“ಕೃಷ್ಣ ಲೀಲಾ’ ಚಿತ್ರದ ಮೂಲಕ ನಾಯಕಿಯಾದ ಮಯೂರಿ ಈಗ ಸಿಕ್ಕಾಪಟ್ಟೆ ಬಿಝಿ. ಕೈ ತುಂಬಾ ಸಿನಿಮಾಗಳನ್ನಿಟ್ಟುಕೊಂಡು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಒಂದು ಲೊಕೇಶನ್‌ನಿಂದ ಮತ್ತೂಂದು ಲೊಕೇಶನ್‌ಗೆ ಓಡಾಡುತ್ತಿದ್ದಾರೆ. ಈ ಮೂಲಕ ಕಿರುತೆರೆಯಿಂದ ಬಂದು ಹಿರಿತೆರೆಯಲ್ಲೂ ಮಯೂರಿ ಮಿಂಚುತ್ತಿದ್ದಾರೆ. ಸದ್ಯ ಮಯೂರಿ ಕೈಯಲ್ಲಿ ಐದು ಸಿನಿಮಾಗಳಿವೆ. “8 ಎಂಎಂ’, “ನನ್ನ ಪ್ರಕಾರ’, “ಆಟಕ್ಕುಂಟು ಲೆಕ್ಕಕ್ಕಿಲ್ಲ’, “ರುಸ್ತುಂ’ ಹಾಗೂ “ಮೌನಂ’ ಚಿತ್ರಗಳು ಮಯೂರಿ ಕೈಯಲ್ಲಿವೆ.
ಕಳೆದ ವರ್ಷ ಮಯೂರಿ ನಟಿಸಿದ ಒಂದೇ ಒಂದು ಸಿನಿಮಾ ಬಿಡುಗಡೆಯಾಗಿತ್ತು. “ಕರಿಯಾ-2′ ಚಿತ್ರ ಬಿಟ್ಟರೆ ಬೇರೆ ಯಾವುದೇ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಆದರೆ, ಈ ವರ್ಷ ಮೂರು ಸಿನಿಮಾಗಳಂತೂ ಬಿಡುಗಡೆಯಾಗಲಿವೆ. “ತುಂಬಾ ಖುಷಿಯಾಗಿದ್ದೇನೆ. ಈ ವರ್ಷಾರಂಭ ಚೆನ್ನಾಗಿಯೇ ಆಗಿದೆ. ಕನ್ನಡದ ಹುಡುಗಿಯಾಗಿ ಬಿಝಿಯಾಗಿರುವ ಖುಷಿ ಇದೆ. ಒಳ್ಳೆಯ ಸಿನಿಮಾಗಳು ಸಿಗುತ್ತಿವೆ. ಈಗಾಗಲೇ “8ಎಂಎಂ’ ಚಿತ್ರೀಕರಣ ಮುಗಿದಿದೆ.
ಸದ್ಯ “ನನ್ನ ಪ್ರಕಾರ’ ಒಂದೆರಡು ದಿನದ ಚಿತ್ರೀಕರಣ ಬಾಕಿ ಇದೆ. “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರೀಕರಣ ಮುಗಿದಿದೆ. “ರುಸ್ತುಂ’ ಹಾಗೂ “ಮೌನಂ’ ಶುರುವಾಗಬೇಕಿದೆ. ಈ ಐದು ಸಿನಿಮಾಗಳ ಪಾತ್ರಗಳು ಕೂಡಾ ಒಂದಕ್ಕಿಂತ ಒಂದು ಭಿನ್ನವಾಗಿವೆ’ ಎಂದು ಖುಷಿಯಿಂದ ಹೇಳುತ್ತಾರೆ ಮಯೂರಿ. ಮಯೂರಿಗೆ ಒಂದು ಖುಷಿ ಇದೆ. ಅದಕ್ಕೆ ಕಾರಣ ಅವರನ್ನು ಹುಡುಕಿಕೊಂಡು ಬರುವ ಪಾತ್ರಗಳು.
ನಟನೆಗೆ ಅವಕಾಶವಿರುವ ಪಾತ್ರಗಳೇ ಮಯೂರಿಗೆ ಸಿಗುತ್ತಿವೆಯಂತೆ. “ಪರ್‌ಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರಗಳಲ್ಲೇ ಹುಡುಕಿಕೊಂಡು ಬರುತ್ತಿವೆ. ನನ್ನ ಬಳಿ ಬರುವ ಬಹುತೇಕ ನಿರ್ದೇಶಕರು, “ನಿಮ್ಮ ಈ ಹಿಂದಿನ ಸಿನಿಮಾ ನೋಡಿಯೇ ನಿಮ್ಮನ್ನು ಆಯ್ಕೆ ಮಾಡಿಕೊಂಡೆವು’ ಎನ್ನುತ್ತಾರೆ. ನಾನು ಕೂಡಾ ಅವಕಾಶಗಳು ಸಿಗುತ್ತಿವೆ ಎಂದು ಎಲ್ಲವನ್ನು ಒಪ್ಪಿಕೊಳ್ಳುತ್ತಿಲ್ಲ. ಕಥೆ ಹಾಗೂ ನನ್ನ ಪಾತ್ರ ಇಷ್ಟವಾದರೆ ಮಾತ್ರ ಒಪ್ಪುತ್ತೇನೆ’ ಎಂದು ತಮ್ಮ ಸಿನಿಮಾ ಆಯ್ಕೆಯ ಬಗ್ಗೆ ಹೇಳುತ್ತಾರೆ.
ನೀವು ಮಯೂರಿಯವರು ನಟಿಸಿರುವ ಹಾಗೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ನೋಡಿದರೆ ಅದರಲ್ಲಿ ಮಯೂರಿ ಜೊತೆಗೆ ಮತ್ತೂಬ್ಬ ನಾಯಕಿ ಕೂಡಾ ಇರುತ್ತಾರೆ. ಸೋಲೋ ಹೀರೋಯಿನ್ ಆಗಿ ಮಯೂರಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಆದರೆ, ಈ ಬಗ್ಗೆ ಮಯೂರಿಗೆ ಯಾವುದೇ ಬೇಸರವಿಲ್ಲ. “ಮೊದಲೇ ಹೇಳಿದಂತೆ ನನಗೆ ಕಥೆ ಹಾಗೂ ನನ್ನ ಪಾತ್ರವಷ್ಟೇ ಮುಖ್ಯ. ನಿರ್ದೇಶಕರಲ್ಲಿ ಕಥೆ ಕೇಳುವಾಗಲೂ ನಾನು ನನ್ನ ಪಾತ್ರವನ್ನಷ್ಟೇ ಕೇಳುತ್ತೇನೆ.
ಮತ್ತೂಬ್ಬ ನಾಯಕಿ ಇದ್ದರೂ, ಅವರ್ಯಾರು, ಅವರ ಪಾತ್ರವೇನು ಎಂಬುದನ್ನು ಕೇಳ್ಳೋಕೆ ಹೋಗುವುದಿಲ್ಲ. ನನಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸೋದಷ್ಟೇ ನನ್ನ ಕೆಲಸ’ ಎನ್ನುವುದು ಮಯೂರಿ ಮಾತು. ಅಂದಹಾಗೆ, ಮಯೂರಿಗೆ ಹಿಂದಿ ಹಾಗೂ ತೆಲುಗು ಧಾರಾವಾಹಿಗಳಿಂದಲೂ ಅವಕಾಶಗಳು ಬರುತ್ತಿವೆಯಂತೆ. ಆದರೆ, ಸದ್ಯ ಕನ್ನಡದಲ್ಲಿ ಒಳ್ಳೆಯ ಅವಕಾಶಗಳಿರುವುದರಿಂದ ಮಯೂರಿ ಬೇರೆ ಕಡೆ ಗಮನಹರಿಸದಿರಲು ಮಯೂರಿ ನಿರ್ಧರಿಸಿದ್ದಾರೆ.