Advertisement

ನೇತ್ರ ಸಮಸ್ಯೆ ಪರಿಹಾರಕ್ಕೆ 5 ತಲೆಮಾರಿನ ಸೇವೆ; ಗಿಡಮೂಲಿಕೆಗಳ ಮೂಲಕ ತಯಾರಿಸಿದ ಔಷಧಿ ನೀಡಿಕೆ

03:37 PM Apr 06, 2022 | Team Udayavani |

ಹುಬ್ಬಳ್ಳಿ: “ಸರಿಸುಮಾರು ಐದು ತಲೆಮಾರಿನಿಂದ ನಮ್ಮ ಕುಟುಂಬ ನೇತ್ರ ಸಂಬಂಧಿ ಎಲ್ಲ ಸಮಸ್ಯೆಗಳ ನಿವಾರಣೆಯ ಗಿಡಮೂಲಿಕೆ ಆಧಾರಿತ ಸಿದ್ಧ ಕಣ್ಣಿನ ಹನಿ ಔಷಧ ಹಾಕುತ್ತ ಬಂದಿದೆ. ಯಾವುದೇ ಅಡ್ಡ ಪರಿಣಾಮ ಇಲ್ಲದ ಸಿದ್ಧ ಹನಿ ಕರ್ನಾಟಕ, ತಮಿಳುನಾಡಿನ ಲಕ್ಷಾಂತರ ಜನರ ಪ್ರೀತಿಗೆ ಪಾತ್ರವಾಗಿದೆ. ಇದನ್ನು ಪಡೆದವರು ತಮ್ಮ ನೇತ್ರ ಸಮಸ್ಯೆಗಳ ನಿವಾರಣೆ ಕುರಿತು ಸಂತಸ ವ್ಯಕ್ತಪಡಿಸಿದ್ದು, ನೆಮ್ಮದಿ ತಂದಿದೆ. ನಮ್ಮ ಮನೆತನದ ಸೇವೆಯಾಗಿ ಇದನ್ನು ಕೈಗೊಳ್ಳುತ್ತಿದ್ದೇವೆ.

Advertisement

ಕಣ್ಣಿಗಾಗಿ ಹಾಕುವ ಸಿದ್ಧ ಹನಿ ರಕ್ತಶುದ್ಧಿ, ಋತುಚಕ್ರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ತನ್ನದೇ ಪರಿಣಾಮ ಬೀರುತ್ತಿದೆ’. -ಇದು ನೇತ್ರ ಸಮಸ್ಯೆ ನಿವಾರಣೆಗೆ ಪಾರಂಪರಿಕವಾಗಿ ಗಿಡಮೂಲಿಕೆ ಕಣ್ಣಿನ ಔಷಧಿ ನೀಡಿಕೆ ಸೇವೆಯಲ್ಲಿ ತೊಡಗಿರುವ ತಮಿಳುನಾಡಿನ ಎಂ.ಕಾರ್ತಿಕೇಯನ್‌ ಅವರ ಅನಿಸಿಕೆ. ನೇತ್ರ ಸಂಬಂಧಿ ವಿವಿಧ ಸಮಸ್ಯೆಗಳ ನಿವಾರಣೆಗೆ ಸಿದ್ಧ ಹನಿ ನೀಡಿಕೆ, ಅದರಿಂದಾಗುವ ಪ್ರಯೋಜನ ಕುರಿತಾಗಿ ಅವರು
” ಉದಯವಾಣಿಯೊಂದಿಗೆ” ಮಾತನಾಡಿದರು.

ನೇತ್ರಗಳಿಗೆ ನಮ್ಮ ಗಿಡಮೂಲಿಕೆ ಔಷಧ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮದ ಬಗ್ಗೆ ಇದುವರೆಗೂ ಒಂದೇ ಒಂದು ವರದಿ ಆಗಿಲ್ಲ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಜನರು ಅತ್ಯಂತ ಪ್ರೀತಿಯಿಂದ ಇದನ್ನು ಸ್ವೀಕರಿಸಿದ್ದಾರೆ. ಕಣ್ಣಿಗೆ ಸಿದ್ಧ ಹನಿ ಹಾಕುವುದನ್ನು ಮುಂದುವರಿಸಿರುವ ನಾನು ಕುಟುಂಬದ ಐದನೇ ತಲೆಮಾರಿನವನು. ಐದು ತಲೆಮಾರಿಗಿಂತ ಮುಂಚೆಯೂ ನಮ್ಮ ಕುಟುಂಬದವರು ಇದನ್ನು ಕೈಗೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ನನ್ನ ತಂದೆಯಿಂದ ಪಡೆದ ಪಾರಂಪರಿಕ ವಿದ್ಯೆಯನ್ನು ಮುಂದುವರಿಸಿದ್ದೇನೆ ಎಂದರು.

ತಾಯಿ ಹಾಲಿನಲ್ಲಿ ಕೊಡುತ್ತಿದ್ದೆವು:
ಸಿದ್ಧ ಹನಿಯನ್ನು ಪೂರ್ವಜರು ಮೊದಲು ತಾಯಿ ಎದೆಹಾಲಿನಲ್ಲಿ ಹಾಕುತ್ತಿದ್ದರಂತೆ. ಇದೀಗ ಎಳೆನೀರು ಬಳಸಿ ಹಾಕಲಾಗುತ್ತದೆ. ತಮಿಳುನಾಡಿನ ದಿಂಡಿಕಲ್ಲ ಬಳಿಯ ಅಣ್ಣಾ ಸಮುದ್ರಂ ಗ್ರಾಮದಲ್ಲಿ ಪ್ರತಿ ಅಮವಾಸ್ಯೆಗೆ ಜನರಿಗೆ ಕಣ್ಣಿಗೆ ಸಿದ್ಧ ಹನಿ ಹಾಕಲು ಆರಂಭಿಸಿದ್ದೆವು. ಅಲ್ಲಿ ಪ್ರತಿ ಅಮವಾಸ್ಯೆಗೆ ಸುಮಾರು 2,500ರಿಂದ 3,000 ಜನರಿಗೆ ಇದನ್ನು ನೀಡಲಾಗುತ್ತಿದೆ.

Advertisement

ತಮಿಳುನಾಡಿನಲ್ಲಿ ಅಳಿಯಾರ್‌ನಲ್ಲಿ 25 ವರ್ಷಗಳಿಂದ ಯೋಗ ತರಬೇತಿ ಕೇಂದ್ರ ನಡೆಸುತ್ತಿದ್ದ ವೇದಾದ್ರಿ ಮಹಾಋಷಿ ಸ್ವಾಮೀಜಿಯವರಿಗೆ ವಿಷಯ ತಿಳಿದು, ನನ್ನ ಕಣ್ಣಿಗೆ ಸಿದ್ಧ ಹನಿ ಹಾಕುವಂತೆ ಹೇಳಿದ್ದರು. ನನ್ನ ತಂದೆ ಕೆ.ಮುತ್ತುಕೃಷ್ಣನ್‌ ಅವರು ಹೋಗಿ ಗುರುಗಳ ಕಣ್ಣಿಗೆ ಸಿದ್ಧ ಹನಿ ಹಾಕಿದ್ದರು. ಮೂರು ತಿಂಗಳು ಇದನ್ನು ಪಡೆದ ನಂತರ ಗುರುಗಳು ತಮ್ಮೆಲ್ಲ ಯೋಗ ಶಿಕ್ಷಕರಿಗೆ ಇದನ್ನು ಹಾಕುವಂತೆ ಹೇಳಿ ಆಶೀರ್ವದಿಸಿದ್ದರಲ್ಲದೆ, ಗಿಡಮೂಲಿಕೆ ಔಷಧಿ ಅತ್ಯುತ್ತಮ ಪರಿಣಾಮಕಾರಿ ಆಗಿದೆ ಎಂತಲೂ ಹೇಳಿದ್ದರು. ಅವರ ಆಶೀರ್ವಾದದಿಂದ ತಮಿಳುನಾಡಿನಲ್ಲಿ ಮುಂದುವರಿದ ನಮ್ಮ ಕಾಯಕ ಇದೀಗ ಕಳೆದ 15 ವರ್ಷಗಳಿಂದ ಕರ್ನಾಟಕದ ವಿವಿಧ ಕಡೆಗಳಲ್ಲಿ ಸಿದ್ಧ ಹನಿ ನೀಡಲಾಗುತ್ತಿದೆ.

ಪ್ರತಿ ತಿಂಗಳ 24ರಂದು ಹುಬ್ಬಳ್ಳಿಯಲ್ಲಿ
ವರದಶ್ರೀ ಫೌಂಡೇಶನ್‌ನ ವರದಶ್ರೀ ಪರಿವಾರದ ಆರ್ಗ್ಯಾನಿಕ್‌ ಅರಮನೆ ಕಟ್ಟಡದಲ್ಲಿ ಪ್ರತಿ ತಿಂಗಳು 24ರಂದು ಕಣ್ಣಿಗೆ ಗಿಡಮೂಲಿಕೆ ಔಷಧ ಹಾಕಲಾಗುತ್ತದೆ. ಆರಂಭದಲ್ಲಿ 30-40 ಜನರು ಮಾತ್ರ ಔಷಧ ಪಡೆಯಲು ಬರುತ್ತಿದ್ದರು. ಇದೀಗ 1,000-1,200 ಜನರು ಔಷಧಿ ಪಡೆದುಕೊಳ್ಳುತ್ತಿದ್ದಾರೆ. ಜನರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿ ಆರಂಭಗೊಳ್ಳಲಿರುವ ನಮ್ಮ ನೂತನ ಶಾಖೆಯಲ್ಲಿ ಹಾಗೂ 15 ದಿನಕ್ಕೊಮ್ಮೆ ಔಷಧ ಹಾಕುವುದನ್ನು ಕೈಗೊಳ್ಳಲು ಚಿಂತಿಸಲಾಗುತ್ತಿದೆ ಎಂದು ವರದಶ್ರೀ ಫೌಂಡೇಶನ್‌ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ತಿಳಿಸಿದರು.

ಯಾರೆಲ್ಲಾ ಪಡೆಯಬಹುದು?
ಐದು ವರ್ಷ ಮೇಲ್ಮಟ್ಟ ಮಕ್ಕಳಿಂದ ಹಿಡಿದು ಯಾವುದೇ ವಯೋಮಾನದವರು ಹನಿ ಪಡೆಯಬಹುದು. ನೇತ್ರ ಶಸ್ತ್ರಚಿಕಿತ್ಸೆ ಆಗಿದ್ದರೆ ಒಂದು ವರ್ಷದವರೆಗೆ ಪಡೆಯಬಾರದು. ಯಾರಾದರೂ ಕಣ್ಣಿಗೆ ಅಲೋಪಥಿ ಎಣ್ಣೆ ಬಳಸುತ್ತಿದ್ದರೆ ನಮ್ಮ ಗಿಡಮೂಲಿಕೆ ಔಷಧ ಪಡೆದ ದಿನ ಅಲೋಪಥಿ ಎಣ್ಣೆ ಬಳಸಬಾರದು. ಔಷಧ ಪಡೆಯುವಾಗ ಮುಖ ಮೇಲೆ ಮಾಡಿರಬೇಕು. ಸಿದ್ಧ ಹನಿ ಹಾಕಿದ ನಂತರ ಮುಖ ಮೇಲೆಯೇ ಇರಿಸಿ ಹತ್ತು ಬಾರಿ ಕಣ್ಣು ತೆರೆದು-ಮುಚ್ಚುವುದು ಮಾಡಬೇಕು.

ತಿಂಗಳಿಗೆ 50-60 ಸಾವಿರ ಜನರಿಗೆ ಹನಿ!
ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಒಟ್ಟಾರೆ ತಿಂಗಳಿಗೆ 50-60 ಸಾವಿರ ಜನರ ಕಣ್ಣಿಗೆ ಸಿದ್ಧ ಹನಿ ಹಾಕಲಾಗುತ್ತದೆ. ಕರ್ನಾಟಕದಲ್ಲಿ ತಿಂಗಳಲ್ಲಿ 12 ದಿನ ಔಷಧ ನೀಡಿಕೆ ಕಾರ್ಯ ನಡೆಯಲಿದೆ. ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಭದ್ರಾವತಿ, ಶಿವಮೊಗ್ಗ, ದಾವಣಗೆರೆ, ಭರಮಸಾಗರ, ಆನೇಕಲ್ಲ, ಕೋಲಾರ, ಹೊಸೂರು ಇನ್ನಿತರ ಕಡೆಗಳಲ್ಲಿ ನೀಡಲಾಗುತ್ತಿದೆ.

ತಿಂಗಳಿಗೊಮ್ಮೆಯಂತೆ 7-8 ತಿಂಗಳವರೆಗೆ ತೆಗೆದುಕೊಂಡರೆ ಪ್ರತಿ ಎರಡು ತಿಂಗಳಿಗೆ ಒಮ್ಮೆ 0.1ರಷ್ಟು ದೃಷ್ಟಿದೋಷದ ಅಂಶಗಳು ಕಡಿಮೆಯಾಗುತ್ತ ಬರುತ್ತದೆ. ಕಣ್ಣಲ್ಲಿ ನೀರು ಸೊರಿಕೆ, ಕಣ್ಣು ಕೆಂಪಾಗುವುದು, ಪೊರೆ ಬರುವುದು, ತಲೆನೋವು, ಋತುಚಕ್ರ ಸಮಸ್ಯೆ, ದೃಷ್ಟಿದೋಷ ಇನ್ನಿತರ ಸಮಸ್ಯೆಗಳ ನಿವಾರಣೆಗೆ ಸಹಕಾರಿ ಆಗಲಿದೆ. ಗರ್ಭಿಣಿಯರು, ತಾಯಂದಿರು ಪಡೆದರೆ ಮಕ್ಕಳ ಆರೋಗ್ಯಕ್ಕೆ ಉತ್ತಮ ಪರಿಣಾಮ ಬೀರಲಿದೆ. ರಕ್ತ ಶುದ್ಧೀಕರಿಸುತ್ತದೆ, ರೋಗನಿರೋಧಕ ಶಕ್ತಿ
ಹೆಚ್ಚಿಸುತ್ತದೆ ಎಂಬುದು ಕಾರ್ತಿಕೇಯನ್‌ ಅವರ ಅನಿಸಿಕೆ.

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next