ಮಂಗಳೂರು: ರಾಜ್ಯದ ಮೀನುಗಾರರ ಸಂಕಷ್ಟ ನಿಧಿ ಮೊತ್ತವನ್ನು 8 ಲಕ್ಷ ರೂ.ಗಳಿಗೆ ಏರಿಸಲು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸದಸ್ಯ, ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷ ಚೇತನ್ ಬೆಂಗ್ರೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟ ನಿಧಿಯನ್ನು 6 ಲಕ್ಷ ರೂ. ಗಳಿಂದ 8 ಲಕ್ಷ ರೂ.ಗಳಿಗೆ ಏರಿಸಲು ನಿರ್ಧರಿಸಲಾಗಿದೆ. ಹಾಗೆಯೇ ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿಯನ್ನು ಪುನಾರಚಿಸಲಾಗಿದೆ ಎಂದರು.
ಗಂಗೊಳ್ಳಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಮೀನುಗಾರರ ಬೋಟ್ ಬೆಂಕಿ ದುರಂತಕ್ಕೆ 1.75 ಕೋಟಿ ರೂ. ಹಾಗೂ ಶಿರೂರಿನಲ್ಲಿ ಮಳೆಯಿಂದ ಹಾನಿಗೊಳಗಾಗಿದ್ದ ದೋಣಿಗಳಿಗೆ ತಲಾ 1ಲಕ್ಷ ರೂ. ಪರಿಹಾರ ನೀಡಲಾಗುವುದು. ದಕ್ಕೆಯಲ್ಲಿ ಮೀನುಗಾರಿಕೆ ವೇಳೆ ಅವಘಡ ಸಂಭವಿಸಿದರೆ, ವೈದ್ಯಕೀಯ ವೆಚ್ಚದ ಶೇ. 50 ಅಥವಾ ಗರಿಷ್ಠ 3 ಲಕ್ಷ ರೂ. ಪರಿಹಾರ ನೀಡಲು ಕ್ರಮಕ್ಕೆ ಸೂಚಿಸಲಾಗಿದೆ. ಸುಮಾರು 45.5 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಬಂದರು ಅಭಿವೃದ್ಧಿ ಕಾಮಗಾರಿ ಮುಂದಿನ ತಿಂಗಳು ಆರಂಭವಾಗಲಿದೆ ಎಂದರು.
ಅಳಿವೆ ಬಾಗಿಲು ಹೂಳೆತ್ತುವ ಕಾಮಗಾರಿ ಶೇ. 75 ಪೂರ್ಣಗೊಂಡಿದ್ದು, ಶೀಘ್ರವೇ ಮುಗಿಸಲು ಸೂಚಿಸಲಾಗಿದೆ. ಹಳೆ ಬಂದರಿನ ಪ್ರಥಮ ಹಂತದ ಜೆಟ್ಟಿಯನ್ನು 37.5 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಸಾಗರಮಾಲ ಯೋಜನೆಯ 29 ಕೋಟಿ ರೂ. ವೆಚ್ಚದ ಕ್ಯಾಪಿಟಲ್ ಡ್ರೆಜ್ಜಿಂಗ್ ಕಾಮಗಾರಿ ಆರಂಭಿಸಲು ಇರುವ ತೊಡಕು ನಿವಾರಿಸಲು, ಯುವಜನತೆಗೆ ಉದ್ಯೋಗ ಕಲ್ಪಿಸಲು ಅಕ್ವಾ ಪಾರ್ಕ್ ಸ್ಥಾಪಿಸಲು ಸಭೆಯಲ್ಲಿ ಪ್ರಸ್ತಾವಿಸಲಾಗಿದೆ ಎಂದರು.
ಸಣ್ಣ ದೋಣಿ ಮೀನುಗಾರರಿಗೆ ವಾರ್ಷಿಕವಾಗಿ ಸಿಗುವ ಸಬ್ಸಿಡಿ ದರದ ಡೀಸೆಲನ್ನು 9 ಸಾವಿರ ಲೀ. ನಿಂದ 10 ಸಾವಿರ ಲೀಟರ್‌ಗೆ ಏರಿಸಲಾಗಿದೆ. ಹಿಂದಿನ ಕ್ರಮದ ಬದಲಾಗಿ ಸಬ್ಸಿಡಿ ದರದ ಡೀಸೆಲನ್ನು ತಲಾ ಐದು ತಿಂಗಳಿಗೊಮ್ಮೆ 5000 ಲೀಟರ್‌ನಂತೆ ನೀಡಲು ಸೂಚಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಮೀನುಗಾರರ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡಿಸಿದ್ದು, 3 ಸಾವಿರ ಕೋಟಿ ರೂ. ಆನುದಾನ ನೀಡಿದ್ದಾರೆ ಎಂದರು.
ಮಾಜಿ ಉಪಮೇಯರ್ ಕವಿತಾ ವಾಸು, ಪ್ರವಿತಾ ಕರ್ಕೇರ, ರಾಜ್‌ಕುಮಾರ್ ಕೋಟ್ಯಾನ್, ಮಿಥುನ್ ಚಂದನ್, ಪ್ರಸಾದ್ ಮೆಂಡನ್, ಆಲ್ಬರ್ಟ್ ಆಗಸ್ಟಿನ್ ಉಪಸ್ಥಿತರಿದ್ದರು.