ಸಾಗರ್(ಮಧ್ಯಪ್ರದೇಶ): ಕಿರಿದಾದ ರಸ್ತೆ ನಿರ್ಮಾಣಕ್ಕಾಗಿ ಬೇಕಾಗಿದ್ದ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ನಡೆದ ಜಗಳದಿಂದಾಗಿ ಒಂದೇ ಕುಟುಂಬದ ಐವರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮನೋಜ್ ಅಹಿರ್ವಾರ್ (45ವರ್ಷ) ಮತ್ತು ಸಂಜೀವ್ ಅಹಿರ್ವಾರ್(35) ಇಬ್ಬರು ಸಹೋದರರು ಹಾಗೂ ಕುಟುಂಬದ ಸದಸ್ಯರು ಬಿನಾ ನಗರದಲ್ಲಿನ ಮನೆಯೊಂದರಲ್ಲಿ ವಾಸವಾಗಿದ್ದರು.
ಎರಡು ದಿನಗಳ ಹಿಂದೆ ಮನೋಜ್ ಚಿಕ್ಕಪ್ಪ ಮನೋಹರ್ ಅಹಿರ್ವಾರ್ ಬಂದು ಕಿರಿದಾದ ರಸ್ತೆ ನಿರ್ಮಿಸಲು ಎರಡು ಅಡಿ ಅಗಲದ ಜಾಗ ನೀಡುವಂತೆ ಕೇಳಿದ್ದರು. ಆದರೆ ಸಂಜೀವ್ ಅಹಿರ್ವಾರ್ ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದಾಗಿ ಪೊಲೀಸ್ ಠಾಣಾಧಿಕಾರಿ ಅನಿಲ್ ಮೌರ್ಯ ತಿಳಿಸಿದ್ದಾರೆ.
ಜಗಳ ತಾರಕ್ಕೇರುತ್ತಿದ್ದಂತೆಯೇ ಮನೋಹರ್ ಅಹಿರ್ವಾರ್ ಮತ್ತು ಆತನ ಇಬ್ಬರ ಮಕ್ಕಳಾದ ಪ್ರವೀಣ್, ಪ್ರಶಾಂತ್ ಏಕಾಏಕಿ ಸಂಜೀವ್ ಹಾಗೂ ಆತನ ಕುಟುಂಬದ ಸದಸ್ಯರ ಮೇಲೆ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದರು.
ಗುಂಡಿನ ದಾಳಿಯಲ್ಲಿ ಮನೋಜ್, ಸಂಜೀವ್, ಆತನ ಪತ್ನಿ ರಾಜ್ ಕುಮಾರಿ(30ವರ್ಷ), ಮಗ ಯಶವಂತ್(12ವರ್ಷ) ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಸಂಜೀವ್ ಚಿಕ್ಕಮ್ಮ ತಾರಾ ಬಾಯಿ(55ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮನೋಹರ್ ಅಹಿರ್ವಾರ್ ನನ್ನು ಬಂಧಿಸಿದ್ದು, ಲೈಸೆನ್ಸ್ ಹೊಂದಿರುವ ಗನ್ ಅನ್ನು ವಶಪಡಿಸಿಕೊಂಡಿದ್ದಾರೆ. ಮನೋಹರ್ ನ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಭಾರತೀಯ ದಂಡ ಸಂಹಿತೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.