಕ ಗುರಿ ನೀಡಲಾಗುತ್ತಿದೆ.

Advertisement

ಹೈಕೋರ್ಟ್‌ ಸೂಚನೆ ನೀಡಿದರೂ ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳ ಹಾವಳಿ ನಿಂತಿಲ್ಲ. ಈ ಬಗ್ಗೆ ಕೋರ್ಟ್‌ ಕಾಲಕಾಲಕ್ಕೆ ವಿಚಾರಣೆ ನಡೆಸುತ್ತಿದೆ. ಹೀಗಾಗಿ, ಬಿಬಿಎಂಪಿ ಕಾಯ್ದೆ 2020, ಬಿಬಿಎಂಪಿ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಉಪ ವಿಧಿಗಳು 2018 ಹಾಗೂ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ) ತಡೆ ಕಾಯ್ದೆ 1981 ಅನುಸಾರ ಕ್ರಮ ಕೈಗೊಳ್ಳಬೇಕು. ಆದರೆ, ಬಿಬಿಎಂಪಿಯ ಕಂದಾಯ ಮೌಲ್ಯಮಾಪಕರು, ನಿರೀಕ್ಷಕರು ಸೇರಿ ಇನ್ನಿತರ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳ ಅಳವಡಿಕೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಇನ್ನು ಮುಂದೆ ಫ್ಲೆಕ್ಸ್‌ ತೆರವು, ದೂರು ದಾಖಲಿನ ಕುರಿತಂತೆ ಮಾಸಿಕ ಗುರಿ ನೀಡಲಾಗುತ್ತಿದೆ. ಒಂದು ವೇಳೆ ಅದನ್ನು ಉಲ್ಲಂ ಸಿದರೆ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕ್ರಮ ಎದುರಿಸಬೇಕಿದೆ.

ಜವಾಬ್ದಾರಿ ನಿರ್ವಹಿಸದ ಅಧಿಕಾರಿಗಳು: ಫ್ಲೆಕ್ಸ್‌, ಬ್ಯಾನರ್‌ಗಳ ಅಳವಡಿಕೆ ತಡೆ ಕುರಿತಂತೆ ಬಿಬಿಎಂಪಿ ಈ ಹಿಂದೆ ವಾರ್ಡ್‌ನ ಕಂದಾಯ ಮೌಲ್ಯ ಮಾಪಕರು/ ನಿರೀಕ್ಷಕರು, ವಾರ್ಡ್‌ ಮಾರ್ಷಲ್‌, ಸಹಾಯಕ/ ಕಿರಿಯ ಎಂಜಿನಿಯರ್‌ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿತ್ತು. ಅದರಲ್ಲಿ ಕಂದಾಯ ಮೌಲ್ಯ ಮಾಪಕರು/ನಿರೀಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿ ತಮ್ಮ ವಾರ್ಡ್‌ನಲ್ಲಿ ಅನಧಿಕೃತ ಫ್ಲೆಕ್ಸ, ಬ್ಯಾನರ್‌ ಪ್ರದರ್ಶನ ತಡೆಯಬೇಕು. ಈ ಕುರಿತು ಸರ್ವೆ, ತಪಾಸಣೆ ನಡೆಸಬೇಕು. ಈ ವೇಳೆ ಅನಧಿಕೃತ ಜಾಹೀರಾತು ಕಂಡುಬಂದರೆ ತೆರವು ಮಾಡಬೇಕು. ಅಳವಡಿಕೆ ಮಾಡಿದವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಬೇಕು, ದಂಡ ವಿಧಿಸಿ, ತೆರವುಗೊಳಿಸಿದ ವೆಚ್ಚ ವಸೂಲಿ ಮಾಡಬೇಕು ಎಂದು ತಿಳಿಸಲಾಗಿತ್ತು. ಆದರೆ ಈ ಯಾವ ಕೆಲಸವನ್ನೂ ಪರಿಣಾಮಕಾರಿಯಾಗಿ ಮಾಡಿಲ್ಲ. ಪ್ರಮುಖವಾಗಿ ಫ್ಲೆಕ್ಸ್‌ ಅಳವಡಿಸುವವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸುವ ವಿಚಾರದಲ್ಲಿ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಅದರ ಪರಿಣಾಮ ಈವರೆಗೆ ನಗರದ ವಿವಿಧ ಠಾಣೆಗಳಲ್ಲಿ 100ಕ್ಕೂ ಕಡಿಮೆ ದೂರು ದಾಖಲಾಗಿದೆ. ಆದರೆ, ನಗರದಲ್ಲಿ ದಿನದಿಂದ ದಿನಕ್ಕೆ ಫ್ಲೆಕ್ಸ್‌ಗಳ ಸಂಖ್ಯೆ ಹೆಚ್ಚುತ್ತಲ್ಲೇಯಿದೆ. ಅದರಲ್ಲೂ ರಾಜಕಾರಣಿಗಳಿಗೆ ಶುಭ ಕೋರುವುದು ಸೇರಿ, ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಸಂಬಂಧಿಸಿದ ಫ್ಲೆಕ್ಸಗಳು ಹೆಚ್ಚಾಗಿ ಕಾಣಿಸುತ್ತಿವೆ.

ಮಾಸಿಕ ಗುರಿ ನಿಗದಿ: ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ತಡೆಗೆ ಜವಾಬ್ದಾರಿ ನಿಗದಿ ಮಾಡಿದರೂ ಸಮರ್ಪಕವಾಗಿ ಕೆಲಸ ಮಾಡದ ಆರ್‌ಒ, ಎಆರ್‌ಒಗಳ ಕಾರ್ಯ ವೈಖರಿ ಬಗ್ಗೆ ಹಿರಿಯ ಅಧಿಕಾರಿಗಳು ಅಸಮಾ ಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿಯೇ ಪ್ರತಿಯೊಬ್ಬ ಆರ್‌ಒ, ಎಆರ್‌ಒ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ಅಳವಡಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಜತೆಗೆ ಪ್ರತಿ ತಿಂಗಳು ಇಂತಿಷ್ಟು ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ತೆರವು ಮಾಡಬೇಕು ಎಂದು ಸೂಚಿಸಲಾಗುತ್ತಿದೆ.

ಅದರ ಜತೆಗೆ ಫ್ಲೆಕ್ಸ್‌ ಮತ್ತು ಬ್ಯಾನರ್‌ನಲ್ಲಿ ಹೆಸರಿರುವವರ ವಿರುದ್ಧ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡುವ ಕುರಿತಂತೆಯೂ ಗುರಿ ನಿಗದಿ ಮಾಡಲಾಗುತ್ತಿದೆ. ಪ್ರತಿ ತಿಂಗಳು ಈ ಗುರಿ ಸಡಿಲಿಕೆಯಾಗಲಿದ್ದು, ನಿರ್ದಿಷ್ಟ ಅವಧಿಯೊಳಗೆ ತಮ್ಮ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳು ಇರದಂತೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗುತ್ತಿದೆ. ಒಂದು ವೇಳೆ ಆದೇಶ ಪಾಲಿಸದಿದ್ದರೆ ಅಂತಹ ಆರ್‌ಒ ಮತ್ತು ಎಆರ್‌ಒಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಸೂಚಿಸಲಾಗುತ್ತದೆ. ಈ ಬಗ್ಗೆ ಮುಖ್ಯ ಆಯುಕ್ತರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲಿ ಅಧಿಕೃತ ಆದೇಶ ಹೊರಡಿಸಲಿದ್ದಾರೆ.

Advertisement

ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ಅಳವಡಿಕೆ ತಡೆಗೆ ಆರ್‌ಒ ಮತ್ತು ಎಆರ್‌ಒಗಳಿಗೆ ಅಧಿಕಾರ ನೀಡಲಾ ಗಿದೆ. ಆದರೂ, ಅವರು ಸಮರ್ಪಕವಾಗಿ ಕೆಲಸ ಮಾಡು ತ್ತಿಲ್ಲ. ಹೀಗಾಗಿ ಫ್ಲೆಕ್ಸ್‌, ಬ್ಯಾನರ್‌ ತೆರವು ಮತ್ತು ಫ್ಲೆಕ್ಸ್, ಬ್ಯಾನ ರ್‌ಗಳಲ್ಲಿ ಹೆಸರಿರುವವರ ವಿರುದ್ಧ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡುವ ಕುರಿತು ಗುರಿ ನಿಗದಿ ಮಾಡಲಾಗುತ್ತಿದೆ. ಆ ಮೂಲಕ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. – ತುಷಾರ್‌ ಗಿರಿನಾಥ್‌, ಬಿಬಿ ಎಂಪಿ ಮುಖ್ಯ ಆಯುಕ್ತ ‌

 

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next