Advertisement

ಮಲ್ಪೆಯಲ್ಲಿ ನಾಡದೋಣಿ ಅವಘಡ : ಇಬ್ಬರು ಮೀನುಗಾರರು ಸಮುದ್ರಪಾಲು

04:00 AM Jul 26, 2018 | Team Udayavani |

ಮಲ್ಪೆ: ಸಾಂಪ್ರದಾಯಿಕ ಮೀನುಗಾರಿಕೆಯ ನಾಡದೋಣಿ ಮುಳುಗಿ ಇಬ್ಬರು ಮೀನುಗಾರರು ಸಮುದ್ರಪಾಲಾದ ಘಟನೆ ಮಲ್ಪೆ ಪಡುಕರೆ ಶನೀಶ್ವರ ಪೂಜಾ ಮಂದಿರ ಸಮೀಪದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಉದ್ಯಾವರ ಪಿತ್ರೋಡಿಯ ಶೇಖರ ಸಾಲ್ಯಾನ್‌ ಆವರ ಪುತ್ರ ನಿತೇಶ್‌ ಸಾಲ್ಯಾನ್‌ (28) ಮತ್ತು ಸುರೇಶ್‌ ಕೋಟ್ಯಾನ್‌ ಅವರು ಪುತ್ರ ನಿಶಾಂತ್‌ ತಿಂಗಳಾಯ (19) ಸಮುದ್ರ ಪಾಲಾದವರು. ಗಂಭೀರ ಸ್ಥಿತಿಯಲ್ಲಿದ್ದ ತೊಟ್ಟಂ ಸಮೀಪದ ರಾಜೇಶ್‌ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿತೇಶ್‌ ಅವರ ಮೃತದೇಹ ಘಟನೆ ಸಂಭವಿಸಿದ ಅಲ್ಪ ಸಮಯದ ಬಳಿಕ ಸುಮಾರು 200 ಮೀ. ದೂರದಲ್ಲಿ ಪತ್ತೆಯಾಗಿದೆ. ನಿಶಾಂತ್‌ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

Advertisement

ಬುಧವಾರ ಬೆಳಗ್ಗೆ 7 ಗಂಟೆ ವೇಳೆಗೆ ಮಧುಕರ ಅವರ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ತೀರದಿಂದ 500 ಮೀ. ದೂರದಲ್ಲಿರುವಾಗ ದೊಡ್ಡ ಅಲೆಗಳು ಬಡಿದು ದೋಣಿ ಮಗುಚಿತು. ತತ್‌ ಕ್ಷಣ ಜತೆಯಲ್ಲಿದ್ದವರು ಕೆಲವರನ್ನು ರಕ್ಷಿಸಿದ್ದರು. ಈ ಇಬ್ಬರು ಅಲೆಗಳಲ್ಲಿ ಕೊಚ್ಚಿಹೋದರು.

ಆಳೆತ್ತರದ ಅಲೆಗಳು
ಮಳೆಗಾಲದ ಆರಂಭದಿಂದಲೂ ನಿರಂತರವಾಗಿ ಬೀಸುತ್ತಿರುವ ಗಾಳಿ- ಮಳೆಯಿಂದ ಸಮುದ್ರ ಪ್ರಕ್ಷುಬ್ಧವಾಗಿಯೇ ಇದೆ. ಮೂರು ದಿನಗಳ ಹಿಂದೆಯೂ ಸಮುದ್ರದಲೆಗೆ ಸಿಲುಕಿ ನಾಡದೋಣಿ ಮಗುಚಿ ಸಣ್ಣಪುಟ್ಟ ಅವಘಡಗಳು ಸಂಭವಿಸಿದ್ದವು.

ಗರಿಷ್ಠ ಪರಿಹಾರ ಭರವಸೆ
ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ನೀಡಿದ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರು ಕೇಂದ್ರ ಮತ್ತು ರಾಜ್ಯ ಪ್ರಕೃತಿ ವಿಕೋಪ ಅನುದಾನದಡಿ ಗರಿಷ್ಠ ಮೊತ್ತದ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಡಿವೈಎಸ್ಪಿ ಕುಮಾರಸ್ವಾಮಿ, ಮಲ್ಪೆ ಠಾಣಾಧಿಕಾರಿ ಮಧು ಬಿ.ಇ. ಭೇಟಿ ನೀಡಿದ್ದಾರೆ.

ಅಕ್ಕಪಕ್ಕದ ಮನೆಯವರು
ನಿತೇಶ್‌ ಸಾಲ್ಯಾನ್‌ ಮತ್ತು ನಿಶಾಂತ್‌ ತಿಂಗಳಾಯ ಅವರ ಮನೆ ಪಿತ್ರೋಡಿ ಯಶಸ್ವಿ ಫಿಶ್‌ ಮೀಲ್‌ ಬಳಿ ಅಕ್ಕಪಕ್ಕದಲ್ಲಿವೆ. ಆತ್ಮಿಯ ಗಳೆಯರಾಗಿದ್ದ ಅವರು ಪಿತ್ರೋಡಿಯ ವೆಂಕಟರಮಣ ಕ್ರಿಕೆಟ್‌ ತಂಡದಲ್ಲಿದ್ದು ಉತ್ತಮ ಕ್ರಿಕೆಟ್‌ ಆಟಗಾರರೂ ಆಗಿದ್ದರು.

Advertisement

5 ತಿಂಗಳ ಹಿಂದೆ ಮದುವೆಯಾಗಿದ್ದ ನಿತೇಶ್‌


ವಿದೇಶದಲ್ಲಿ ಉದ್ಯೋಗದಲ್ಲಿದ್ದ ನಿತೇಶ್‌ ಅವರು ಮೂರು ವರ್ಷದ ಹಿಂದೆ ತನ್ನ  ತಮ್ಮ ಬೈಕ್‌ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಊರಿಗೆ ಬಂದು ನೆಲೆಸಿದ್ದರು. 5 ತಿಂಗಳ ಹಿಂದೆ ಅವರಿಗೆ ಮದುವೆಯಾಗಿತ್ತು. ಮನೆಯಲ್ಲಿ ತಂದೆ-ತಾಯಿ, ಪತ್ನಿ ಇದ್ದು ತಂಗಿಗೆ ಮದುವೆಯಾಗಿದೆ. ಜೀವನೋಪಾಯಕ್ಕೆ ಮಲ್ಪೆ ಮೀನುಗಾರಿಕೆ ಬಂದರಿನ ಕನ್ನಿಪಾರ್ಟಿ ಒಂದರಲ್ಲಿ ಕೆಲಸವನ್ನು ಮಾಡುತ್ತಿದ್ದರು. ಕುಟುಂಬದ ಎಲ್ಲ  ಜವಾಬ್ದಾರಿ ಅವರ ಮೇಲಿತ್ತು.

ಕುಟುಂಬದ ಆಧಾರವಾಗಿದ್ದ ನಿಶಾಂತ್‌


ನಿಶಾಂತ್‌ ಮಲ್ಪೆಯ ಮೀನು ವ್ಯಾಪಾರ ಸಂಸ್ಥೆಯಲ್ಲಿ ದುಡಿಯುತ್ತಿದ್ದರು. ಅವರದು ಬಡ ಕುಟುಂಬ. ತಂದೆ ಮನೆಯಲ್ಲೇ ಇದ್ದು, ತಾಯಿ ಫಿಶ್‌ ಮೀಲ್‌ ಒಂದರಲ್ಲಿ ಮೀನು ಕಟ್ಟಿಂಗ್‌ ಕೆಲಸಕ್ಕೆ ಹೋಗುತ್ತಿದ್ದಾರೆ. ಮಳೆಗಾಲದಲ್ಲಿ ಜೀವನ ನಿರ್ವಹಣೆಗಾಗಿ ಬೇರೆ ಆದಾಯದ ಮೂಲ ಇಲ್ಲದ್ದರಿಂದ ಕೈರಂಪಣಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದರು. ನಿಶಾಂತ್‌ ಅವರ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next