ಕಾಸರಗೋಡು: ಕಾಸರಗೋಡಿನ ಮೀನುಗಾರಿಕಾ ಹಾರ್ಬರ್ ನಿರ್ಮಾಣವನ್ನು ಕೂಡಲೇ ಪೂರ್ತಿಗೊಳಿಸಿ ಅದನ್ನು ತೆರೆದುಕೊಡಬೇಕೆಂದು ಒತ್ತಾಯಿಸಿ ಕೇರಳ ಫಿಶರೀಸ್ ಸಚಿವರಿಗೆ ಮನವಿ ಸಲ್ಲಿಸುವ ಸಲುವಾಗಿ ಭಾರತೀಯ ಮತ್ಸ್ಯ ಕಾರ್ಮಿಕ ಸಂಘ (ಬಿಎಂಎಸ್)ನ ನೇತೃತ್ವದಲ್ಲಿ ಕಾಸರಗೋಡು ಕಸಬಾ ಕಡಪ್ಪುರದಲ್ಲಿ ಮತ್ಸ್ಯ ಕಾರ್ಮಿಕರು ಸಹಿ ಸಂಗ್ರಹ ನಡೆಸಿದರು.
ಕಾಸರಗೋಡಿನಲ್ಲಿ ಮೀನುಗಾರಿಕಾ ಹಾರ್ಬರ್ ನಿರ್ಮಿಸುವ ಸಲುವಾಗಿ 2010ರಲ್ಲಿ ಕಾಮಗಾರಿ ಕಾರ್ಯಾರಂಭಗೊಂಡು ಹತ್ತು ವರ್ಷ ಕಳೆದಿದ್ದರೂ ಇದುವರೆಗೆ ಅದು ಪೂರ್ತಿಗೊಂಡಿಲ್ಲ. ಸಾವಿರಾರು ಮಂದಿ ಮತ್ಸ್ಯ ಕಾರ್ಮಿಕರಿಗೆ ಉಪಯುಕ್ತವಾಗಬಹುದಾಗಿದ್ದ ಹಾರ್ಬರ್ ಕೆಲವು ಸ್ಥಾಪಿತ ಹಿತಾಸಕ್ತಿಗಳ ನಿಗೂಢ ಕೈವಾಡದಿಂದಾಗಿ ಇಂದು ಕಾಮಗಾರಿ ಪೂರ್ತಿಗೊಳ್ಳದೆ ಕೋಟ್ಯಾಂತರ ರೂಪಾಯಿ ವ್ಯಯಿಸಿ ಪ್ರಾರಂಭಿಸಿದ ಕಾಮಗಾರಿಯು ಅರ್ಧದಲ್ಲಿಯೇ ಸ್ಥಗಿತಗೊಂಡಿದೆ.
2010ರ ನಂತರ ಜಿಲ್ಲೆಯ ಹಲವೆಡೆ ಪ್ರಾರಂಭಿಸಿದ ಹಲವು ಹಾರ್ಬರ್‌ಗಳ ನಿರ್ಮಾಣವು ಈಗಾಗಲೇ ಪೂರ್ತಿಗೊಂಡು ಉದ್ಘಾಟನೆಗೊಂಡಿದೆ. ಕಾಸರಗೋಡು ಕಡಪ್ಪುರದಲ್ಲಿ ಕಾರ್ಯಾವೆಸಗುವ ಸಾವಿರಾರು ಮತ್ಸ್ಯ ಕಾರ್ಮಿಕರು ಜಿಲ್ಲೆಯ ಹೊರಗಡೆ ಹಾಗೂ ಇತರ ರಾಜ್ಯಗಳಿಗೆ ತೆರಳಿ ಮೀನುಗಾರಿಕೆ ನಡೆಸುತ್ತಿದ್ದಾರೆ. ನಿರ್ಮಾಣ ಕಾಮಗಾರಿಯ ಮುಕ್ಕಾಲು ಭಾಗವು ನಡೆದಿದ್ದರೂ ಕಾಮಗಾರಿ ಪೂರ್ತಿಗೊಳಿಸಿ ತೆರೆದು ಕೊಡಲು ಸಾಧ್ಯವಾಗದಿರುವುದು ಅಧಿಕಾರಿಗಳ ಅನಾಸ್ಥೆಯೇ ಕಾರಣವಾಗಿದೆ. ಅದುದರಿಂದ ಇದನ್ನು ಕೂಡಲೇ ಪೂರ್ತಿಗೊಳಿಸಿ ಅದನ್ನು ತೆರೆದು ಕೊಡಬೇಕೆಂದು ಒತ್ತಾಯಿಸಿ ಸಹಿಯನ್ನೊಳಗೊಂಡ ಮನವಿಯನ್ನು ಕೇರಳ ಫಿಶರೀಸ್ ಸಚಿವರಿಗೆ ಮನವಿಯನ್ನು ಸಲ್ಲಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಎರಡನೇ ಹಂತದ ಕೋವಿಡ್ ತಡೆಗೆ ಯತ್ನ: ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ
ಕಾರ್ಯಕ್ರಮದಲ್ಲಿ ಭಾರತೀಯ ಮತ್ಸ್ಯ ಕಾರ್ಮಿಕ ಸಂಘ (ಬಿಎಂಎಸ್)ನ ಕಾಸರಗೋಡು ಜಿಲ್ಲಾಧ್ಯಕ್ಷ ರಮೇಶ್, ಕಸಬ ಕಾರ್ಯದರ್ಶಿ ಆರ್.ಶರತ್, ಬಿಎಂಎಸ್ ಕಾಸರಗೋಡು ಮುನ್ಸಿಪಲ್ ಸಮಿತಿ ಅಧ್ಯಕ್ಷ ಬಾಲಕೃಷ್ಣನ್ ನೆಲ್ಲಿಕುನ್ನು, ಕಾರ್ಯದರ್ಶಿ ಶಿವನ್ ತಾಳಿಪಡ್ದು, ಹರೀಶ್ ಕಡಪ್ಪುರ, ಕೆ.ಎ.ಜನಾರ್ದನನ್ ಮತ್ತಿತರರು ಉಪಸ್ಥಿತರಿದ್ದರು.