ಮುಂಬಯಿ : ಪೌರಾಡಳಿತೆ ನಡೆಸುತ್ತಿರುವ ಮಧ್ಯ ಮುಂಬಯಿಯ ನಾಯರ್ ಆಸ್ಪತ್ರೆಯಲ್ಲಿ ಐದು ದಿನಗಳ ಗಂಡು ಮಗುವನ್ನು ಅಪಹರಿಸಲಾದ ಏಳು ತಾಸೊಳಗೆ ಪೊಲೀಸರು ಅದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ, ಅಪಹರಣ ನಡೆಸಿದ್ದ ಮಹಿಳೆಯನ್ನು ಬಂಧಿಸಿದರು.
ಆಸ್ಪತ್ರೆಯ ವಾರ್ಡ್ ನಂಬ್ರ 7ರಲ್ಲಿ ನಿನ್ನೆ ಗುರುವಾರ ಸಂಜೆ 5.30ರ ಸುಮಾರಿಗೆ ತನ್ನ ಮಗುವನ್ನು ಹಾಸಿಗೆಯಲ್ಲಿ ಪಕ್ಕದಲ್ಲೇ ಇರಿಸಿಕೊಂಡು ನಿದ್ದೆ ಹೋಗಿದ್ದ ಶೀತಲ್ ಸಾಳ್ವಿ ಗೆ ಎಚ್ಚರವಾದಾಗ ಮಗು ಪಕ್ಕದಲ್ಲಿ ಇಲ್ಲದಿರುವುದನ್ನು ಕಂಡು ದಿಗಿಲಾಯಿತು.
ಗಾಬರಿಗೊಂಡ ಆಕೆ ಒಡನೆಯೇ ಆಸ್ಪತ್ರೆ ಸಿಬಂದಿಗೆ ವಿಷಯ ತಿಳಿಸಿದರು. ಅವರು ಕೂಡಲೇ ಸಿಸಿಟಿವಿ ಚಿತ್ರಿಕೆಯನ್ನು ಗಮನಿಸಿದಾಗ ಮಹಿಳೆಯೊಬ್ಬಳು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಆಸ್ಪತ್ರೆಯಿಂದ ಹೊರಗೆ ಧಾವಿಸುತ್ತಿರುವುದು ಕಂಡುಬಂತು.
ಈ ಬಗ್ಗೆ ಅಗ್ರಿಪಾಡಾ ಪೊಲೀಸರಿಗೆ ಕೂಡಲೇ ಮಾಹಿತಿ ನೀಡಲಾಯಿತು. ಅವರು ತತ್‌ಕ್ಷಣ ಶೋಧ ಕಾರ್ಯಕ್ಕೆ ತೊಡಗಿ ಶೀತಲ್ ರಮೇಶ್ ಸಾಳ್ವಿ ಅವರ ಮಗುವನ್ನು ಅಪಹರಿಸಿದ ಮಹಿಳೆಯನ್ನು ಕೇವಲ ಏಳು ತಾಸೊಳಗೆ, ಇಂದು ಶುಕ್ರವಾರ ನಸುಕಿನ 12.30ರ ವೇಳೆಗೆ, ಬಂಧಿಸಿ ಮಗುವನ್ನು ವಶಕ್ಕೆ ತೆಗೆದುಕೊಂಡರು.
ಹ್ಯಾಜೆಲ್ ಕೊರಿಯಾ ಎಂದು ಗುರುತಿಸಲಾಗಿರುವ ಆರೋಪಿ ಮಹಿಳೆಯ ವಿರುದ್ಧ ಅಗ್ರಿಪಾಡಾ ಪೊಲೀಸರು ಐಪಿಸಿ ಎ.363ರ ಪ್ರಕಾರ ಕೇಸು ದಾಖಲಿಸಿಕೊಂಡರು; ಮಗುವನ್ನು ಹೆತ್ತವರಿಗೆ ಒಪ್ಪಿಸಿದರು. ಅಂತೂ ಪ್ರಕರಣ ಸುಖಾಂತ್ಯ ಕಂಡಿತು.