ಕುಂದಾಪುರ: ಮೀನುಗಾರರ ಹಿತ ಕಾಯುವ ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಸಮ್ಮಿಶ್ರ ಸರಕಾರ ಈಗಾಗಲೇ ಅನುಷ್ಠಾನಕ್ಕೆ ತಂದಿದ್ದು ಇನ್ನಷ್ಟು ಬೇಡಿಕೆಗಳನ್ನು ಇಡಲಾಗಿದೆ. ಇದನ್ನು ಪರಿಹರಿಸುವುದು ದೊಡ್ಡ ವಿಚಾರವೇನಲ್ಲ. ಚುನಾವಣೆ ಬಳಿಕ ಖುದ್ದು ಬಂದು ಸಮಸ್ಯೆ ಆಲಿಸಿ ಪರಿಹರಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಬುಧವಾರ ರಾತ್ರಿ ಇಲ್ಲಿನ ಗಾಂಧಿ ಮೈದಾನದಲ್ಲಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸು ತ್ತಿರುವ ಪ್ರಮೋದ್ ಮಧ್ವರಾಜ್ ಅವರ ಪರವಾಗಿ ಮತಯಾಚಿಸಿ, ಮೀನುಗಾರ ಮಹಿಳೆಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮೀನುಗಾರ ಸಮಾಜದ ಬದುಕು ಸಂಪೂರ್ಣ ಬದಲಿಸುವೆ. ಒಂದು ಅವಕಾಶ ಕೊಟ್ಟುನೋಡಿ. ಜಿ. ಶಂಕರ್ ಅವರು ಅನೇಕ ಬಾರಿ ಮೀನುಗಾರರ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ರೈತರ ಸಾಲ ಮನ್ನಾ ಮಾಡಿದವರಿಗೆ ಮೀನುಗಾರರ ಸಾಲಮನ್ನಾ ದೊಡ್ಡ ಮೊತ್ತವೇನಲ್ಲ. ಮೀನುಗಾರ ಕುಟುಂಬಗಳ ಶಾಶ್ವತ ಅಭಿವೃದ್ಧಿಗೆ ಈಗಾಗಲೇ ಸರಕಾರ ನಿರ್ಧರಿಸಿದೆ. ನಾಪತ್ತೆಯಾದ ಮೀನುಗಾರರ ಪತ್ತೆಗೆ ನಿರಂತರ ಪ್ರಯತ್ನ ಮಾಡಲಾಗಿದೆ. 9 ತಿಂಗಳಲ್ಲಿ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 82 ಕೋ.ರೂ. ವಿತರಿಸಲಾಗಿದೆ. ನಮ್ಮ ಅವಧಿಯಲ್ಲಿ ಕರಾವಳಿಯಲ್ಲಿ ಧಾರ್ಮಿಕ ಸಂಘರ್ಷಕ್ಕೆ ಅವಕಾಶ ನೀಡಲಿಲ್ಲ. ನಾವೂ ಹಿಂದೂಗಳೇ. ವ್ಯಾಮೋಹಕ್ಕೆ ಒಳಗಾಗಿ ಮತ ಚಲಾಯಿಸದೇ ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದರು.
ಸಚಿವೆ ಡಾ| ಜಯಮಾಲಾ, ವ್ಯಕ್ತಿ ಬದಲಾಗಿಲ್ಲ. ಚಿಹ್ನೆ ಮಾತ್ರ ಬದಲು. ವರ್ಷಕ್ಕೆ 2,500 ಮೀನುಗಾರರ ಮನೆ ರಚನೆಗೆ ಅನುದಾನ ನೀಡಲಾಗಿದೆ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಮೀನುಗಾರರ 129 ಕೋ.ರೂ. ಸಾಲಮನ್ನಾ ಕಡತ ಸಿಎಂ ಟೇಬಲ್‌ನಲ್ಲಿದೆ. ಮೀನುಗಾರರಿಗೆ ಕಾಂಗ್ರೆಸ್, ಜೆಡಿಎಸ್ ಅನೇಕ ಯೋಜನೆಗಳನ್ನು ನೀಡಿದ್ದು ಯಶ್‌ಪಾಲ್ ಸುವರ್ಣ, ಸತ್ಯಜಿತ್ ಅವರಿಗೆ ಬಿಜೆಪಿ ಟಿಕೆಟ್ ಯಾಕೆ ನೀಡಲಿಲ್ಲ ಎಂದರು. ಮಾಜಿ ಶಾಸಕ ಯು.ಆರ್. ಸಭಾಪತಿ ಮೀನುಗಾರರ ಬೇಡಿಕೆ ಪಟ್ಟಿ ವಾಚಿಸಿದರು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ವಿ.ಪ. ಸದಸ್ಯ ಎಸ್.ಎಲ್. ಭೋಜೇಗೌಡ, ಜೆಡಿಎಸ್, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಬೇಡಿಗೆ ಸಿಎಂಗೆ ಸಲ್ಲಿಕೆ
ಮೀನುಗಾರರ ವಿವಿಧ ಬೇಡಿಕೆಗಳನ್ನು ಜಯ ಸಿ. ಕೋಟ್ಯಾನ್, ಕೆ.ಕೆ. ಕಾಂಚನ್ ಮುಖ್ಯ ಮಂತ್ರಿಗಳಿಗೆ ನೀಡಿದರು. ನಾಪತ್ತೆಯಾದ ಮೀನುಗಾರರ ಪತ್ತೆ, ಅವರ ಕುಟುಂಬಕ್ಕೆ ಪರಿ ಹಾರ, ಕುಟುಂಬದ ಒಬ್ಬರಿಗೆ ಉದ್ಯೋಗ, ಸಾಲಮನ್ನಾ, ಕರರಹಿತ ಡೀಸೆಲ್ ಮಿತಿ ಏರಿಕೆ, ಮೀನುಗಾರರ ಆಕಸ್ಮಿಕ ಸಾವಿನ ಪರಿಹಾರ ಮೊತ್ತ 10 ಲಕ್ಷಕ್ಕೇರಿಕೆ, ಹೆಜಮಾಡಿ ಬಂದರು ಅಭಿವೃದ್ಧಿಗೆ ಅನು ಮೋದನೆ, ಕೋಡಿ, ಗಂಗೊಳ್ಳಿ ಬಂದರು ಹೂಳೆತ್ತು ವುದು ಸಹಿತ ವಿವಿಧ ಬೇಡಿಕೆ ಇಡಲಾಯಿತು.