ಸಾಗರ : ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸರ್ಕಾರಿ ಕಚೇರಿಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ನೆರವೇರಿಸುವ ಕಡ್ಡಾಯ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ. ಆದರೆ ಪೇಟೆ ಇರಲಿ, ಹಳ್ಳಿಗಳಿರಲಿ ಮನೆಯವರು ಕುಟುಂಬದ ಹಬ್ಬದಂತೆ ಧ್ವಜಾರೋಹಣ ಮಾಡುವುದು ತೀರಾ ಅಪರೂಪ. ಅದೇ ರೀತಿ ಸ್ವಾತಂತ್ರ್ಯ ಮಧ್ಯರಾತ್ರಿ 12ಕ್ಕೆ ಬಂದರೂ ಮರುದಿನ ಬೆಳಗಾದ ಮೇಲೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದು ಸಾಮಾನ್ಯ. ಈ ಎರಡೂ ಚಟುವಟಿಕೆಗಳಿಗೆ ಭಿನ್ನವಾಗಿ ಗ್ರಾಮೀಣ ಭಾಗದ ಮನೆಯೊಂದರಲ್ಲಿ ಮಧ್ಯರಾತ್ರಿಯೇ ಸ್ವಾತಂತ್ರ್ಯೋತ್ಸವ ಆಚರಿಸುವ ಹಾಗೂ ರಾಷ್ಟ್ರೀಯ ಹಬ್ಬದ ದಿನ ಮನೆಯಲ್ಲಿಯೂ ಧ್ವಜಾರೋಹಣ ಮಾಡುವ ವಿಶಿಷ್ಟ ಸಂಪ್ರದಾಯಗಳೆರಡೂ ಸಾಗರ ತಾಲೂಕಿನಲ್ಲಿ ನಡೆಯುತ್ತದೆ.
ತಾಲೂಕಿನ ಬೆಳೆಯೂರಿನ ಮನೆಯೊಂದರಲ್ಲಿ ಕುಟುಂಬದವರೆಲ್ಲಾ ಸೇರಿ ಕಳೆದ 47 ವರ್ಷಗಳಿಂದ ಧ್ವಜಾರೋಹಣ ಮಾಡುವ ಮೂಲಕ ದೇಶಾಭಿಮಾನ ಮೆರೆಯುತ್ತಿದ್ದಾರೆ. ಬೆಳೆಯೂರಿನ ರಂಗಭೂಮಿ ಕಲಾವಿದ ದೇವೇಂದ್ರ ಬೆಳೆಯೂರು ತಮ್ಮ ಮನೆಯಲ್ಲಿ, ನೆರೆಹೊರೆಯವರನ್ನೆಲ್ಲ ಸೇರಿಸಿಕೊಂಡು ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಪದ್ಧತಿ ಮಾಡಿಕೊಂಡಿದ್ದಾರೆ.
ಮನೆಯ ಎದುರಿನ ಅಂಗಳದಲ್ಲಿ ಧ್ವಜಾರೋಹಣ, ಮಧ್ಯಾಹ್ನದ ಭೋಜನದಲ್ಲಿ ವಿಶೇಷ ಸಿಹಿ ಅಡುಗೆ ಮುಂತಾದವುಗಳ ಮೂಲಕ ದೇವೇಂದ್ರ ಅವರ ಮನೆಯಲ್ಲಿ ಅಕ್ಷರಶಃ ಮಂಗಳವಾರ ಸ್ವಾತಂತ್ರ್ಯದ ಹಬ್ಬದ ಆಚರಣೆ ನಡೆಯುತ್ತದೆ. ಮಡದಿ, ಮಕ್ಕಳು, ಮೊಮ್ಮಕ್ಕಳು, ಗ್ರಾಮಸ್ಥರು ಸೇರಿ ಸಂಭ್ರಮಾಚರಣೆಯ ಮೆರಗು ಹೆಚ್ಚಿಸುತ್ತಾರೆ. ಒಟ್ಟಾಗಿ ಸೇರಿ ರಾಷ್ಟ್ರಗೀತೆ ಹಾಡುತ್ತಾರೆ.
ಈ ಬಾರಿ ಬುಧವಾರ ಗಣರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣದ ಸಂದರ್ಭದಲ್ಲಿ ದೇವೇಂದ್ರ, ಸತೀಶ್ ಹೆಗಡೆ, ಗೌತಮಿ, ಅವನಿ, ತಿಮ್ಮಪ್ಪ ಭಾಗವತ್, ಜ್ಯೋತಿ, ಇಂದಿರಾ ಭಾಗವಹಿಸಿದ್ದರು.
ಧ್ವಜಾರೋಹಣ ಕೇವಲ ಸರ್ಕಾರಿ ಕಾರ‍್ಯಕ್ರಮ ಆಗಬಾರದು. ಸ್ವಯಂಸ್ಫೂರ್ತಿಯಿಂದ ಪ್ರತಿಯೊಬ್ಬರೂ ಮನೆಗಳಲ್ಲಿ ಹಬ್ಬದಂತೆ ಧ್ವಜಾರೋಹಣ ಆಚರಿಸಬೇಕು. ಧ್ವಜವಂದನೆಯ ಹಿಂದಿನ ಭಾವುಕತೆ, ತ್ಯಾಗ, ಬಲಿದಾನ ಹಾಗೂ ಮುಖ್ಯವಾಗಿ ನಮ್ಮ ಕರ್ತವ್ಯಗಳ ಪ್ರಜ್ಞೆ ಬೆಳೆಯಬೇಕು ಎಂದು ದೇವೇಂದ್ರ ಯಾವತ್ತೂ ಹೇಳುತ್ತಾರೆ.