ಬೆಂಗಳೂರು: ದೇಶಾದ್ಯಂತ ನಡೆದ ಜನರ ಅಹಿಂಸಾತ್ಮಕ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಭಾರತವು ಸ್ವಾತಂತ್ರ್ಯ ಪಡೆದಿದೆ. ಅಂಥ ಹಿರಿಯರ ಸ್ಮರಣೆ ಅನಿವಾರ್ಯ. ಜಗತ್ತಿನ ಸರ್ವಮಾನ್ಯ- ಶ್ರೇಷ್ಠ ದೇಶ ನಮ್ಮದಾಗಬೇಕು. ವಿಶ್ವಕ್ಕೇ ಮಾರ್ಗದರ್ಶನ ನೀಡುವ ಜಗದ್ವಂದ್ಯ ಭಾರತದ ಎಲ್ಲ ಮಹನೀಯರ ಕನಸು ನನಸು ಮಾಡಲು ನಾವು ಪ್ರಯತ್ನ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ನಳಿನ್‍ಕುಮಾರ್ ಕಟೀಲ್ ಹೇಳಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಿಂದೆ ಭಾರತವನ್ನು ಭಿಕ್ಷುಕರ ರಾಷ್ಟ್ರ, ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು. ಕಳೆದ ಏಳು ವರ್ಷಗಳ ನರೇಂದ್ರ ಮೋದಿ ಅವರ ಆಡಳಿತದ ಪರಿಣಾಮವಾಗಿ ಭಾರತವು ಜಗದ್ವಂದ್ಯ ರಾಷ್ಟ್ರವಾಗುವತ್ತ ಮುನ್ನಡೆದಿದೆ ಎಂದರು.
ರೈತರನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ಸರಕಾರವು ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಬಿಮಾ ಯೋಜನೆಗಳನ್ನು ಜಾರಿಗೊಳಿಸಿದೆ. ಈಚೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಸುಮಾರು 51 ಲಕ್ಷಕ್ಕೂ ಹೆಚ್ಚು ರೈತರಿಗೆ 1,023 ಕೋಟಿ ರೂಪಾಯಿ ನೆರವು ಲಭಿಸಿದೆ ಎಂದು ತಿಳಿಸಿದರು.
ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಸ್ವಾತಂತ್ರ್ಯದ ನೂರನೇ ವರ್ಷಾಚರಣೆ ಸಂದರ್ಭದಲ್ಲಿ ಜಗತ್ತಿನ ನಂಬರ್ ವನ್ ರಾಷ್ಟ್ರವಾಗಿ ಭಾರತ ಇರಬೇಕೆಂಬ ಪ್ರಧಾನಿಯವರ ಕನಸನ್ನು ಸಾಕಾರಗೊಳಿಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಆಶಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಸಿದ್ದರಾಜು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ರಾಜ್ಯ ಅಧ್ಯಕ್ಷರು, ಪಕ್ಷದ ಹಲವು ಮುಖಂಡರು ಭಾಗವಹಿಸಿದ್ದರು.