Advertisement

ಈ ವಾರವೂ ಐದು ಸಿನಿಮಾ ತೆರೆಗೆ

12:37 PM Jul 18, 2019 | Lakshmi GovindaRaj |

ಕನ್ನಡ ಪ್ರೇಕ್ಷಕನಿಗೆ ಪ್ರತಿ ವಾರವೂ ಸಿನಿಹಬ್ಬ. ವಾರಕ್ಕೆ ನಾಲ್ಕು, ಐದು ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಕಳೆದ ವಾರವೂ ಐದು ಚಿತ್ರಗಳು ಪ್ರೇಕ್ಷಕನ ಎದುರು ಬಂದಿದ್ದವು. ಆ ಪೈಕಿ ಯಾವೊಂದು ಚಿತ್ರ ಕೂಡ ಪ್ರೇಕ್ಷಕನನ್ನು ಮೆಚ್ಚುಗೆ ಪಡಿಸಲು ಸಫ‌ಲವಾಗಲಿಲ್ಲ. ಯಥಾ ಪ್ರಕಾರ ಈ ವಾರವೂ ಕೂಡ ಐದು ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬುದು ಈ ಹೊತ್ತಿನ ಸುದ್ದಿ.

Advertisement

ಹೌದು, ಆಷಾಢ ಕಳೆದು ಇನ್ನೇನು ಶ್ರಾವಣ ಮಾಸ ಶುರುವಾಗುತ್ತಿದ್ದಂತೆಯೇ, ಒಂದಷ್ಟು ಸ್ಟಾರ್‌ ಸಿನಿಮಾಗಳ ಅಬ್ಬರ ಶುರುವಾಗಲಿದೆ. ಆ ಗ್ಯಾಪ್‌ನಲ್ಲೇ ಒಂದಷ್ಟು ಹಳಬರ ಹಾಗೂ ಹೊಸಬರ ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿರುವುದು ಸಹಜ ಬೆಳವಣಿಗೆ. ಕಳೆದ ವಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಾರಕ್ಕೆ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುತ್ತಲೇ ಬಂದಿವೆ.

ಹಾಗೆಯೇ, ಜು.19 ರಂದು ಕೂಡ ಐದು ಚಿತ್ರಗಳು ಸಾಲಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಈ ಪೈಕಿ ಹೊಸಬರ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬುದು ವಿಶೇಷ. ಹೌದು, ರಾಧಿಕಾ ಪಂಡಿತ್‌ ಮತ್ತು ನಿರೂಪ್‌ ಭಂಡಾರಿ ಅಭಿನಯದ “ಆದಿಲಕ್ಷ್ಮಿ ಪುರಾಣ’, ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿರುವ “ಸಿಂಗ’ ಚಿತ್ರಗಳು ಬಿಡುಗಡೆಯಾಗುತ್ತಿದ್ದು,

ಈಗಾಗಲೇ ಗುರುತಿಸಿಕೊಂಡಿರುವ ನಟ, ನಟಿಯರ ಚಿತ್ರಗಳ ಜೊತೆಯಲ್ಲಿ ಹೊಸಬರೂ ಬರುತ್ತಿದ್ದಾರೆ. “10ನೇ ತರಗತಿ’ “ಮಳೆಬಿಲ್ಲು’ ಮತ್ತು “ಡಿಜಿಕಿ ಡಿಸೈನ್‌’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇವುಗಳ ಜೊತೆಗೆ ಈ ಹಿಂದೆ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದ “ವಜ್ರಮುಖಿ’ ಚಿತ್ರ ಚಿತ್ರಮಂದಿರಗಳ ಸಮಸ್ಯೆ ಹಿನ್ನೆಲೆಯಲ್ಲಿ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ.

ಅದೂ ಸೇರ್ಪಡೆಯಾಗಿದ್ದರೆ, ಅಲ್ಲಿಗೆ ಈ ವಾರ ಆರು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಕಳೆದ ವಾರ ಐದು. “ಆಪರೇಷನ್‌ ನಕ್ಷತ್ರ’, “ಯಾನ’, “ಫ‌ುಲ್‌ ಟೈಟ್‌ ಪ್ಯಾತೆ’, “ಚಿತ್ರಕಥಾ’ ಮತ್ತು “ಇಂತಿ ನಿಮ್ಮ ಬೈರಾ’ ಚಿತ್ರಗಳು ಬಿಡುಗಡೆಯಾಗಿದ್ದವು. ಬಿಡುಗಡೆಯಾದ ಒಂದೇ ವಾರದಲ್ಲಿ ಈಗ ಪುನಃ ಐದು ಚಿತ್ರಗಳು ಬಿಡುಗಡೆಯಾಗುತ್ತಿವೆ.

Advertisement

ಮದ್ವೆ ಬಳಿಕ ರಾಧಿಕಾ ಪಂಡಿತ್‌ ಸಿನ್ಮಾ: ಮದುವೆ ನಂತರ ರಾಧಿಕಾ ಪಂಡಿತ್‌ ಒಪ್ಪಿಕೊಂಡು ಸಿನಿಮಾ “ಆದಿಲಕ್ಷ್ಮೀ ಪುರಾಣ’. ಈ ಚಿತ್ರವನ್ನು ಪ್ರಿಯಾ ನಿರ್ದೇಶನ ಮಾಡಿದರೆ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣವಿದೆ. ನಿರೂಪ್‌ ಭಂಡಾರಿ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅನೂಪ್‌ ಭಂಡಾರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಪ್ರೀತಾ ಛಾಯಾಗ್ರಹಣವಿದೆ. ಇದೊಂದು ಯೂಥ್‌ ಸಬ್ಜೆಕ್ಟ್ ಆಗಿದ್ದು, ರಾಧಿಕಾ ಪಂಡಿತ್‌ ಅವರಿಲ್ಲಿ, ಲವಲವಿಕೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಾಡು, ಟ್ರೇಲರ್‌ಗೆ ಮೆಚ್ಚುಗೆ ಸಿಕ್ಕಿದ್ದು, ಚಿತ್ರ ಬಿಡುಗಡೆಯಾಗುತ್ತಿದೆ.

ಶ್ಯಾನೆ ಟಾಪ್‌ ಹುಡುಗಿ ಜೊತೆ ಸಿಂಗ: ಚಿರಂಜೀವಿ ಸರ್ಜಾ ಅಭಿನಯದ “ಸಿಂಗ’ ಚಿತ್ರದಲ್ಲಿ ಅದಿತಿ ಪ್ರಭುದೇವ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಉದಯ್‌ ಮೆಹ್ತಾ ನಿರ್ಮಾಪಕರು. ಈಗಾಗಲೇ ಚಿತ್ರದ “ಶ್ಯಾನೆ ಟಾಪಾಗವ್ಳೆ ನಮ್‌ ಹುಡುಗಿ..’ ಹಾಡು ಜೋರು ಸುದ್ದಿ ಮಾಡಿದೆ. ಪಕ್ಕಾ ಮಾಸ್‌ ಸಿನಿಮಾ ಆಗಿರುವ “ಸಿಂಗ’ ಚಿತ್ರವನ್ನು ವಿಜಯ್‌ ಕಿರಣ್‌ ನಿರ್ದೇಶನ ಮಾಡಿದ್ದಾರೆ.

ನೈಜ ಘಟನೆ ಸ್ಫೂರ್ತಿ ಪಡೆದ ಕಥೆ: ಬಹುತೇಕ ಹೊಸಬರೇ ಸೇರಿ ಮಾಡಿರುವ “10ನೇ ತರಗತಿ’ ಚಿತ್ರ, ನೈಜ ಘಟನೆ ಸ್ಫೂರ್ತಿ ಪಡೆದ ಕಥೆ. “10ನೇ ತರಗತಿ’ಯ ಹುಡುಗರಲ್ಲಿ ತಾನು ಡಾಕ್ಟರ್‌ ಆಗಬೇಕು, ಇಂಜಿನಿಯರ್‌ ಆಗಬೇಕು, ಪೊಲೀಸ್‌ ಆಗಬೇಕು ಹೀಗೆ… ಜೀವನದಲ್ಲಿ ಮುಂದೇನಾಗಬೇಕು ಎನ್ನುವ ಬಗ್ಗೆ ಹತ್ತಾರು ಕನಸುಗಳಿರುತ್ತವೆ. ಇದರ ನಡುವೆಯೇ, ಅವರಲ್ಲಿ ಒಂದು ನವಿರಾದ ಪ್ರೀತಿ – ಸ್ನೇಹ ಕೂಡ ಮನಸ್ಸಿನಲ್ಲಿ ಮೂಡಿರುತ್ತದೆ.

ಇಂತಹ ವಿಷಯಗಳ ಸುತ್ತ “10ನೇ ತರಗತಿ’ ಚಿತ್ರ ನಡೆಯುತ್ತದೆ. ಮಹೇಶ್‌ ಸಿಂಧುವಳ್ಳಿ ನಿರ್ದೇಶನವಿದೆ. ರುದ್ರಿರಿಕ್‌ ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ತೇಜಸ್‌, ಅಂಜಲಿ, ಶಿವು ಚಾವಡಿ, ರಾಜಶೇಖರ್‌, ಪುಟ್ಟರಾಜು, ಜಗದೀಶ್‌, ಭವ್ಯ ಮುಂತಾದ ನವ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಸೆಂದಿಲ್‌ ಕುಮಾರ್‌, ಎಸ್‌. ನಿರೀಕ್ಷಿತ್‌ ಛಾಯಾಗ್ರಹಣವಿದೆ. ಮಂಜುನಾಥ್‌ ನಿರ್ಮಿಸಿದ್ದಾರೆ.

ಕಲರ್‌ಫ‌ುಲ್‌ ಮಳೆಬಿಲ್ಲು: “ಮಳೆಬಿಲ್ಲು’ ಚಿತ್ರದಲ್ಲಿ ಎಲ್ಲರಿಗೂ ಹೊಸ ಅನುಭವ. ನಾಯಕಿ ಸಂಜನಾ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಕಾಲಿಟ್ಟರು. ಈಗ ಅವರು ಸ್ಟಾರ್‌ ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ. ಇನ್ನು “ಮಳೆಬಿಲ್ಲು ‘ ಚಿತ್ರವನ್ನು ನಾಗರಾಜ್‌ ಹಿರಿಯೂರು ನಿರ್ದೇಶನ ಮಾಡುತ್ತಿದ್ದಾರೆ. ಶರತ್‌ ಹೀರೋ ಆಗಿ ನಟಿಸಿದ್ದಾರೆ. ನಿಂಗಪ್ಪ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿದೆ. ನಾಯಕಿ ಸಂಜನಾ ಈ ಚಿತ್ರದಲ್ಲಿ ಭಾರ್ಗವಿ ಪಾತ್ರ ಮಾಡಿದ್ದು, ಅದೊಂದು ರೀತಿಯ ಗಂಡುಬೀರಿಯಂತಹ ಪಾತ್ರವಂತೆ.

ಹಳ್ಳಿ ಹೈದನ ಡಿಚ್ಕಿ ಡಿಸೈನ್‌: ಕನ್ನಡದಲ್ಲಿ ಈಗಾಗಲೇ ತರಹೇವಾರಿ ಶೀರ್ಷಿಕೆ ಇರುವ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ “ಡಿಚ್ಕಿ ಡಿಸೈನ್‌’ ಚಿತ್ರ ಸೇರಿದೆ.ಉಪೇಂದ್ರ ಅಭಿಮಾನಿ ರಣಚಂದು ಈ ಚಿತ್ರ ಮಾಡಿದ್ದಾರೆ. ಅವರೇ ಹೀರೋ, ಅವರೇ ನಿರ್ದೇಶಕರು. ಅವರಿಗೆ ನಾಯಕಿಯಾಗಿ ನಿಮಿಕಾ ರತ್ನಾಕರ್‌ ಜೋಡಿಯಾಗಿದ್ದಾರೆ. ಉಳಿದಂತೆ ನಟನ ಪ್ರಶಾಂತ್‌, ಸುಕೇಶ್‌, ರವಿ, ಮನೋಹರ್‌ ಗೌಡ ಇತರರು ನಟಿಸಿದ್ದಾರೆ. ಬೆಂಗಳೂರು ನೋಡಲು ಬರುವ ಹಳ್ಳಿ ಹುಡುಗನೊಬ್ಬ ಏನೇನು ಸಮಸ್ಯೆ ಎದುರಿಸುತ್ತಾನೆ ಎಂಬುದು ಕಥೆ. ಚಿತ್ರಕ್ಕೆ ಎಸ್‌. ಸಾಮ್ರಾಟ್‌ ಛಾಯಾಗ್ರಹಣವಿದೆ. ಸುರೇಶ್‌ ಆರ್ಮುಗಂ ಸಂಕಲನ ಮಾಡಿದ್ದಾರೆ. ಕಾರ್ತಿಕ್‌ ಚೆನ್ನೋಜಿ ರಾವ್‌, ರೋಣದ ಬಕ್ಕೇಶ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next