ಕಲಬುರಗಿ: ಮಹಾಮಾರಿ ಕೋವಿಡ್-19ರ ಹಾಟ್ ಸ್ಪಾಟ್ ಆಗಿರುವ ಕಲಬುರಗಿಯಲ್ಲಿ ಸೋಮವಾರ ಒಂದೇ ದಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಬಿಸಿಲೂರಿನ ಜನತೆ ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ.
ಕೋವಿಡ್-19 ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಐವರಲ್ಲೂ ಸೋಂಕು ಪತ್ತೆಯಾಗಿದೆ. ಹೆಮ್ಮಾರಿ ಸೋಂಕಿನಿಂದಲೇ ಮೃತಪಟ್ಟ ಬಟ್ಟೆ ವ್ಯಾಪಾರಿ (ಪಿ-205) ಯ ಸಂಪರ್ಕಕ್ಕೆ ಬಂದ ಮೂವರಿಗೆ ಸೋಂಕು ಹರಡಿದ್ದು ಖಚಿತವಾಗಿದೆ. 13 ವರ್ಷದ ಬಾಲಕ, 19 ವರ್ಷದ ಯುವಕ ಹಾಗೂ 30 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಕೋವಿಡ್-19 ಸೋಂಕಿನಿಂದ ಮೃತಪಟ್ಟ ಮತ್ತೊಬ್ಬ ಹಣ್ಣಿನ ವ್ಯಾಪಾರಿ (ಪಿ-177) ಯ ಸಂಪರ್ಕಕ್ಕೆ ಬಂದ 50 ವರ್ಷದ ಪುರುಷನಿಗೆ ಮಾರಣಾಂತಿಕ ರೋಗ ಕಾಣಿಸಿಕೊಂಡಿದೆ.
ಅಲ್ಲದೇ, ಕೋವಿಡ್-19 ಸೋಂಕಿತ ಹಾರ್ಡ್ ವೇರ್ ಅಂಗಡಿಯ 57 ವರ್ಷದ ಸಂಪರ್ಕಕ್ಕೆ ಬಂದ 17 ವರ್ಷದ ಬಾಲಕನಿಗೂ ಸೋಂಕು ಹಬ್ಬಿದ್ದು, ಜನತೆಯಲ್ಲಿ ತಲ್ಲಣ ಉಂಟಾಗಿದೆ.
ದೆಹಲಿಗೆ ಹೋದವರ ಸಂಪರ್ಕದಿಂದ ಹಣ್ಣಿನ ವ್ಯಾಪಾರಿ, ಬಟ್ಟೆ ವ್ಯಾಪಾರಿ ಹಾಗೂ ಹಾರ್ಡ್ ವೇರ್ ಅಂಗಡಿಯ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿತ್ತು. ಈಗ ಅವರಿಂದ ಅವರ ಕುಟುಂಬದವರು ಮತ್ತು ಅವರ ಸಂಪರ್ಕಕ್ಕೆ ಬಂದವರಿಗೆ ಕೋವಿಡ್-19 ಖಚಿತವಾಗುತ್ತಿದೆ. ಆದರೆ, ದೆಹಲಿಯಿಂದ ವಾಪಸ್ ಆಗಿರುವ ಯಾರಿಗೂ ಇದುವರೆಗೆ ಕೋವಿಡ್-19 ಸೋಂಕು ಖಚಿತವಾಗಿಲ್ಲ.
ಜಿಲ್ಲೆಯಲ್ಲಿ 22 ಇದ್ದ ಕೋವಿಡ್-19 ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮೂರು ಮೃತಪಟ್ಟರೆ, ಮತ್ತೆ ಮೂವರು ಗುಣಮುಖರಾಗಿದ್ದಾರೆ. ಉಳಿದೆಲ್ಲ ಸೋಂಕಿತರಿಗೆ ಇಎಸ್ಐ ಆಸ್ಪತ್ರೆ ಮತ್ತು ಜಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ