ಕೀರ್ತಿ ಗಣೇಶ್,
ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ
“ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ’ದಿಂದ ಈಗಾಗಲೇ 5 ಲಕ್ಷ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದು ನಮ್ಮ ಬೇಡಿಕೆಗಳ ಬಗ್ಗೆ ವರದಿ ಸಿದ್ಧಪಡಿಸಿಕೊಂಡಿದ್ದೇವೆ. ರಾಜ್ಯದ ಗ್ರಾಮೀಣ ಭಾಗದಲ್ಲಿನ ಬಸ್ ಸೌಕರ್ಯವನ್ನು ಗಟ್ಟಿ ಪಡಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ ಬಸ್‌ಗಳ ತೀವ್ರ ಕೊರತೆಯಿದ್ದು ರಾಜ್ಯದ ಗ್ರಾಮೀಣ ಬಸ್ ವ್ಯವಸ್ಥೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಎಷ್ಟೋ ಸಂದರ್ಭದಲ್ಲಿ ಬಸ್ಸೇ ಬರದೇ ವಿದ್ಯಾರ್ಥಿಗಳಿಗೆ ತರಗತಿ ಮಿಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬಸ್ ಸೌಕರ್ಯ ಸರಿಪಡಿಸಲು ಮುಂದಿನ ಸರಕಾರ ಆದ್ಯತೆ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ.
ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ಉಚಿತ ಬಸ್ ಪಾಸ್ ನೀಡಿದರೆ ವಿದ್ಯಾರ್ಥಿಗಳಿಗೆ ಅಷ್ಟರ ಮಟ್ಟಿಗೆ ಹಣ ಉಳಿತಾಯ ಆಗಲಿದೆ.
ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಕಲ್ಪಿಸಬೇಕು ಎಂಬುದು ನಮ್ಮ ಇನ್ನೊಂದು ಮಹತ್ವದ ಒತ್ತಾಯವಿದೆ. ಕೋವಿಡ್‌ನಿಂದಾಗಿ ಅನೇಕ ವಿದ್ಯಾರ್ಥಿಗಳ ಪೋಷಕರು ಉದ್ಯೋಗ ಕಳೆದುಕೊಂಡಿದ್ದಾರೆ. ಒಟ್ಟಾರೆ ಸಮಾಜದಲ್ಲಿ ಆರ್ಥಿಕ ಸಂಕಷ್ಟದ ಸ್ಥಿತಿಯಿದೆ. ಇದರ ಜೊತೆಗೆ ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿ ನಿಧಿಗಳ ಹಣ ಸರಿಯಾಗಿ ಬಿಡುಗಡೆ ಆಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಅವರ ಶಾಲಾ ಕಾಲೇಜಿನ ಶುಲ್ಕ ಕಟ್ಟಲು ಸಹಾಯವಾಗುವಂತೆ ಕ್ರೆಡಿಟ್ ಕಾರ್ಡ್ ನೀಡಬೇಕು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದು ಮಾಡಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಎನ್‌ಇಪಿ ರದ್ದು ಮಾಡಬೇ ಕು.