ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರಂಟಿಗಳನ್ನು ಈಡೇರಿಸುತ್ತದೆ. ಆದರೆ ಎಲ್ಲವನ್ನೂ ಏಕಾಏಕಿ ಜಾರಿ ಮಾಡಲು ಆಗುವುದಿಲ್ಲ. ಇದಕ್ಕಾಗಿ ಸಮಯ ಬೇಕು ಎಂದು ಮಾಜಿ ಸಚಿವೆ ಡಾ|ಮೋಟಮ್ಮ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ ಟಿಕೆಟ್ ತೆಗೆದುಕೊಳ್ಳಬೇಡಿ, ಕರೆಂಟ್ ಬಿಲ್ ಕಟ್ಟಬೇಡಿ ಅಂದರೆ ಹೇಗಿರುತ್ತದೆ. ಮಗು ಹುಟ್ಟಿದಾಕ್ಷಣ ನಡೆದಾಡಲು ಸಾಧ್ಯವೇ? ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆ. ಹಾಗೇ ಐದು ಗ್ಯಾರಂಟಿಗಳನ್ನು ಈಡೇರಿಸಲಿದ್ದಾರೆ. ಚುನಾವಣೆ ಪ್ರಚಾರ ಸಭೆಯಲ್ಲಿ ಘೋಷಿಸಿದ ಗ್ಯಾರಂಟಿಗಳನ್ನು ನೀಡಲು ಸಮಯ ಕೊಡಬೇಕು. ಅವುಗಳನ್ನು ಏಕಾಏಕಿ ಜಾರಿಗೆ ತರಲಾಗದು.
ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಾಗುತ್ತದೆ. ಶುಕ್ರವಾರ ನಡೆಯುವ ಸಂಪುಟ ಸಭೆಯಲ್ಲಿ ಗ್ಯಾರಂಟಿಗಳು ಜಾರಿಗೊಳ್ಳಲಿವೆ. ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದಾರೆ.
ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿ ಕಾರಕ್ಕೆ ಬರುವಾಗ ನೀಡಿದ್ದ ಭರವಸೆಗಳು ಈಡೇರಿವೆಯೇ? ಜನರ ಖಾತೆಗೆ ಹಣ ಹಾಕಿದ್ದಾರಾ? ಎಷ್ಟು ಕೋಟಿ ಉದ್ಯೋಗ ಸೃಷ್ಟಿಯಾಗಿವೆ ಎಂದು ಪ್ರಶ್ನಿಸಿದರು.