ವಿಜಯಪುರ: ದ್ರಾಕ್ಷಿನಾಡು ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯ ಐತಿಹಾಸಿಕ ವಿಜಯಪುರ ಮಹಾನಗರದಲ್ಲಿ ಮೊದಲ ಬಾರಿಗೆ ಫೆ.16 ರಿಂದ 20 ರ ವರೆಗೆ ದ್ರಾಕ್ಷಿ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿದೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸಿಇಒ ದ್ರಾಕ್ಷಿ ಮೇಳದ ಮಾಹಿತಿ ನೀಡಿದ ಅವರು, ದ್ರಾಕ್ಷಿ ಬೆಳೆಯುವಲ್ಲಿ ವಿಜಯಪುರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಹೀಗಾಗಿ ವಿಜಯಪುರ ಜಿ.ಪಂ. ಸಹಯೋಗ ಹಾಗೂ ರೈತರ ಸಹಭಾಗಿತ್ವದಲ್ಲಿ ವಿಜಯಪುರ ಬ್ರ್ಯಾಂಡ್ ಸೃಷ್ಟಿಸಿ ದ್ರಾಕ್ಷಿ ಮಾರಾಟ ಮಾಡಲಾಗುತ್ತಿದೆ ಎಂದರು.
ಮೇಳದಲ್ಲಿ 12 ಮಳಿಗೆಗಳಲ್ಲಿ ಹಸಿದ್ರಾಕ್ಷಿ, ಒಣದ್ರಾಕ್ಷಿ ಹಾಗೂ ವೈವಿಧ್ಯಮಯ ದ್ರಾಕ್ಷಿ ತಳಿಗಳ ಸಸಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ನಗರದ ಶಾಟಲೈಟ್ ಬಸ್ ನಿಲ್ದಾಣ, ಸಿದ್ದೇಶ್ವರ ದೇವಸ್ಥಾನ, ಮಹಾತ್ಮಾ ಗಾಂಧೀಜಿ ವೃತ್ತ, ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜು ಪರಿಸರದಲ್ಲೂ ಔಟಲೆಟ್ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದರು.
ದ್ರಾಕ್ಷಿ ಬೆಳೆಯುವಲ್ಲಿ ವಿಜಯಪುರ ಜಿಲ್ಲೆ ವಿಶೇಷ ಹೆಸರು ಮಾಡಿರುವ ಕಾರಣ ನಮ್ಮ ವಿಜಯಪುರ ದ್ರಾಕ್ಷಿ ಹೆಸರಿನಲ್ಲಿ ಬ್ರ್ಯಾಂಡ್ ಗಳ 2-4 ಕೆಜಿ ಬಾಕ್ಸ್ ಮಾಡಿ ರೈತರ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದಲ್ಲದೆ ಶಿವರಾತ್ರಿ ಸಂದರ್ಭದಲ್ಲಿ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ದ್ರಾಕ್ಷಿ ಮಾತ್ರವಲ್ಲದೇ ಕರಬೂಜ, ಕಲ್ಲಂಗಡಿ, ಬಾಳೆ ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ತೋಟಗಾರಿಕೆಯ ಇತರೆ ಬೆಳೆಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲೆಯ ತೋಟಗಾರಿಕೆ ಬೆಳೆಯಲ್ಲಿ ಒಂದಾದ ಲಿಂಬೆ ಬೆಳೆಗೆ ಭೌಗೋಳಿಕ ಸೂಚ್ಯಂಕ (ಜಿ.ಐ.) ಟ್ಯಾಗಿಂಗ್ ಪಡೆಯುವ ಪ್ರಯತ್ನ ಅಂತಿಮ ಹಂತದಲ್ಲಿದೆ. ಅದೇರೀತಿ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗೂ ಜಿಐ ಟ್ಯಾಗಿಂಗ್ ಪಡೆಯುವ ಕುರಿತು ಪ್ರಸ್ತಾವನೆಗೆ ಅಗತ್ಯವಾದ ಅಂಶಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಈ ಕುರಿತು ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಿಇಒ ರಾಹುಲ್ ಶಿಂಧೆ ಸ್ಪಷ್ಟಪಡಿಸಿದರು.
ತೋಟಗಾರಿಕೆ ಇಲಾಖೆಯ ವಿಜಯಪುರ ಉಪ ನಿರ್ದೇಶಕ ಎಸ್.ಎಂ.ಬರಗಿಮಠ ಉಪಸ್ಥಿತರಿದ್ದರು.