ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ಹಾಗೂ ಮಂಗಳೂರು ಏರ್‌ಪೋರ್ಟ್ ರೋಡ್‌ನಲ್ಲಿ ರಾತ್ರಿ ಹೊತ್ತು ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದ ಐವರು ಕುಖ್ಯಾತ ಆರೋಪಿಗಳನ್ನು ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಮತ್ತವರ ತಂಡದವರು ರವಿವಾರ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಬಂಧಿಸಿದ್ದಾರೆ.
ಪುತ್ತೂರಿನ ಆರ್ಯಾಪು ಗ್ರಾಮದ ರವಿಕುಮರ್(24), ಕೇರಳದ ಮಂಜೇಶ್ವರ ಕುಂಜತ್ತೂರಿನ ಖಲೀಲ್ ಕೆ. ಯಾನೆ ಕಲ್ಲು (27), ಕುಂಜತ್ತೂರಿನ ರಾಜೇಶ್ ಕೆ. (30), ಬಂಗ್ರಮಂಜೇಶ್ವರದ ಅಝೀಮ್‌ಯಾನೆ ಮೊಹಮದ್ ಅಝೀಮ್ (23), ಕುಂಜತ್ತೂರಿನ ಜಾಬೀರ್ ಅಬ್ಟಾಸ್ ಯಾನೆ ಜಾಬೀರ್ (24) ಬಂಧಿತರು. ಇವರೆಲ್ಲರೂ ಹಳೆ ಆರೋಪಿಗಳು.
ಅವರು ರಾತ್ರಿ ಹೊತ್ತು ಕೇರಳ ಕಡೆಯಿಂದ ಮಂಗಳೂರಿಗೆ ಬರುವ ಹಾಗೂ ಮಂಗಳೂರು ವಿಮಾನ ನಿಲ್ದಾಣ ಕಡೆಗೆ ಕಾರುಗಳಲ್ಲಿ ತೆರಳುವ ಪ್ರಯಾಣಿಕರನ್ನು ತಡೆದು ನಿಲ್ಲಿಸಿ ಚಿನ್ನಾಭರಣ, ಸೊತ್ತು ಲೂಟಿ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಲು ಉದ್ದೇಶಿಸಿದ ತಲವಾರು, ಕಬ್ಬಿಣದ ರಾಡ್, ಮೆಣಸಿನ ಹುಡಿ, ಚೂರಿ ಹಾಗೂ ಮಾರುತಿ ಸ್ವಿಫ್ಟ್ ಕಾರು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ರಾಜೇಶ್, ಜಾಬಿರ್, ಖಲೀಲ್ ಅವರು ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಜ್ವಲ್ ಎಂಬಾತನ ಕೊಲೆಯತ್ನ ಪ್ರಕರಣದ ಆರೋಪಿಗಳು. ರವಿಕುಮಾರ್ ಮೇಲೆ ಪುತ್ತೂರು ನಗರ, ಮಂಜೇಶ್ವರ, ಮಂಗಳೂರಿನ ಬರ್ಕೆ ಠಾಣೆಗಳಲ್ಲಿ ಗಾಂಜಾ, ಕಳವು, ಹಲ್ಲೆಗೆ ಸಂಬಂಧಿಸಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ. ಖಲೀಲ್ ಮೇಲೆ ಒಟ್ಟು 3, ರಾಜೇಶ್ ಮೇಲೆ 3 ಪ್ರಕರಣಗಳಿವೆ. ಕೇರಳದಿಂದ ಅಕ್ರಮ ಗಾಂಜಾ ದಂಧೆ ನಡೆಸಲು ಪ್ರಯತ್ನಿಸುತ್ತಿದ್ದರು
ಎನ್ನಲಾಗಿದೆ. ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶದಲ್ಲಿ, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೆ. ರಾಮರಾವ್ ನೇತೃತ್ವದಲ್ಲಿ ಉಳ್ಳಾಲ ಇನ್ಸ್‌ಪೆ³ಕ್ಟರ್ ಗೋಪಿಕೃಷ್ಣ, ಎಸ್‌ಐ ರಾಜೇಂದ್ರ ಕಾರ್ಯಾಚರಣೆ ನಡೆಸಿದ್ದರು.
ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಹೆಡ್ ಕಾನ್‌ಸ್ಟೆಬಲ್‌ಗಳಾದ ಮೋಹನ್, ರಾಜಾರಾಮ, ಶರೀಫ್, ಮಹಮ್ಮದ್ ಇಕ್ಬಾಲ್, ಸುನಿಲ್ ಕುಮಾರ್, ದಾಮೋದರ, ಸುಧೀರ್, ಗಿರೀಶ್, ದಯಾನಂದ, ರೆಜಿ ಮತ್ತು ರವಿಚಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.