ಕೋಲ್ಕತ : ಪಶ್ಚಿಮ ಬಂಗಾಲಕ್ಕೆ ಇಂದು ಮುಂಗಾರು ಮಳೆ ಭಾರೀ ಬಿರುಸಿನಿಂದ ಅಪ್ಪಳಿಸಿದೆ. ರಾಜ್ಯದಲ್ಲಿಂದು ಸಿಡಿಲಿನಾಘಾತಕ್ಕೆ ಐವರು ಬಲಿಯಾಗಿದ್ದಾರೆ. ಜಡಿಮಳೆಯಿಂದ ಉಂಟಾದ ಪ್ರವಾಹದಲ್ಲಿ ಓರ್ವರು ಮುಳುಗಿ ಮೃತಪಟ್ಟಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ತೀವ್ರವಾಗಿ ಬಾಧಿತವಾಗಿದೆ. ತಗ್ಗು ಪ್ರದೇಶಗಳೆಲ್ಲ ನೀರಲ್ಲಿ ಮುಳುಗಿವೆ. ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ನೈಸರ್ಗಿಕ ಪ್ರಕೋಪ ನಿರ್ವಹಣ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಪುರೂಲಿಯಾ ಜಿಲ್ಲೆಯ ಭೋಮ್ರಗೋರ ಎಂಬ ಗ್ರಾಮದಲ್ಲಿ 7 ವರ್ಷ ಪ್ರಾಯದ ಬಾಲಕ ಮತ್ತು ಉತ್ತರ 24 ಪರಗಣ ಜಿಲ್ಲೆಯ ಬಸೀರ್‌ಹಾತ್ ಎರಡನೇ ಬ್ಲಾಕ್ ಮತ್ತು ಕೌತೇಪಾರಾದಲ್ಲಿ ಇಬ್ಬರು ಸಿಡಿಲಿನಾಘಾತಕ್ಕೆ ಮೃತಪಟ್ಟಿದ್ದಾರೆ.
ಚಾರ್‌ಪಾರಾ ಗ್ರಾಮದ ಬಸಂತಿ ಬ್ಲಾಕ್‌ನಲ್ಲಿ ಓರ್ವ ಮಹಿಳೆ ಮತ್ತು 24 ದಕ್ಷಿಣ ಪರಗಣ ಜಿಲ್ಲೆಯ ಉತ್ತರ ಚಂದನ್‌ಪಿರಿ ಗ್ರಾಮದ ನಾಮಖಾನಾ ಬ್ಲಾಕ್‌ನಲ್ಲಿ ಒಬ್ಬರು ಸಿಡಿಲಿನಾಘಾತಕ್ಕೆ ಬಲಿಯಾಗಿದ್ದಾರೆ.
18 ವರ್ಷ ಪ್ರಾಯದ ತರುಣನೋರ್ವ ಕೂಚ್ ಬಿಹಾರ್ ಜಿಲ್ಲೆಯ ಮೇಖ್‌ಲೀಗಂಜ್‌ನ ಸುತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.