ಬೆಂಗಳೂರು: ಅತಿ ವೇಗವಾಗಿ ಹೋಗುತ್ತಿದ್ದ ಸರ್ಕಾರಿ ಆ್ಯಂಬುಲೆನ್ಸ್, ಪಕ್ಕದಲ್ಲಿದ್ದ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಗುದ್ದಿದ ಪರಿಣಾಮ ಪಶ್ಚಿಮ ಬಂಗಾಳ ಮೂಲದ ಕುಟುಂಬದ ಮೂವರು ಮಹಿಳೆಯರು ಸೇರಿ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಯಲಹಂಕದ ಕೋಗಿಲು ಕ್ರಾಸ್ ಮೇಲ್ಸೇತುವೆಯಲ್ಲಿ ನಡೆದಿದೆ.
ದೀಪಾಂಕರ್ ಡೇ ಕುಟುಂಬ ಸದಸ್ಯರೊಂದಿಗೆ, ದೇವಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಆರ್.ಟಿ.ನಗರದ ಮನೆಗೆ ಬರುತ್ತಿದ್ದರು. ಅದೇ ವೇಳೆ ನಗರದಿಂದ ದೇವನಹಳ್ಳಿ ಕಡೆ ವೇಗವಾಗಿ ಹೋಗುತ್ತಿದ್ದ ಆ್ಯಂಬು ಲೆನ್ಸ್ ಚಾಲಕ ಚನ್ನಬಸಪ್ಪ, ದೀಪಾಂಕರ್ ಡೇ ಕುಟುಂಬವಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಕಾರಿನಲ್ಲಿದ್ದ ಐವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆ್ಯಂಬುಲೆನ್ಸ್ ಚಾಲಕ ಚನ್ನಬಸಪ್ಪ ಸ್ಥಳದಿಂದ ಪರಾರಿಯಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.
ಪಶ್ಚಿಮ ಬಂಗಾಳದಿಂದ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿರುವ ದೀಪಾಂಕರ್ ಡೇ ಮತ್ತು ಕುಟುಂಬ ನಗರದಲ್ಲಿ ಮಲ್ಟಿಮೀಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಸ್ವಾಗತ ಚೌಧರಿ ಜೈನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ದಂಪತಿ ಪುತ್ರ ಧ್ರುವ ಡೇ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಚೆನ್ನೈನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಜಯ ಕೆಲ ದಿನಗಳ ಹಿಂದಷ್ಟೇ ತಾಯಿ ಜಯತಿ ಅವರೊಂದಿಗೆ ಸಹೋದರಿಯ ಮನೆಗೆ ಬಂದಿದ್ದರು ಎಂದು ಸಂಚಾರ ಪೊಲೀಸರು ಹೇಳಿದರು.
ಓವರ್ ಟೇಕ್ ಭರದಲ್ಲಿ ಡಿಕ್ಕಿ: 12.30ರ ಸುಮಾರಿಗೆ ನಗರದಿಂದ ದೇವನಹಳ್ಳಿ ಕಡೆಗೆ ಅತಿ ವೇಗವಾಗಿ ಹೋಗುತ್ತಿದ್ದ ಆ್ಯಂಬುಲೆನ್ಸ್ ಚಾಲಕ ಚನ್ನಬಸಪ್ಪ, ಕೋಗಿಲು ಕ್ರಾಸ್ ಮೇಲ್ಸೇತುವೆಯಲ್ಲಿ ಎದುರಿಗೆ ಹೋಗುತ್ತಿದ್ದ ಲಾರಿ ಮತ್ತು ಕಾರನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಗುದ್ದಿದ್ದಾನೆ, ನಂತರ ಪಕ್ಕದ ರಸ್ತೆಯಲ್ಲಿ ಏರ್‌ಪೋರ್ಟ್‌ನಿಂದ ಆರ್.ಟಿ.ನಗರ ದ ಕಡೆಗೆ ಬರುತ್ತಿದ್ದ ದೀಪಾಂಕರ್ ಡೇ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ಹೇಳಿದರು.
Advertisement
ಪಶ್ಚಿಮ ಬಂಗಾಳ ಮೂಲದ ದೀಪಾಂಕರ್ ಡೇ (46), ಅವರ ಪತ್ನಿ ಸ್ವಾಗತ ಚೌಧರಿ (42), ದಂಪತಿ ಪುತ್ರ ಧ್ರುವ ಡೇ (14) ಹಾಗೂ ಸ್ವಾಗತ ಚೌಧರಿ ಸಹೋದರಿ ಸುಜಯ (45), ಅವರ ತಾಯಿ ಜಯತಿ (65) ಮೃತಪಟ್ಟವರು.
Related Articles
Advertisement
ಕಾರು ಸಂಪೂರ್ಣ ಜಖಂ: ಅಪಘಾತದ ತೀವ್ರತೆಗೆ ರಸ್ತೆ ವಿಭಜಕದಿಂದ ಜಿಗಿದ ಆ್ಯಂಬುಲೆನ್ಸ್ ನೇರವಾಗಿ ಕಾರಿನ ಮುಂಭಾಗಕ್ಕೆ ಬಲವಾಗಿ ಹೊಡೆದು ನಡುರಸ್ತೆಗೆ ಬಂದು ನಿಂತಿತ್ತು. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗೊಜ್ಜಾಗಿದ್ದು, ಮತ್ತು ಆ್ಯಂಬುಲೆನ್ಸ್‌ನ ಮುಂಭಾಗ ಜಖಂಗೊಂಡಿದೆ. ಕಾರು ಚಾಲನೆ ಮಾಡುತ್ತಿದ್ದ ದೀಪಾಂಕರ್, ಪಕ್ಕದ ಸೀಟಿನಲ್ಲಿ ಕುಳಿತಿದ್ದ ಧ್ರುವ ಡೇ ಹಾಗೂ ಹಿಂಬದಿ ಕುಳಿತಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದರು.
ಸ್ಥಳೀಯರು ಹಾಗೂ ಸಂಚಾರರ ಪೊಲೀಸರು ಮೂರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಕಾರಿನಲ್ಲೇ ಸಿಲುಕಿಕೊಂಡಿದ್ದ ದೀಪಾಂಕರ್ ಡೇ ಮತ್ತು ಮಹಿಳೆಯೊಬ್ಬರ ಶವವನ್ನು ತೆಗೆದು ಯಲಹಕದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ನಂತರ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಐದು ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು ಎಂದು ಸಂಚಾರ ಪೊಲೀಸರು ಹೇಳಿದರು.