Advertisement

ಹಳ್ಳಿಗೂ ಅಭಿವೃದ್ಧಿ ಯೋಜನೆ; ಸಮಗ್ರ ಪ್ರಗತಿಗೆ ಪಂಚವಾರ್ಷಿಕ ಯೋಜನೆ

12:59 AM Sep 05, 2022 | Team Udayavani |

ಬೆಂಗಳೂರು: ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ಇನ್ನು ಮುಂದೆ “ಪಂಚವಾರ್ಷಿಕ’ ದೂರದೃಷ್ಟಿ ಯೋಜನೆ ಜಾರಿಗೆ ಬರಲಿದೆ. ಅಭಿವೃದ್ಧಿ ಮತ್ತು ಆಡಳಿತಕ್ಕೆ ದೂರಗಾಮಿ ಚೌಕಟ್ಟು ನೀಡುವುದೇ ಇದರ ಮುಖ್ಯ ಗುರಿ.

Advertisement

ಗ್ರಾಮ ಪಂಚಾಯತ್‌ಗಳು ಏಕಕಾಲಕ್ಕೆ ಒಂದು ವರ್ಷದ ಕ್ರಿಯಾ ಯೋಜನೆ ರೂಪಿಸುವ ವ್ಯವಸ್ಥೆ ಇದೆ. ಆದರೆ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ದೂರದರ್ಶಿತ್ವ ನೀಡಲು ಇದೇ ಮೊದಲ ಬಾರಿಗೆ 5 ವರ್ಷಗಳ “ಗ್ರಾಮ ಪಂಚಾಯತ್‌ ದೂರದೃಷ್ಟಿ ಯೋಜನೆ’ ರೂಪಿಸಲಾಗುತ್ತಿದೆ.

ಗ್ರಾ.ಪಂ.ಗಳು ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು ಮತ್ತು ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ ಸುರಕ್ಷಿತವಲ್ಲದ ಹಾಗೂ ದುರ್ಬಲ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಜನರ ಸಮಸ್ಯೆಗಳು ಮತ್ತು ಅಗತ್ಯಗಳ ಆಧಾರದಲ್ಲಿ ಕೆಳಹಂತದ ಯೋಜನೆಗಳನ್ನು ಸಿದ್ಧಪಡಿಸಬೇಕಾಗಿರುತ್ತದೆ. ಪ್ರತೀ ಗ್ರಾ.ಪಂ. ಐದು ವರ್ಷಗಳ ದೂರದೃಷ್ಟಿ ಯೋಜನೆಯಿಂದ ಪ್ರತೀ ವರ್ಷದ ವಾರ್ಷಿಕ ಯೋಜನೆ ರೂಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಅದರಂತೆ 2022ರ ನವೆಂಬರ್‌ ಅಂತ್ಯದೊಳಗೆ ಎಲ್ಲ ಗ್ರಾ.ಪಂ.ಗಳು ದೂರದೃಷ್ಟಿ ಯೋಜನೆ ರೂಪಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿದೆ. “ಸುಸ್ಥಿರ ಅಭಿವೃದ್ಧಿ ಗುರಿಗಳು: 2030’ರ ಭಾಗವಾಗಿ 17 ಗುರಿಗಳನ್ನು ಸಾಧಿಸಬೇಕಾಗಿರುತ್ತದೆ.

ಏನಿದು ದೂರದೃಷ್ಟಿ ಯೋಜನೆ?
ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 309-ಬಿ ಅನ್ವಯ ಎಲ್ಲ ಗ್ರಾ.ಪಂ.ಗಳು ಹೊಸದಾಗಿ ರಚನೆಯಾದ ಬಳಿಕ ಮುಂದಿನ 5 ವರ್ಷಗಳಿಗೆ ದೂರದೃಷ್ಟಿ ಯೋಜನೆ ಸಿದ್ಧಪಡಿಸಬೇಕಿದೆ. ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಗಮನದಲ್ಲಿ ಇರಿಸಿಕೊಂಡು ಮುಂದಿನ ದಿನಗಳಲ್ಲಿ ಸಾಧಿಸಬೇಕಾಗಿರುವ ಗುರಿಗಳನ್ನು ನಿಗದಿಪಡಿಸಿ, ಅವುಗಳನ್ನು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಕಾರ್ಯರೂಪಕ್ಕೆ ತರುವ ಕಾರ್ಯತಂತ್ರವೇ “ದೂರದೃಷ್ಟಿ ಯೋಜನೆ’. ನಾವು ಎಲ್ಲಿದ್ದೇವೆ, ಎಲ್ಲಿಗೆ ಹೋಗಬೇಕು, ಹೇಗೆ ಹೋಗಬೇಕು ಎಂಬ ಈ ಮೂರು ಪ್ರಶ್ನೆಗಳಿಗೆ ಉತ್ತರ ನೀಡುವುದೇ ದೂರದೃಷ್ಟಿ ಯೋಜನೆ.

ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲ, ಬಡತನ ಮುಕ್ತ, ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸುರಕ್ಷೆಯುಳ್ಳ ಗ್ರಾಮ, ಮೂಲಸೌಕರ್ಯ ಸ್ವಾವಲಂಬಿ ಗ್ರಾಮ, ಉತ್ತಮ ಆಡಳಿತ ಈ ವಲಯಗಳಿಗೆ ಸಂಬಂಧಿಸಿ 5 ವರ್ಷಗಳ ಯೋಜನೆ ರೂಪಿಸಬೇಕು. ಶೀಘ್ರ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಹಂತಗಳಲ್ಲಿ ಅಭಿವೃದ್ಧಿ ಗುರಿಗಳನ್ನು ಸಾಧಿಸಬೇಕು.

Advertisement

ಯೋಜನೆಯ ತಯಾರಿ ಹೇಗೆ?
ಗ್ರಾಮದಲ್ಲಿ ವಾಸವಿರುವ ಬಡವರು, ಮಹಿಳೆಯರು, ಮಕ್ಕಳು, ವೃದ್ಧರು, ವಿಕಲಚೇತನರು ಮುಂತಾದ ಸಾಮಾಜಿಕ ದುರ್ಬಲ ವರ್ಗಗಳನ್ನು ಒಳಗೊಂಡಂತೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಗ್ರಾ.ಪಂ. ಹಂತದ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದೊಂದಿಗೆ ದೂರದೃಷ್ಟಿ ಯೋಜನೆ ತಯಾರಿಸಬೇಕು. ಗ್ರಾಮ ಯೋಜನಾ ಸಮಿತಿ, ಗ್ರಾ.ಪಂ.. ಯೋಜನಾ ಸಮಿತಿ ರಚನೆ, ದತ್ತಾಂಶ ಸಂಗ್ರಹ, ಗುಂಪು ಚರ್ಚೆ, ಸಮೀಕ್ಷೆ, ಜನವಸತಿ ಮತ್ತು ವಾರ್ಡ್‌ ಸಭೆಗಳ ಆಯೋಜನೆ ಮುಂತಾದ ಹಂತಗಳಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತದೆ.

ಪ್ರತೀ ವರ್ಷ ಗ್ರಾ.ಪಂ.ಗಳು ವಾರ್ಷಿಕ ಕ್ರಿಯಾ ಯೋಜನೆ ರೂಪಿಸುತ್ತವೆ. ಕಾಯ್ದೆ ಪ್ರಕಾರ ದೀರ್ಘಾಕಾಲದ ಯೋಜನೆ ರೂಪಿಸಿದರೆ ಗ್ರಾ.ಪಂ.ಗಳು ಸಮಗ್ರ ಅಭಿವೃದ್ಧಿಯ ದೂರದೃಷ್ಟಿ ಹೊಂದಿದಂತಾಗುತ್ತದೆ. ಸರಕಾರವೂ ಪಾಲ್ಗೊಳ್ಳುವಿಕೆ ಪ್ರಕ್ರಿಯೆಯನ್ನು ಬಯಸುತ್ತದೆ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಐದು ವರ್ಷದ ದೂರದೃಷ್ಟಿ ಯೋಜನೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
– ಉಮಾ ಮಹಾದೇವನ್‌, ಅಪರ ಮುಖ್ಯ ಕಾರ್ಯದರ್ಶಿ (ಪಂ.ರಾ.), ಆರ್‌ಡಿಪಿಆರ್‌ ಇಲಾಖೆ


-ರಫೀಕ್‌ ಅಹ್ಮದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next