Advertisement

ಸಂವಿಧಾನ ರಚನೆಯಲ್ಲಿ ಕರಾವಳಿಯ ಐವರು

11:39 PM May 12, 2022 | Team Udayavani |

“ಆಜಾದೀ ಕಾ ಅಮೃತ ವರ್ಷ್‌’ ಅಂಗವಾಗಿ ಸ್ವಾತಂತ್ರ್ಯ ಯೋಧರ ಸಂಸ್ಮರಣೆ- ಭಾರತ ಸಂವಿಧಾನ ವ್ಯಾಖ್ಯಾನ’ ಕಾರ್ಯಕ್ರಮವು ಮೇ 14ರಂದು ಮಂಗಳೂರು ಕುದು¾ಲ್‌ ರಂಗ ರಾವ್‌ ಪುರಭವನದಲ್ಲಿ, ಮೇ 21ರಂದು ಉಡುಪಿ ಪುರಭವನದಲ್ಲಿ ನಡೆಯುವ ಸಂದರ್ಭ ಸಂವಿಧಾನ ರಚನ ಸಮಿತಿಯಲ್ಲಿ ಪಾಲ್ಗೊಂಡ ಅವಿಭಜಿತ ದ.ಕ. ಜಿಲ್ಲೆಯ ಮೂಲದ ಐವರನ್ನು ಸ್ಮರಿಸಲಾಗುತ್ತಿದೆ.

Advertisement

ಭಾರತದ ಸಂವಿಧಾನಕ್ಕೆ ಜಗತ್ತಿನಲ್ಲಿ ವಿಶಿಷ್ಟ ಸ್ಥಾನವಿದೆ. 1946ರಲ್ಲಿ 389 ಸದಸ್ಯರ ಕಾನ್‌ಸ್ಟಿಟ್ಯುವೆಂಟ್‌ ಅಸೆಂಬ್ಲಿಯನ್ನು ರಚಿಸಲಾಯಿತು. 208 ಸ್ಥಾನಗಳನ್ನು ಕಾಂಗ್ರೆಸ್‌, 73 ಸ್ಥಾನಗಳನ್ನು ಮುಸ್ಲಿಂ ಲೀಗ್‌ ಪಡೆದವು. ಮುಸ್ಲಿಂ ಲೀಗ್‌ ಅಸಹಕಾರ ತೋರಿದ್ದರಿಂದ ಅದು ಮುಂದುವರಿಯಲಿಲ್ಲ. 1947ರ ಬಳಿಕ 299 ಸದಸ್ಯರ ಸಮಿತಿ ಮತ್ತೆ ಸಭೆ ಸೇರಿತು. ಸಂವಿಧಾನದ ಕರಡು ಸಮಿತಿಯು ಡಾ| ಬಿ.ಆರ್‌. ಅಂಬೇಡ್ಕರ್‌ ಅಧ್ಯಕ್ಷತೆಯಲ್ಲಿ 2 ವರ್ಷ 11 ತಿಂಗಳು, 18 ದಿನಗಳಲ್ಲಿ 114 ದಿನಗಳ ಸಭೆ ಸೇರಿ ಅಂತಿಮ ರೂಪವನ್ನು ಕೊಟ್ಟಿತು.

ಸಮಿತಿಗೆ ಆಯ್ಕೆಯಾದ ಸದಸ್ಯರಲ್ಲಿ ಐವರು ಕರಾವಳಿ ಕರ್ನಾಟಕ ಮೂಲದವರು ಎನ್ನುವುದು ವಿಶೇಷ. ಮದ್ರಾಸ್‌ ಪ್ರಾಂತದಿಂದ ಆಯ್ಕೆಯಾದ ಬೆನಗಲ್‌ ನರಸಿಂಗ ರಾವ್‌, ಬೆನಗಲ್‌ ಶಿವ ರಾವ್‌, ಉಳ್ಳಾಲ ಶ್ರೀನಿವಾಸ ಮಲ್ಯ, ರೆ|ಫಾ| ಜೆರೋಮ್‌ ಡಿ’ಸೋಜಾ ಮತ್ತು ಮಧ್ಯಪ್ರಾಂತದಿಂದ ಆಯ್ಕೆಯಾದ ಹರಿವಿಷ್ಣು ಕಾಮತ್‌ ಅವರೇ ಕರಾವಳಿ ಮೂಲದವರು. ಕೊಡಗಿನಿಂದ ಏಕೈಕ ಸದಸ್ಯ ಸಿ.ಎಂ. ಪೂಣಚ್ಚ ಸಮಿತಿಯಲ್ಲಿದ್ದರು.

ಬಿ.ಎನ್. ರಾವ್

ಬೆನಗಲ್‌ ನರಸಿಂಗ ರಾವ್‌ (1887-1953) ಸಂವಿಧಾನ ರಚನೆಯಲ್ಲಿ ಸಲಹೆಗಾರರಾಗಿ ಪ್ರಧಾನ ಪಾತ್ರ ವಹಿಸಿದ್ದರು. ಬ್ಯಾರಿಸ್ಟರ್‌ ಪದವೀಧರರಾದ 1909ರಲ್ಲಿ ಐಸಿಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದವರು. ಅನಂತರ ನ್ಯಾಯಾಂಗ ಕ್ಷೇತ್ರದಲ್ಲಿ ಕೈಯಾಡಿಸಿದರು. ಅಸ್ಸಾಂ ಸರಕಾರದ ಕಾರ್ಯದರ್ಶಿ, ನ್ಯಾಯಾಂಗ ಸಲಹೆಗಾರರಾಗಿದ್ದರು. ಕಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ, 1944-45ರಲ್ಲಿ ಜಮ್ಮು- ಕಾಶ್ಮೀರ ರಾಜ್ಯದ ಪ್ರಧಾನಿಯಾಗಿ, ಭಾರತ ಸರಕಾರದ ಆಡಳಿತ ಸುಧಾರಣ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದರು. 1947ರಲ್ಲಿ ಸಂವಿಧಾನ ರಚನ ಸಮಿತಿಯ ಸಲಹೆಗಾರರಾಗಿ ಡಾ| ಅಂಬೇಡ್ಕರ್‌ ಅವರಿಂದ ಮೆಚ್ಚುಗೆ ಗಳಿಸಿದ ವ್ಯಕ್ತಿ ಇವರು.

Advertisement

ಬಿ.ಎಸ್. ರಾವ್

ಬೆನಗಲ್‌ ಶಿವ ರಾವ್‌ (1891-1975) ಪತ್ರಕರ್ತರು ಮತ್ತು ರಾಜಕಾರಣಿಯಾಗಿ ಸೇವೆ ಸಲ್ಲಿಸಿದವರು. ಸ್ವತಂತ್ರ ಭಾರತದ ಸೌತ್‌ಕೆನರಾ ಲೋಕಸಭಾ ಕ್ಷೇತ್ರದ (ಬಳಿಕ ಮಂಗಳೂರು, ಈಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ) ಮೊದಲ ಚುನಾಯಿತ ಸದಸ್ಯರು. 1957-60ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. “ದಿ ಹಿಂದು’, “ಮ್ಯಾಂಚೆಸ್ಟರ್‌ ಗಾರ್ಡಿಯನ್‌’ ವರದಿಗಾರರಾಗಿದ್ದರು. ಬೆನಗಲ್‌ ನರಸಿಂಗ ರಾವ್‌ ಅವರ ಸಹೋದರ ಇವರು. ಕಾರ್ಮಿಕ ನಾಯಕರಾಗಿಯೂ ಪ್ರಸಿದ್ಧರು. ನರಸಿಂಗ ರಾಯರ “ಇಂಡಿಯಾಸ್‌ ಕಾನ್‌ಸ್ಟಿಟ್ಯೂಶನ್‌ ಇನ್‌ ದಿ ಮೇಕಿಂಗ್‌’, “ವಾಟ್‌ ಲೇಬರ್‌ ಹ್ಯಾಸ್‌ ಗೇನ್ಡ್ ಫ್ರಾಮ್‌ ರಿಫಾರ್ಮ್ ಇನ್‌ ಇಂಡಿಯ’, “ದಿ ಪ್ರಾಬ್ಲೆಮ್‌ ಆಫ್ ಇಂಡಿಯ’, “ಸಿಲೆಕ್ಟ್ ಕಾನ್‌ಸ್ಟಿಟ್ಯೂಶನ್ಸ್‌ ಆಫ್ ದಿ ವರ್ಲ್ಡ್’, “ಇಂಡಿಯಾಸ್‌ ಫ್ರಿಡಮ್‌ ಸ್ಟ್ರಗಲ್‌: ಸಮ್‌ ಆಸ್ಪೆಕ್ಟ್$Õ’  ಇತ್ಯಾದಿ ಕೃತಿಗಳಲ್ಲಿ ಸಂಪಾದಕರಾಗಿ, ಸಹ ಲೇಖಕರಾಗಿ, ಸ್ವಯಂ ಲೇಖಕರಾಗಿ ಶಿವ ರಾವ್‌ ಕಾಣಿಸಿಕೊಂಡಿದ್ದಾರೆ.

ಯು.ಎಸ್. ಮಲ್ಯ

ಉಳ್ಳಾಲ ಶ್ರೀನಿವಾಸ ಮಲ್ಯರು (1902-1965) ಕರಾವಳಿಯ ಅಭಿವೃದ್ಧಿಯಲ್ಲಿ (ನವಮಂಗಳೂರು ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಸುರತ್ಕಲ್‌ನ ಎನ್‌ಐಟಿಕೆ ಇತ್ಯಾದಿ) ಮಹತ್ವದ ಪಾತ್ರ ವಹಿಸಿದವರು. 18ನೆಯ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಲ್ಯರು ಹಲವು ಬಾರಿ ಸತ್ಯಾಗ್ರಹಿಯಾಗಿ ಜೈಲುವಾಸ ಅನುಭವಿಸಿದವರು. ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ರಾಜಕೀಯ ಜೀವನ ಆರಂಭಿಸಿದ ಮಲ್ಯರು 1937ರಿಂದ 50ರ ವರೆಗೆ ಜಿಲ್ಲಾಧ್ಯಕ್ಷರಾಗಿ, 1951ರಲ್ಲಿ ಅ.ಭಾ. ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿಯಾದರು. 1952ರ ಮೊದಲ ಸಂಸತ್‌ ಚುನಾವಣೆಯಲ್ಲಿ ಸೌತ್‌ ಕೆನರಾ (ಉತ್ತರ), ಅನಂತರ 1957, 1962ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದ ಸದಸ್ಯರಾದರು.

ಹೆಚ್.ವಿ.ಕಾಮತ್

ಹರಿ ವಿಷ್ಣು ಕಾಮತ್‌ (1907-1982) ಮಂಗಳೂರು ಮೂಲದ ಹುಂಡಿ ಮನೆತನದವರು. 1930ರಲ್ಲಿ ಐಸಿಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ಇವರು ಆ ಕಾಲದ ಆಡಳಿತ ವ್ಯವಸ್ಥೆಯನ್ನು ಒಪ್ಪದೆ ಬ್ರಿಟಿಷ್‌ ಸರಕಾರದ ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯವನ್ನು ತೋರಿಸಿದರು. ಅವಿವಾಹಿತರಾಗಿದ್ದ ಇವರು 1937ರಲ್ಲಿ ರಾಷ್ಟ್ರೀಯ ಆಂದೋಲನದಲ್ಲಿ ಪಾಲ್ಗೊಳ್ಳಲು ಉತ್ಸುಕತೆ ತೋರಿಸಿದಾಗ ಸುಭಾಸ್‌ಚಂದ್ರ ಬೋಸ್‌ ಸಲಹೆಯಂತೆ ಕಾಂಗ್ರೆಸ್‌ ಪಕ್ಷವನ್ನು ಸೇರಿದರು. ಬೋಸ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದಾಗ ಆಪ್ತ ಕಾರ್ಯದರ್ಶಿ, ಫಾರ್ವರ್ಡ್‌ ಬ್ಲಾಕ್‌ ಸ್ಥಾಪಿಸಿದಾಗ ಸಂಘಟನ ಕಾರ್ಯದರ್ಶಿಯಾದರು. ಮಧ್ಯಪ್ರದೇಶದ ಹೊಶಂಗಾಬಾದ್‌ ಲೋಕಸಭಾ ಕ್ಷೇತ್ರದಿಂದ 1855ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, 1962, 67ರಲ್ಲಿ ಪ್ರಜಾ ಸೋಶಲಿಸ್ಟ್‌ ಪಾರ್ಟಿಯಿಂದ ಚುನಾಯಿತರಾಗಿದ್ದರು. ಬೋಸ್‌ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆಂಬ ಸುದ್ದಿ ಬಂದಾಗ ತೈವಾನ್‌ಗೆ ನಿಜ ಸ್ಥಿತಿ ಅರಿಯಲು ಹೋಗಿದ್ದರು. ಸಂವಿಧಾನ ರಚನ ಸಮಿತಿ ಸದಸ್ಯರಾಗಿ 70 ವರ್ಷ ಮೀರಿದವರು ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಸಲಹೆ ಕೊಟ್ಟವರು ಇವರು. ಆದರೆ ಇದು ಜಾರಿಯಾಗಲಿಲ್ಲ, ಸ್ವಯಂ ಕಾಮತ್‌ ಮಾತ್ರ ಇದನ್ನು ಪಾಲಿಸಿದರು.

ಫಾ| ಜೆರೋಮ್‌ ಡಿ’ಸೋಜಾ

ರೆ|ಫಾ| ಜೆರೋಮ್‌ ಡಿ’ಸೋಜಾ (1897-1977) ಮೂಲ್ಕಿ ಸಮೀಪದ ಹಳೆಯಂಗಡಿಯವರು, ಬೆಲ್ಜಿಯಂನಲ್ಲಿ ಗುರುದೀಕ್ಷೆ ಪಡೆದಿದ್ದರು. ಸಂವಿಧಾನ ರಚನೆ ಸಮಿತಿಯಲ್ಲಿದ್ದ ಏಕೈಕ ಕ್ರೈಸ್ತಧರ್ಮದ ಪಾದ್ರಿ ಇವರು. ತಿರುಚ್ಚಿಯಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದ ಡಿ’ಸೋಜಾರು ಅದರ ರೆಕ್ಟರ್‌, ಅಧ್ಯಕ್ಷರೂ ಆದರು. ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದ ಸಿ. ರಾಜಗೋಪಾಲಾಚಾರಿಯವರು ಜೆರೋಮ್‌ ಡಿ’ಸೋಜಾರತ್ತ ಆಕರ್ಷಿತರಾದರು. ಇವರ ಶಿಫಾರಸಿನಿಂದಲೇ ಸಂವಿಧಾನ ರಚನ ಸಮಿತಿಗೆ  ಡಿ’ಸೋಜಾ ಆಯ್ಕೆಯಾದರು. ಧಾರ್ಮಿಕ ಹಕ್ಕು, ಧರ್ಮ ಪ್ರಚಾರ ಇತ್ಯಾದಿ ವಿಷಯಗಳು ಸಂವಿಧಾನದಲ್ಲಿ ಸೇರ್ಪಡೆಗೊಂಡಿರುವುದು ಇವರಿಂದಾಗಿ. ನರಸಿಂಹ ರಾವ್‌, ಶಿವ ರಾವ್‌, ಶ್ರೀನಿವಾಸ ಮಲ್ಯ, ಹರಿ ವಿಷ್ಣು ಕಾಮತ್‌ ಈ ನಾಲ್ವರೂ ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಓದಿದವರು ಎನ್ನುವುದು ವಿಶೇಷ. ಒಟ್ಟು 299 ಸದಸ್ಯರ ಪೈಕಿ ಒಂದೇ ಜಿಲ್ಲೆಯ ಮೂಲದ ಐವರು ಭಾಗವಹಿಸಿರುವುದು ಅವಿಭಜಿತ ದ.ಕ. ಜಿಲ್ಲೆಯ ಮಣ್ಣಿನ ಪ್ರತಿಭೆಯನ್ನು ಸೂಚಿಸುತ್ತದೆ. ಇಡೀ ದೇಶವೇ ಈ ಜಿಲ್ಲೆಯ ಕುರಿತು ಹೆಮ್ಮೆಯಿಂದ ನೋಡುವಷ್ಟು ಕೊಡುಗೆಗಳನ್ನು ಈ ಐವರು ನೀಡಿದ್ದಾರೆ. ಎಷ್ಟೋ ಜಿಲ್ಲೆಗಳಿಗೆ ಇಂತಹ ಅವಕಾಶವೇ ಸಿಕ್ಕಿರಲಿಲ್ಲ. ದ.ಕ. ಜಿಲ್ಲೆಯ ಪಕ್ಕದ ಈಗಿನ ಕೊಡಗು ಜಿಲ್ಲೆ 1956ರ ವರೆಗೆ ಒಂದು ರಾಜ್ಯವೇ ಆಗಿತ್ತು. ಕೊಡಗಿನ ಸಿ.ಎಂ. ಪೂಣಚ್ಚ ಉಪ್ಪಿನ ಸತ್ಯಾಗ್ರಹಕ್ಕಾಗಿ 1932-33ರಲ್ಲಿ, ಇತರ ಸತ್ಯಾಗ್ರಹಕ್ಕಾಗಿ 1940-41, 42-44ರಲ್ಲಿ ಸೆರೆಮನೆವಾಸ ಅನುಭವಿಸಿದವರು. ಇವರೂ ಕಾನ್‌ಸ್ಟಿಟ್ಯುವೆಂಟ್‌ ಅಸೆಂಬ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರೂ ಚಿಕ್ಕ ಕೊಡಗು ಪ್ರಾಂತ್ಯದ ಏಕೈಕ ಪ್ರತಿನಿಧಿಯಾಗಿದ್ದರು.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next