Advertisement

ಫ್ರೆಂಚ್‌ ಓಪನ್‌ ಟೆನಿಸ್‌: ಮಾರ್ಟಿನಾ ಟ್ರೆವಿಸನ್‌ ಮುನ್ನಡೆ

11:34 PM May 31, 2022 | Team Udayavani |

ಪ್ಯಾರಿಸ್‌: ಇಟೆಲಿಯ ಮಾರ್ಟಿನಾ ಟ್ರೆವಿಸನ್‌ ಕೆನಡದ ಲೇಲಾ ಫೆರ್ನಾಂಡೆಸ್‌ ಅವರನ್ನು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಸೆಮಿಫೈನಲ್‌ ಹಂತಕ್ಕೇರಿದರು.

Advertisement

ವಿಶ್ವದ 59ನೇ ರ್‍ಯಾಂಕಿನ ಟ್ರೆವಿಸನ್‌ 17ನೇ ಶ್ರೇಯಾಂಕದ ಎಡಗೈ ಆಟ ಗಾರ್ತಿ ಫೆರ್ನಾಂಡೆಸ್‌ ಅವರನ್ನು 6-2, 6-7 (3-7), 6-3 ಸೆಟ್‌ಗಳಿಂದ ಉರುಳಿಸಿದರು.

28ರ ಹರೆಯದ ಟ್ರೆವಿಸನ್‌ ಸೆಮಿಫೈನಲ್‌ನಲ್ಲಿ ಅಮೆರಿಕದ ಕೊಕೊ ಗಾಫ್ ಅವರ ಸವಾಲನ್ನು ಎದುರಿಸಲಿದ್ದಾರೆ. ಗಾಫ್ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ತನ್ನ ದೇಶದವರೇ ಆದ ಸ್ಲೋನೆ ಸ್ಟೀಫೆನ್ಸ್‌ ಅವರನ್ನು 7-5, 6-2 ಸೆಟ್‌ಗಳಿಂದ ಕೆಡಹಿದ್ದರು. ನಾಲ್ಕು ವರ್ಷಗಳ ಹಿಂದೆ ಇಲ್ಲಿ ಜೂನಿಯರ್‌ ಚಾಂಪಿಯನ್‌ ಆಗಿದ್ದ ಗಾಫ್ ಇನ್ನೂ ಒಂದೇ ಒಂದು ಸೆಟ್‌ ಕೈಚೆಲ್ಲಲಿಲ್ಲ.

ಸ್ವಿಯಾಟೆಕ್‌ ಮುನ್ನಡೆ
ಚೀನದ ಝೆಂಗ್‌ ಕ್ವಿನ್‌ವೆನ್‌ ಹೊಟ್ಟೆಯ ಸ್ನಾಯು ಸೆಳೆತದಿಂದಾಗಿ ವಿಶ್ವದ ನಂಬರ್‌ ವನ್‌ ಆಟಗಾರ್ತಿ ಇಗಾ ಸ್ವಿಯಾಟೆಕ್‌ ವಿರುದ್ಧ ಸೋಲನ್ನು ಕಂಡರು. ಮೊದಲ ಸೆಟ್‌ ಅನ್ನು ಟೈಬ್ರೇಕರ್‌ ಮೂಲಕ ಗೆದ್ದಿದ್ದ ಕ್ವಿನ್‌ವೆನ್‌ ಆಬಳಿಕ ಪಂದ್ಯದಲ್ಲಿ ಪ್ರಾಬಲ್ಯ ಸ್ಥಾಪಿಸಲು ವಿಫ‌ಲರಾದರು.

6-7 (5), 6-0, 6-2 ಸೆಟ್‌ಗಳಿಂದ ಪಂದ್ಯ ಜಯಿಸಿದ ಸ್ವಿಯಾಟೆಕ್‌ ತನ್ನ ಗೆಲುವಿನ ಓಟವನ್ನು 32 ಪಂದ್ಯಗಳಿಗೆ ವಿಸ್ತರಿಸಿದರು. ಸ್ವಿಯಾಟೆಕ್‌ ಮುಂದಿನ ಪಂದ್ಯದಲ್ಲಿ ಅಮೆರಿಕದ 11ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಅವರನ್ನು ಎದುರಿಸಲಿದ್ದಾರೆ.

Advertisement

ಮಂಗಳವಾರ ತನ್ನ 21ನೇ ಹುಟ್ಟುಹಬ್ಬ ಆಚರಿಸಿದ ಸ್ವಿಯಾಟೆಕ್‌ 2020ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದರು. ಒಂದು ವೇಳೆ ಈ ಬಾರಿ ಪ್ರಶಸ್ತಿ ಗೆದ್ದರೆ ವೀನಸ್‌ ವಿಲಿಯಮ್ಸ್‌ ಅವರ ಹೆಸರಲ್ಲಿದ್ದ ಸತತ ಗೆಲುವಿನ ಸಾಧನೆಯನ್ನು ಅವರು ಹಿಂದಿಕ್ಕಲಿದ್ದಾರೆ. ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯವು ರಷ್ಯಾದ ದಾರಿಯಾ ಮತ್ತು ವೆರೋನಿಕಾ ಕುದೆರ್‌ವೆುಟೋವಾ ಅವರ ನಡುವೆ ನಡೆಯಲಿದೆ. ಹೀಗಾಗಿ ರಷ್ಯಾದ ಆಟಗಾರ್ತಿಯೊಬ್ಬರು ಸೆಮಿಫೈನಲಿ ಗೇರುವುದು ಖಚಿತವಾಗಿದೆ.

ಮೆಡ್ವೆಡೇವ್‌ಗೆ ಆಘಾತ
ವಿಶ್ವದ ಎರಡನೇ ರ್‍ಯಾಂಕಿನ ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ನೇರ ಸೆಟ್‌ಗಳಿಂದ ಸೋತು ಆಘಾತ ಕ್ಕೊಳಗಾಗಿ ದ್ದಾರೆ. ಏಕಮುಖವಾಗಿ ಸಾಗಿದ ಈ ಪಂದ್ಯದಲ್ಲಿ ಕ್ರೊವೇಶಿಯದ ಮರಿನ್‌ ಸಿಲಿಕ್‌ 6-2, 6-3, 6-2 ಸೆಟ್‌ಗಳಿಂದ ಮೆಡ್ವೆಡೇವ್‌ ಅವರ ಓಟಕ್ಕೆ ಬ್ರೇಕ್‌ ಹಾಕಿದರು. 2014ರಲ್ಲಿ ಯುಎಸ್‌ ಚಾಂಪಿಯನ್‌ ಆಗಿದ್ದ ಸಿಲಿಕ್‌ ಇಲ್ಲಿ ನಾಲ್ಕು ವರ್ಷಗಳ ಬಳಿಕ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next