Advertisement

Fishing; ಕಡಲಿನಲ್ಲಿ ಮತ್ಸ್ಯಕ್ಷಾಮ; ಬೋಟುಗಳೆಲ್ಲ ಖಾಲಿ ಖಾಲಿ

01:16 AM Jan 31, 2024 | Team Udayavani |

ಮಂಗಳೂರು/ ಮಲ್ಪೆ: ಸಮುದ್ರದಲ್ಲಿ ಮತ್ತೆ ಮತ್ಸ್ಯಕ್ಷಾಮ ಉಂಟಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮೀನು ಲಭ್ಯವಾಗದ ಕಾರಣದಿಂದ ಮೀನುಗಾರಿಕೆಗೆ ತೆರಳಿದ ಬೋಟುಗಳು ಬರಿಗೈಲಿ ವಾಪಸಾಗುವಂತಾಗಿದೆ.
ಈ ಹಿನ್ನೆಲೆಯಲ್ಲಿ ಬಹುತೇಕ ಬೋಟುಗಳು ದಕ್ಕೆಯಲ್ಲೇ ಲಂಗರು ಹಾಕತೊಡಗಿವೆ. ಇದರಿಂದ ಕೋಟ್ಯಂತರ ರೂಪಾಯಿ ಬಂಡವಾಳ ಸುರಿದು ನಡೆಸುವ ಮೀನುಗಾರಿಕೆಗೆ ಭಾರೀ ಹೊಡೆತ ಬಿದ್ದಿದೆ. ಇದೇ ಸಂದರ್ಭದಲ್ಲಿ ಇದರ ಪರಿಣಾಮ ಮತ್ಸ್ಯ ಖಾದ್ಯ ಪ್ರಿಯರಿಗೂ ತಟ್ಟತೊಡಗಿದೆ.

Advertisement

ಮಂಗಳೂರಿನಲ್ಲಿ ಶೇ. 80-90ರಷ್ಟು ಮತ್ತು ಉಡುಪಿಯಲ್ಲಿ ಶೇ. 50ರಷ್ಟು ಬೋಟುಗಳು ಲಂಗರು ಹಾಕಿವೆ. ಸದ್ಯ ಕೆಲವು ಆಳ ಸಮುದ್ರ ಟ್ರಾಲ್‌ ಬೋಟ್‌ಗಳಷ್ಟೇ ಮೀನಿನ ನಿರೀಕ್ಷೆಯಲ್ಲಿ ಸಮುದ್ರಕ್ಕೆ ತೆರಳುತ್ತಿವೆ. ಅವುಗಳಿಗೂ ಪೂರ್ಣ ಯಶಸ್ಸು ಸಿಗುತ್ತಿಲ್ಲ.

ಯಥೇತ್ಛ ಮೀನು ಲಭಿಸುವುದರೊಂದಿಗೆ ಈ ಬಾರಿಯ ಮೀನುಗಾರಿಕೆ ಋತು ಉತ್ತಮವಾಗಿ ಆರಂಭವಾಗಿತ್ತು. ಆದರೆ 2 – 3 ತಿಂಗಳು ಕಳೆಯುತ್ತಲೇ ಮೀನಿನ ಕೊರತೆ ಉದ್ಭವಿಸಿ, ಮೀನಿಗೆ ಬರ ಬಂದಂತಾಗಿದೆ. ಪಾಂಪ್ರಟ್‌, ಬಂಗುಡೆ, ಅಂಜಲ್‌, ಬೊಂಡಸ್‌ ಸೇರಿದಂತೆ ಉತ್ತಮ ಜಾತಿಯ ಮೀನುಗಳು ಮಾರುಕಟ್ಟೆಯಲ್ಲಿ ಸಿಗದಂತಾಗಿದೆ. ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಲಭಿಸಿದರೂ ತೀರಾ ದುಬಾರಿ ಎನ್ನುತ್ತಾರೆ ಮೀನುಗಾರ ಮುಖಂಡರು.

ಮತ್ಸ್ಯಕ್ಷಾಮಕ್ಕೆ ಕಾರಣ?
ಮೀನುಗಾರಿಕೆಯಲ್ಲಿ ಅನುಸರಿ ಸುತ್ತಿರುವ ಕೆಲವು ಅವೈಜ್ಞಾನಿಕ ಕ್ರಮಗಳೇ ಮತ್ಸ್ಯ ಸಂತತಿ ಕಡಿಮೆಯಾಗಲು ಕಾರಣ ಎನ್ನುವ ಆರೋಪ ಮೀನುಗಾರ ಮುಖಂಡರದ್ದು. ಮಳೆಗಾಲದ 3 ತಿಂಗಳು ಇದ್ದ ಮೀನುಗಾರಿಕೆ ನಿಷೇಧವನ್ನು 60 ದಿನಗಳಿಗೆ ಇಳಿಸಲಾಗಿದೆ. ಹಾಗಾಗಿ ಮೀನು ಮರಿಗಳು ಬಲಿಯುವ ಮೊದಲೇ ಬಲೆಗೆ ಬೀಳುತ್ತಿವೆ. ಬುಲ್‌ಟ್ರಾಲಿಂಗ್‌ ಮೂಲಕ ಸಣ್ಣ ದೊಡ್ಡ ಭೇದವಿಲ್ಲದೆ ವಿವಿಧ ಜಾತಿಯ ಟನ್‌ಗಟ್ಟಲೆ ಮೀನುಗಳನ್ನು ಹಿಡಿಯುತ್ತಿರುವುದೂ ಮತ್ಸ್ಯ ಸಂಕುಲದ ನಾಶಕ್ಕೆ ಕಾರಣ. ಜತೆಗೆ ನಿಷೇಧದ ಮಧ್ಯೆಯೂ ಲೈಟ್‌ಫಿಶಿಂಗ್‌ ರಾಜಾರೋಷವಾಗಿ ನಡೆಯುತ್ತಿದೆ. ಜತೆಗೆ ಪ್ರಕೃತಿ ವೈಪರೀತ್ಯ, ಬಿಸಿಲ ತಾಪದಿಂದ ನೀರು ಬಿಸಿಯಾಗುವುದರಿಂದ ಮೀನುಗಳು ತಂಪನ್ನರಸಿ ಸಮುದ್ರದಾಳಕ್ಕೆ ತೆರಳುತ್ತಿರುವುದೂ ಮೀನುಗಳ ಕೊರತೆಗೆ ಕಾರಣ ಎನ್ನುತ್ತಾರೆ ಮಲ್ಪೆ ಆಳಸಮುದ್ರ ಬೋಟು ಮಾಲಕರ ಸಂಘದ ಅಧ್ಯಕ್ಷ ಸುಭಾಸ್‌ ಮೆಂಡನ್‌.

ಕಾಯ್ದೆಗೆ ತಿದ್ದುಪಡಿಯಾಗಲಿ
ಮಲ್ಪೆ, ಮಂಗಳೂರು ಸಹಿತ ರಾಜ್ಯದ ಮೀನುಗಾರರು ಕೇರಳ, ಗೋವಾ, ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಗಡಿದಾಟಿದರೆ ಸುಮಾರು 5 ಲಕ್ಷ ರೂ. ದಂಡ ವಿಧಿಸಲಾಗುತ್ತಿದೆ. ಆದರೆ ಬೇರೆ ರಾಜ್ಯದ ಮೀನುಗಾರರು ನಮ್ಮ ಕರಾವಳಿಯಲ್ಲಿ ಮುಕ್ತವಾಗಿ ಮೀನು ಹಿಡಿಯುತ್ತಾರೆ. ಕರ್ನಾಟಕ ವಿಧಿಸಿದ 1984 ರ ಕಾಯಿದೆ ತಿದ್ದುಪಡಿಯಾಗಬೇಕು ಎಂದು ಆಗ್ರಹಿಸುತ್ತಾರೆ ಮೀನುಗಾರರಾದ ಕೃಷ್ಣ ಎಸ್‌. ಸುವರ್ಣ.

Advertisement

ಏರುತ್ತಲೇ ಇದೆ ಮೀನಿನ ದರ
ಕೆ.ಜಿ.ಗೆ 100 ರೂ. ಆಸುಪಾಸಿನಲ್ಲಿದ್ದ ಬಂಗುಡೆ ಮೀನಿನ ದರ ಪ್ರಸ್ತುತ 250 ರೂ. ಗೆ ತಲುಪಿದೆ. ಬೂತಾಯಿಗೆ 150 ರೂ., ಕಲ್ಲೂರು 200 ರೂ., ಸಿಗಡಿ 300ರಿಂದ 600 ರೂ., ಪಾಂಫ್ರೆಟ್‌ 600 ರೂ., ಅಂಜಲ್‌ 700 ರೂ., ಕಾಣೆ 350 ರೂ., ಕೊಡ್ಡೆ 350 ರೂ. ಇದೆ. (ಪ್ರದೇಶವಾರು ಭಿನ್ನವಿದೆ). ಹೊರ ರಾಜ್ಯಗಳಿಂದ ಬರುವ ಮೀನಿನ ದರವೂ ದುಪ್ಪಟ್ಟಾಗಿದೆ.

ಮೀನಿನ ಅಲಭ್ಯತೆಯಿಂದ ದೋಣಿಗಳು ದಕ್ಕೆಯಲ್ಲಿ ಲಂಗರು ಹಾಕಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ. ಈ ಬಾರಿ ಮಳೆ ಕಡಿಮೆಯಾಗಿ ಸಮುದ್ರ ಸೇರುವ ಸಿಹಿನೀರಿನ ಪ್ರಮಾಣವೂ ಕಡಿಮೆಯಾಗಿದ್ದೂ ಮತ್ಸ್ಯಕ್ಷಾಮಕ್ಕೆ ಕಾರಣವಾಗಿರಬಹುದು.
– ಸಿದ್ದಯ್ಯ ಡಿ. ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ

ಯೆಥೇತ್ಛ ಮೀನು ಲಭ್ಯವಾದಾಗ ಸಂರಕ್ಷಿಸಿ ಇಡಲು ರಾಜ್ಯದ ಎಲ್ಲ ಬಂದರುಗಳಲ್ಲಿ ಶೀತಲೀಕರಣ ಘಟಕ ಸ್ಥಾಪನೆಗೆ ಸರಕಾರದ ಮಟ್ಟದಲ್ಲಿ ಯೋಜನೆ ರೂಪಿಸಬೇಕಿದೆ. ಮೀನುಗಾರರೆಲ್ಲರೂ ಸುಸ್ಥಿರ ಮೀನುಗಾರಿಕೆಯ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಇಲ್ಲದಿದ್ದರೆ ಈ ಕ್ಷೇತ್ರ ನಾಶವಾಗಲಿದೆ.
– ಡಾ| ಶಿವ ಕುಮಾರ್‌ ಹರಗಿ
ಸಹಾಯಕ ಪ್ರಾಧ್ಯಾಪಕರು, ಕಡಲಶಾಸ್ತ್ರ ವಿಭಾಗ, ಕಾರವಾರ

ಕರ್ನಾಟಕ ಸೇರಿದಂತೆ ಎಲ್ಲ ಕರಾವಳಿ ರಾಜ್ಯದ ಮೀನುಗಾರಿಕೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಂಸದರು, ಶಾಸಕರು ಮೀನುಗಾರ ಮುಖಂಡರು ಸಭೆ ನಡೆಸಿ ಸಮನ್ವಯ ಸಮಿತಿ ರಚಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಈ ನಿಟ್ಟಿನಲ್ಲಿ ಕರಾವಳಿಯ ಎಲ್ಲ ಅಧಿಕಾರಿಗಳು ಸರಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
– ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

ಭರತ್‌ ಶೆಟ್ಟಿಗಾರ್‌/ ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next